Advertisement

ಅನ್ನ ಮೂಲ ಆರ್ಥಿಕ ನೀತಿ ಅತ್ಯಗತ್ಯ

12:43 PM Oct 25, 2018 | Team Udayavani |

ಬೆಂಗಳೂರು: ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಣ ಮೂಲ ಆರ್ಥಿಕ ನೀತಿ ಬದಲು ಜನಸಂಖ್ಯೆ ಹಾಗೂ ಉದ್ಯೋಗಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅನ್ನ ಮೂಲ ಆರ್ಥಿಕ ನೀತಿ ರೂಪಿಸಬೇಕಾದ ಅವಶ್ಯಕತೆಯಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ರಾಜ್ಯ ಸಮಿತಿ ವತಿಯಿಂದ ಕೆಇಬಿ ಇಂಜಿನಿಯರಿಂಗ್‌ ಅಸೋಸಿಯೇಷನ್ಸ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಖಾಯಮೇತರ ಕೆಲಸಗಳು- ಉದ್ಯೋಗದ ಹಕ್ಕು’ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ ನಮ್ಮಲ್ಲಿ ಹಣ ಮೂಲ ಆರ್ಥಿಕ ನೀತಿ ಚಾಲ್ತಿಯಲ್ಲಿದೆ. ಹಣ ದುಪ್ಪಟ್ಟುಗೊಳಿಸುವ ಕಾಲಚಕ್ರದಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಆದರೆ, ಶ್ರಮಕ್ಕೆ ಪ್ರತಿಫ‌ಲವಾಗಿರುವ ಅನ್ನ, ಮೂಲಸೌಕರ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಆರ್ಥಿಕ ನೀತಿ ನಮಗೆ ಬೇಕಾಗಿದೆ.

ಆದ್ದರಿಂದ ಹಣ ಮೂಲದ ಆರ್ಥಿಕ ನೀತಿಯ ಬದಲಿಗೆ ಅನ್ನ ಮೂಲ ಆರ್ಥಿಕ ನೀತಿ ರೂಪಿಸುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಒಂದೆಡೆ ನಿರುದ್ಯೋಗ ಹೆಚ್ಚುತ್ತಿದ್ದರೆ, ಮತ್ತೂಂದಡೆ ಉದ್ಯೋಗದಲ್ಲಿರುವರಿಗೆ ಖಾಯಂಮಾತಿ ಇಲ್ಲವಾಗಿದೆ. ಜಾಗತೀಕರಣದ ಹೆಸರಿನಲ್ಲಿ ಬಂದ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯೇ ಇದಕ್ಕೆ ಕಾರಣ. ಖಾಸಗಿಕರಣದಲ್ಲಿ ಹೆಚ್ಚು ದಕ್ಷತೆಯಿದೆ ಎಂಬ ನಂಬಿಕೆ ಹುಟ್ಟಿಸಿ ಅದನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಶ್ರಮ ಮತ್ತು ಸಾಮರ್ಥಯವನ್ನು ಅವಗಣಿಸುವ ವಿದೇಶಿ ಪ್ರಭಾವದ ಹಣ ಮೂಲ ಆರ್ಥಿಕ ನೀತಿ ಬದಲು ನಮಗೇ ನಮ್ಮದೇ ಆದ ಅನ್ನ ಮೂಲ ಆರ್ಥಿಕ ನೀತಿ ಬೇಕು ಎಂದು ಹೇಳಿದರು.

ವಿದೇಶಿ ಬಂಡವಾಳ ಹೂಡಿಕೆಯ ಪರಿಣಾಮ ದೇಶದ ರಕ್ಷಣಾ ಇಲಾಖೆ ಸೇರಿದಂತೆ ಹಲವು ಪ್ರಮುಖ ವಲಯಗಳನ್ನು ವಿದೇಶಿಗರು ನೇರವಾಗಿ ಗುತ್ತಿಗೆ ಪಡೆದಿದ್ದಾರೆ. ಜಾಗತೀಕರಣದ ಪ್ರಭಾವದಿಂದಲೇ ಈ ಗುತ್ತಿಗೆ ಪದ್ದತಿ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು. ವಿದೇಶಿ ನೇರ ಬಂಡವಾಳ ಹೂಡಿಕೆ ಎಂಬ ಪೆಡಂಭೂತದಲ್ಲಿ ಕಾರ್ಮಿಕರಷ್ಟೇ ಅಲ್ಲ, ಇಡೀ ದೇಶ ಗುತ್ತಿಗೆಯಲ್ಲಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇತ್ತೀಚಿನ ಕಾಲಮಾನದಲ್ಲಿ ಮಾನವ ಶಕ್ತಿ ಕಡಿಮೆಗೊಳಿಸುವ ತಂತ್ರಜ್ಞಾನ ಬಳಕೆಗೆ ನಾವು ಒತ್ತು ಕೊಡುತ್ತಿದ್ದೇವೆ. ಹಾಗಂತ ತಂತ್ರಜ್ಞಾನ ಮತ್ತು ಆಧುನಿಕತೆಯ ವಿರೋಧಿಗಳು ಎಂದು ಭಾವಿಸಬೇಕಿಲ್ಲ. ಆದರೆ, ಖಾಸಗೀಕರಣದಿಂದಲೇ ದೇಶ ಪ್ರಗತಿ ಸಾಧಿಸಲಿದೆ ಎಂಬ ವಾದವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರ “ನೋಟು ಅಮಾನ್ಯ’ದ ಪರಿಣಾಮ ದೇಶದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ನಷ್ಟ ಅನುಭವಿಸಿದವು, ಇದರಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು. ಇದಕ್ಕೆಲ್ಲ ದೊಡ್ಡ ಬಂಡವಾಳಶಾಹಿಗಳು ಕಾರಣ. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ವರದಿಯೇ ಇದಕ್ಕೆ ಸಾಕ್ಷಿ. ಹಾಗಾಗಿ ನೋಟು ಅಮಾನ್ಯದಿಂದ ನಷ್ಟವೇ ಆಗಿದೆ. ದೇಶದ ಶಿಕ್ಷಣ ಕ್ಷೇತ್ರದಲ್ಲಿಯೆ 50 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ನೀತಿ ರೂಪಿಸಬೇಕು ಎಂದರು. ವಿಚಾರಸಂಕಿರಣದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next