ಮೈಸೂರು: ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರೇ ತಮಗೆ ಸ್ಪೂರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 102ನೇ ಜಯಂತಿ ಮಹೋತ್ಸವ ಹಾಗೂ ರಾಜೇಂದ್ರ ಶ್ರೀಗಳ ಪುತ್ಥಳಿ ನಿರ್ಮಾಣದ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊಡುಗೆ: ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸದಾ ಸಮಾಜಮುಖೀ ಚಿಂತನೆಗಳನ್ನು ಹೊಂದಿದ್ದರು. ಅಲ್ಲದೆ ಸಮಾಜದ ಸಾಮಾಜಿಕ ಬದಲಾವಣೆಗೆ ಶಿಕ್ಷಣ ಮುಖ್ಯವಾಗಿದ್ದು, ಸಮಾಜದಲ್ಲಿನ ಮೌಡ್ಯ, ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಂಬುದನ್ನು ಅರಿತಿದ್ದ ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ದಸೋಹ: ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕೇಂದ್ರಗಳು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್‌ಗಳನ್ನು ರಾಜೇಂದ್ರ ಶ್ರೀಗಳು ಆರಂಭಿಸಿದ್ದರು. ಯಾವುದೇ ವಿದ್ಯಾರ್ಥಿ ಉತ್ತಮ ಶಿಕ್ಷಣ ಪಡೆಯಲು ದೈಹಿಕ,ಮಾನಸಿಕವಾಗಿ ಆರೋಗ್ಯವಾಗಿರಬೇಕು. ಈ ಹಿನ್ನೆಲೆಯಲ್ಲಿ ಬಡಕುಟುಂಬಗಳ ಮಕ್ಕಳಿಗೆ ಶಿಕ್ಷಣದ ಜತೆಗೆ ಊಟವನ್ನು ಒದಗಿಸುವ ಕಾರ್ಯಕ್ರಮವನ್ನೂ ಅವರು ಕೈಗೊಂಡಿದ್ದರು. ಆ ಮೂಲಕ ದಾಸೋಹಕ್ಕೂ ಆದ್ಯತೆ ನೀಡಿದರು. ಹೀಗಾಗಿ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅನ್ನಭಾಗ್ಯ ಹಾಗೂ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಇದಕ್ಕೆ ರಾಜೇಂದ್ರ ಸ್ವಾಮೀಜಿ ಅವರೇ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.
ಶಿಕ್ಷಣಕ್ಕೆ ಆದ್ಯತೆ: ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪಮಾತನಾಡಿ, 20ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಡ್ಯ ಹಾಗೂ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ ರಾಜೇಂದ್ರ ಶ್ರೀಗಳು, ತಮ್ಮ ಬಳಿಯಿದ್ದ ಚಿನ್ನದ ಕರಡಿಕೆ, ಚಿನ್ನ ಲೇಪಿತ ರುದ್ರಾಕ್ಷಿಗಳನ್ನ ಮಾರಾಟ ಮಾಡಿ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸಿದ್ದಾರೆ.
ಒಪ್ಪಿಗೆ: ನಗರದಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀಗಳ ಪುತ್ಥಳಿ ನಿರ್ಮಾಣ ಸಂಬಂಧ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ನಡುವೆ ಯಾವುದೇ ಪುತ್ಥಳಿಗಳನ್ನು ನಿರ್ಮಾಣ ಮಾಡದಂತೆ ಸುಪ್ರೀಂಕೋರ್ಟ್ ಆದೇಶವನ್ನು ಹೊರಡಿಸಿತ್ತು. ಹೀಗಿದ್ದರೂ ಶಿವರಾತ್ರಿ ರಾಜೇಂದ್ರ ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅರಿತಿದ್ದ ಮುಖ್ಯಮಂತ್ರಿಗಳು ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣಕ್ಕೆ ಒಪ್ಪಿಗೆ ನೀಡಿದರು ಎಂದರು.
ತ್ಯಾಗ: ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಯುದ್ಧಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಇಂತಹ ಗಂಭೀರ ಸನ್ನಿವೇಶದಲ್ಲಿ ಶಾಂತಿಯ ಸಂದೇಶ ಸಾರುವ ಮಠ, ಮಾನ್ಯಗಳ ಅಗತ್ಯವಿದೆ. ಕೆಲವೇ ಮಂದಿ ಮಾತ್ರ ತಮ್ಮ ತ್ಯಾಗದ ಗುಣದಿಂದ ಹೆಸರಾಗುತ್ತಾರೆ. ಅಂಥವರು ಇತಿಹಾಸ ಸೃಷ್ಟಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀಡುವ ಸಲುವಾಗಿ ರಾಜೇಂದ್ರ ಸ್ವಾಮೀಜಿಗಳು ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ಎಚ್.ಪಿ.ಮಂಜುನಾಥ್, ಗೀತಾ ಮಹದೇವಪ್ರಸಾದ್, ಕಳಲೆ ಕೇಶವಮೂರ್ತಿ, ಎಚ್.ಎಂ.ರೇವಣ್ಣ, ಕೆ.ವೆಂಕಟೇಶ್, ಆರ್. ಧರ್ಮಸೇನ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಉಮೇಶ್ ಜಾಧವ್, ಮೇಯರ್ ಎಂ.ಜೆ.ರವಿಕುಮಾರ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಮತ್ತಿತರರು ಹಾಜರಿದ್ದರು.
ಶಿಲಾನ್ಯಾಸ: ರಾಜೇಂದ್ರ ಶ್ರೀಗಳ ಶತಮಾನೋತ್ಸವ ಚಿತ್ರಸಂಪುಟ, ಪ್ರಸಾದ ವಿಶೇಷ ಸಂಚಿಕೆ ಹಾಗೂ ಜೆಎಸ್‌ಎಸ್ ವಾರ್ತಾಪತ್ರ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಲಾಯಿತು. ಇದನ್ನೂ ಮುನ್ನ ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತ (ಗೌನ್‌ಹೌಸ್ ವೃತ್ತ)ದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪಂಚಲೋಹದ 11 ಅಡಿ ಎತ್ತರದ ರಾಜೇಂದ್ರ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿದರು.