ಯಲಹಂಕ: ಹಣದಿಂದಾಗಲಿ, ಸಂಪತ್ತಿನಿಂದಾಗಲೀ ಯಾರಿಗೂ ಹೃದಯ ಶ್ರೀಮಂತಿಕೆಯನ್ನು ತೋರಿಸಲು ಆಗುವುದಿಲ್ಲ. ಪ್ರೀತಿಯಿಂದ ಮಾತ್ರ ನಾವು ಹೃದಯ ಶ್ರೀಮಂತಿಕೆಯನ್ನು ತೋರಿಸಬಹುದು ಎಂದು ಖ್ಯಾತ ಸಾಹಿತಿ ಬೊಳುವಾರು ಮಹಮದ್ ಕುಂಞ ಹೇಳಿದರು.
ಯಲಹಂಕ ಉಪನಗರದ ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋ ಗದೊಂದಿಗೆ ಯಲಹಂಕದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ 20ನೇ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಆ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ನಮ್ಮ ಬದುಕಿನಲ್ಲಿ ನೆಲೆಗೊಳ್ಳಬೇಕೆಂದರೆ ಒಳ್ಳೆಯ ವಾತಾವರಣ ಇರಬೇಕು. ನೋವು ರಹಿತವಾದ ಸಮಾಜ ನಿರ್ಮಾಣವಾಗಬೇಕು ಎಂದರು.
ದಕ್ಷಿಣ ಕನ್ನಡದ ಕೆಲವರು ಬಡ ಮತ್ತು ಹಿಂದುಳಿದ ಅಮಾಯಕ ಯುವಕರನ್ನು ಹಣಗಳಿಸುವ ದುಷ್ಕೃತ್ಯಗಳಿಗೆ ಬಳಸಿ ಕೊಂಡು ಪಾತಕಲೋಕಕ್ಕೆ ತಳ್ಳುತ್ತಿದ್ದಾರೆ. ತಮ್ಮ ಮಕ್ಕಳನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಪೋಷಕರು ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿದರು.
ಈ ಹಿಂದೆ ದಕ್ಷಿಣ ಕನ್ನಡಿಗರು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಕೊಡುಗೆ ನೀಡುವ ಮೂಲಕ ಹೆಸರಾಗಿದ್ದರು. ಆದರೆ ಇತ್ತೀಚೆಗೆ ಇದನ್ನು ಇವರೇ ವ್ಯಾಪಾರೀಕರಣವಾಗಿ ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದೆ ಹಾಗೂ ಚಿತ್ರನಟಿ ಸತ್ಯಭಾಮ ಆರೂರು ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಗೋವಿಂದ ವೆಂಕಪ್ಪಹೆಗ್ಡೆ, ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಯಾನಂದ್ ಸಿ. ಕೊಟ್ಯಾನ್, ಪ್ರಧಾನ ಕಾರ್ಯದರ್ಶಿ ಚಿತ್ರಕಲಾ ರಘುನಾಥ್ ಪೈ, ಉಪಾಧ್ಯಕ್ಷರಾದ ಅಲಂಗಾರು ಬಾಬುಶೆಟ್ಟಿ, ಮಲ್ಲಿಕಾ ಲಕ್ಷ್ಮೀನಾರಾಯಣ ಆಳ್ವ, ಕೋಶಾಧಿಕಾರಿ ಜಯರಾಮಶೆಟ್ಟಿ, ಸಂಘಟನಾ ಕಾರ್ಯದರ್ಶಿ ಅಟ್ಟೂರು ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.