Advertisement

ಅಣ್ಣಿಗೇರಿ: ಸ್ಪೀಡ್‌ ಬ್ರೇಕರ್‌ಗಳಿಂದ ಬೇಸತ್ತ ಸವಾರರು

04:09 PM Jun 17, 2023 | Team Udayavani |

ಅಣ್ಣಿಗೇರಿ: ಪಟ್ಟಣದ ಯಾವುದೇ ಓಣಿಗಳಲ್ಲಿ ಸಂಚರಿಸಿದರೂ ಸವಾರರಿಗೆ ಮೊದಲು ಕಾಣುವುದೇ ರಸ್ತೆಗೆ ಅಡ್ಡಲಾಗಿ ಹಾಕಿರುವ ಸ್ಪೀಡ್‌ ಬ್ರೇಕರ್‌ಗಳು. ಇದರಿಂದ ಬೇಸತ್ತ ವಾಹನ ಸವಾರರು ಪುರಸಭೆ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಪುರಸಭೆ ವ್ಯಾಪಿಯಲ್ಲಿ 23 ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ಗಳ ಮುಖ್ಯರಸ್ತೆಗಳಲ್ಲಾಗಲಿ ಅಥವಾ ಒಳರಸ್ತೆಗಳಲ್ಲಾಗಲಿ ಅವೈಜ್ಞಾನಿಕವಾಗಿ ಹಾಕಲಾದ ಸ್ಪೀಡ್‌ ಬ್ರೇಕರ್‌ಗಳಿಂದ ಬೈಕ್‌, ಟ್ರ್ಯಾಕ್ಟರ್‌ ಹಾಗೂ ಇನ್ನಿತರ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಅನವಶ್ಯಕ ಸ್ಪೀಡ್‌ ಬ್ರೇಕರ್‌ಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ನಿಜವಾಗಿಯೂ ಅನುಕೂಲವೇ?: ಇತ್ತೀಚೆಗೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗತ್ತಿರುವ ಸ್ಪೀಡ್‌ ಬ್ರೇಕರ್‌ಗಳನ್ನು ನಿಯಂತ್ರಿಸಲು ಪುರಸಭೆ ಆಡಳಿತ ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ನೂತನ ಡಾಂಬರೀಕ ರಣಗೊಂಡ ರಸ್ತೆಗಳಲ್ಲಿ ಸಾರ್ವಜನಿಕರ ಹಿತಾಸಕ್ತಿಯಿಂದ ಸ್ಪೀಡ್‌ ಬ್ರೇಕರ್‌ಗಳನ್ನು ಹಾಕುತ್ತಿದ್ದಾರೆ ನಿಜ. ಆದರೆ ಅವುಗಳು ವೈಜ್ಞಾನಿಕವಾಗಿವೆಯೇ? ಅಥವಾ ಅವೈಜ್ಞಾನಿಕವಾಗಿವೆಯೇ? ಸವಾರರಿಗೆ ಎಷ್ಟು ಅನುಕೂಲ, ಎಷ್ಟು ಅನಾನುಕೂಲವಾಗಿವೆ ಎಂಬುದನ್ನು ಪರಿಶೀಲನೆ ಮಾಡದೆ ಕಣ್ಮುಚ್ಚಿ ಕುಳಿತಿದೆ ಪುರಸಭೆ ಆಡಳಿತ.

ರಸ್ತೆಗಳ “ಜೀವನ’ಕ್ಕೆ “ಜಲ’ಗಂಡ: ಪಟ್ಟಣದಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ನಳಗಳನ್ನು ಅಳವಡಿಸಲು ರಸ್ತೆಗೆ ಅಡ್ಡಲಾಗಿ ಅಗೆದು ಮನೆಗಳಿಗೆ ನಳಗಳ ಜೋಡಣೆ ಮಾಡಿದ್ದಾರೆ. ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚುವ ಕೆಲಸ ಮಾಡದ್ದರಿಂದ ಪಟ್ಟಣದಲ್ಲಿನ ಡಾಂಬರೀಕರಣಗೊಂಡ ಹಾಗೂ ಕಾಂಕ್ರೀಟ್‌ ರಸ್ತೆಗಳು ಸಂಪೂರ್ಣ ಹಾಳಾಗಿ ತೆಗ್ಗು ಗುಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ. ಇಲ್ಲಿಯೂ
ಸಹ ಪುರಸಭೆ ಆಡಳಿತ ಗುತ್ತಿಗೆ ಪಡೆದ ಗುತ್ತಿಗೆದಾರನಿಂದ ಸರಿಯಾಗಿ ಕೆಲಸ ಮಾಡಿಸುವಲ್ಲಿ ವಿಫಲವಾಗಿದೆ.

ಮನವಿ ಕೊಟ್ಟು ಕೊಟ್ಟು ಬೇಸತ್ತ ಜನ:
ಪಟ್ಟಣದ ಸಾರ್ವಜನಿಕರು ಈ ಹಿಂದೆ 2020ರ ಅಕ್ಟೋಬರ್‌ನಲ್ಲಿ ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಹಾಗೂ ಅನವಶ್ಯಕ ಸ್ಪೀಡ್‌ ಬ್ರೇಕರ್‌ಗಳ ಕುರಿತು ಪುರಸಭೆ ಆಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಜನ ಲೋಕಾಯುಕ್ತರಿಗೆ ಕಳೆದ ಫೆಬ್ರವರಿಯಲ್ಲಿ ಮನವಿ ಸಲ್ಲಿಸಿದ್ದರು. ಇದಕ್ಕೆ ಲೋಕಾಯುಕ್ತ ಕಚೇರಿಯಿಂದ ಪುರಸಭೆ ಆಡಳಿತಕ್ಕೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಪುರಸಭೆ
ಆಡಳಿತ ಸುಮ್ಮನೆ ಕುಳಿತಿದೆ.

Advertisement

ಪುರಸಭೆ ವ್ಯಾಪ್ತಿಗೆ ಒಳಪಡುವ ರಸ್ತೆಗಳಲ್ಲಿ ಅತಿಯಾಗಿ ರೋಡ್‌ ಬ್ರೇಕರ್‌ಗಳನ್ನು ಹಾಕುತ್ತಿದ್ದಾರೆ. ರೋಡ್‌ ಬ್ರೇಕರ್‌ ಹಾಕುವುದಾದರೆ ನಿಯಮಾನುಸಾರ ಸವಾರರಿಗೆ ತೊಂದರೆಯಾಗದಂತೆ ಹಾಕಲಿ. ಅನವಶ್ಯಕ ರೋಡ್‌ ಬ್ರೇಕರ್‌ಗಳನ್ನು ಪುರಸಭೆ
ಆಡಳಿತ ತೆರವು ಮಾಡಬೇಕು.
ಮಹಾಂತೇಶ ನಾವಳ್ಳಿ, ಸ್ಥಳೀಯ ನಿವಾಸಿ

ರಸ್ತೆಗಳೆಲ್ಲ ಜೆಜೆಎಂಗೆ ಬಲಿಯಾಗಿವೆ. ಪಟ್ಟಣದ ಒಂದೇ ಒಂದು ರಸ್ತೆ ಸರಿಯಾಗಿಲ್ಲ. ಸರಿ ಮಾಡುವ ಕೆಲಸವನ್ನು ಮಾಡುತ್ತಿಲ್ಲ. ಬೈಕ್‌ ಚಲಾಯಿಸುವುದಕ್ಕೆ ತೊಂದರೆಯಾಗುತ್ತಿದೆ.
ಪ್ರಸಾದ ಹೂಗಾರ, ವಾಹನ ಸವಾರ

ಪಟ್ಟಣದಲ್ಲಿ ಹಾಕಲಾಗಿರುವ ಸ್ಪೀಡ್‌ ಬ್ರೇಕರ್‌ಗಳ ಕುರಿತು ಪರಿಶೀಲನೆ ಮಾಡುತ್ತೇನೆ. ಜಲಜೀವನ ಮಿಷನ್‌ ಯೋಜನೆ ಅಡಿ ಮನೆಮನೆಗೆ ನಳಗಳ ಜೋಡಣೆಗೆ ಅಗೆದ ರಸ್ತೆಗಳನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಹೇಳಲಾಗಿದೆ.
ಡಾ| ಎಸ್‌.ಆರ್‌. ರೋಗಿ, ಮುಖ್ಯಾಧಿಕಾರಿ

ರಾಜೇಶ ಮಣ್ಣಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next