Advertisement
ಬೆಳಗಾವಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ “ರಾಜ್ಯದಲ್ಲಿ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ. ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಕಮಿಷನ್ ಹಣ ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಭಾರತದ ಚುನಾವಣಾ ಆಯೋಗ ತಕ್ಷಣವೇ ಮಧ್ಯ ಪ್ರವೇಶಿಸಿ ತಕ್ಷಣವೇ ಚುನಾವಣಾ ದಿನಾಂಕ ಘೋಷಿಸಿ ಚುನಾವಣಾ ನೀತಿ ಸಂಹಿತೆ ಜಾರಿಗೆ ತರಬೇಕು. ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಇನ್ನೊಂದು ಆಪರೇಷನ್ ಕಮಲಕ್ಕೆ ಸಿದ್ಧವಾಗುತ್ತಿದೆ. ಇದಕ್ಕಾಗಿ ಬಿಜೆಪಿಯ ಪ್ರತಿಯೊಬ್ಬ ನಾಯಕರು ಸುಲಿಗೆಗೆ ಇಳಿದಿದ್ದಾರೆ,’ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಮಾತನಾಡಿದ ಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮನೆ ಮತ್ತು ಕಚೇರಿಗಳ ಮೇಲಿನ ಲೋಕಾಯುಕ್ತ ದಾಳಿಯಿಂದ ಈ ಸರ್ಕಾರದ ಬಣ್ಣ ಬಯಲಾಗಿದೆ. ಈಗ ಧಮ್ ಮತ್ತು ತಾಕತ್ತಿದ್ದರೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಬರಲಿ’ ಎಂದು ಸವಾಲು ಹಾಕಿದರು. ಕಾಂಗ್ರೆಸ್‌ನ ಎಲ್ಲ ಆರೋಪಗಳಿಗೆ ದಾಖಲೆಗಳನ್ನು ಕೇಳುತ್ತಿದ್ದ ಬಿಜೆಪಿಗೆ ಲೋಕಾಯುಕ್ತ ದಾಳಿಯಿಂದ ಸ್ಪಷ್ಟ ದಾಖಲೆಗಳು ದೊರೆತಿವೆ. ಈ ಹಿಂದೆ ನಾವು ನಡೆಸಿದ “ಪೇ-ಸಿಎಂ’ ಅಭಿಯಾನ ತಪ್ಪು ಅಂತ ಈಗ ಹೇಳಲಿ ನೋಡೋಣ? ಇದು 40 ಪರ್ಸೆಂಟ್ ಅಲ್ಲ; 60 ಪರ್ಸೆಂಟ್ ಸರ್ಕಾರವಾಗಿದೆ. ಧಮ್ ಮತ್ತು ತಾಕತ್ತಿದ್ದರೆ ಮುಖ್ಯಮಂತ್ರಿ ಸಹಿತ ಇಡೀ ಮಂತ್ರಿಮಂಡಲ ರಾಜೀನಾಮೆ ಕೊಟ್ಟು ಚುನಾವಣೆಗೆ ಬರಲಿ. ನಾವೂ ಸಿದ್ಧವಾಗಿದ್ದೇವೆ’ ಎಂದರು.
Related Articles
Advertisement