ಬೆಂಗಳೂರು: ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲು ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಇಂದಿನಿಂದ ಒಂದು ವಾರದೊಳಗೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಬೇಕು, ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆ ಆಯೋಗ ಬಿಬಿಎಂಪಿ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ಇದರಿಂದಾಗಿ ರಾಜ್ಯ ಸರಕಾರ ಬಿಬಿಎಂಪಿಗೆ ಹಾಗೂ ಆ ಬಳಿಕ ಜಿಲ್ಲಾ, ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ:ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಇಂದು ಸಂಜೆ ಸಿಎಂ ಬೊಮ್ಮಾಯಿ ಭೇಟಿ
ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ವಿಚಾರದಲ್ಲಿ ರಾಜ್ಯ ಸರಕಾರ ಇಕ್ಕಟ್ಟಿಗೆ ಸಿಲುಕಿತ್ತು. ಸುಪ್ರೀಂ ಕೋರ್ಟ್ ಗೆ ವರದಿ ಹಾಗೂ ವಸ್ತು ಸ್ಥಿತಿ ವಿವರ ನೀಡುವುದಕ್ಕೆ ನ್ಯಾ.ಭಕ್ತವತ್ಸಲಂ ಸಮಿತಿ ರಚಿಸಿತ್ತು. ಹಿಂದಿನ ಮೀಸಲು ವಿಧಾನದಲ್ಲೇ ಚುನಾವಣೆ ಎದುರಿಸುವ ಲೆಕ್ಕಾಚಾರ ಸರಕಾರದ್ದಾಗಿತ್ತು. ಆದರೆ ಸುಪ್ರೀಂ ಆದೇಶದ ಬಳಿಕ ಮೀಸಲುಪಟ್ಟಿ ಹೇಗಿರುತ್ತದೆ? ಅದರಲ್ಲಿ ಹಿಂದುಳಿದವರ ಪ್ರಾತಿನಿಧ್ಯ ಎಷ್ಟು? ಎಂಬ ವಿಚಾರ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ಸರ್ಕಾರ ಸಿದ್ದವಿದೆ. ತಕ್ಷಣ ಚುನಾವಣೆ ಘೋಷಣೆ ಮಾಡಲು ಯಾವುದೆ ತೊಂದರೆಯಿಲ್ಲ. ಸುಪ್ರೀಂ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದರು.