ಕಾಪು: ಕೇಂದ್ರದಲ್ಲಿ ಮತ್ತೆ ಮೋದಿ ಮೋಡಿ ಮುಂದುವರಿಯಲಿದ್ದು, 2023ರ ಚುನಾವಣೆಯಲ್ಲಿ 400ಕ್ಕೂ ಅಧಿಕ ಸಂಸದರೊಂದಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ. ಮುಂದಿನ ಅವಧಿಯ ಲೋಕಸಭೆಯಲ್ಲಿ ತಮಿಳುನಾಡಿನ ಬಿಜೆಪಿ ಸಂಸದರೂ ಸರಕಾರದ ಭಾಗವಾಗಿ ಕೈಜೋಡಿಸಲಿದ್ದಾರೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ / ನಿವೃತ್ತ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಹೇಳಿದರು.
ಕಾಪು ಪುರಸಭಾ ಚುನಾವಣೆಯ ಪ್ರಯುಕ್ತ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಮಾದರಿಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುತ್ತಿದ್ದು ಎಲ್ಲಾ ಪಕ್ಷಗಳಿಗೂ ಪರ್ಯಾಯವಾಗಿ ಅಲ್ಲಿ ಬಿಜೆಪಿ ಬೆಳೆಯುತ್ತಿದೆ. ಅಲ್ಲಿನ ಹಲವು ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳ ಸಹಿತವಾಗಿ ವಿವಿಧ ಅಧಿಕಾರಿಗಳು ಮತ್ತು ಮಾಜಿ ಶಾಸಕ, ಸಂಸದರ ಸಹಿತವಾಗಿ ನೂರಾರು ಮಂದಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಐಪಿಎಸ್ ವೃತ್ತಿಗೆ ರಾಜೀನಾಮೆ ನೀಡಿದ ರಾಷ್ಟ್ರೀಯತೆಯ ಬಗ್ಗೆ ಒಲವು ತೋರಿಸಿ ಬಿಜೆಪಿಗೆ ಸೇರಿದ್ದು, ರಾಷ್ಟ್ರೀಯತೆಯನ್ನು ಉಳಿಸ, ಬೆಳೆಸಲು ಬಿಜೆಪಿಯಿಂದ ಮಾತ್ರಾ ಸಾಧ್ಯ. ಬಿಜೆಪಿಯಲ್ಲಿ ಮಾತ್ರಾ ಸಂಘಟನಾತ್ಮಕ ವಿಚಾರಗಳು, ಹೊಸ ನಾಯಕರ ಸೃಷ್ಠಿ ಮತ್ತು ಯುವಕರ ಬೆಂಬಲ ಪಡೆಯಲು ಸಾಧ್ಯವಿದೆ. ಅದಕ್ಕೇ ಅನುಗುಣವಾಗಿ ನರೇಂದ್ರ ಮೋದಿಯವರ ನೇತೃತ್ವವೂ ಬಿಜೆಪಿಗೆ ವಿಶೇಷ ಬಲವನ್ನು ತುಂಬಿದೆ. ಎಲ್ಲರೂ ಜೊತೆಗೂಡಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸೋಣ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಮೋಡ್‌ನಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತದಲ್ಲಿದ್ದು ಎರಡೂ ಸರಕಾರಕ್ಕೆ ಮತ್ತಷ್ಟು ಬಲ ಬರಬೇಕಾದರೆ ಹಳ್ಳಿ ಹಳ್ಳಿಗಳಲ್ಲೂ ಬಿಜೆಪಿಗೆ ಅಧಿಕಾರ ದೊರಕಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಬಿಜೆಪಿ ಆಡಳಿವಿದ್ದು, ಕಾಪು ಪುರಸಭೆಯಲ್ಲೂ ಬಿಜೆಪಿಗೆ ಅಧಿಕಾರ ದೊರಕಬೇಕಿದೆ. ಅಭ್ಯರ್ಥಿಗಳು ಯಾರೇ ಇರಲಿ, ಪಕ್ಷದ ಗೆಲುವೊಂದೇ ನಮ್ಮ ಗುರಿ ಎಂಬ ಧ್ಯೇಯದೊಂದಿಗೆ ಕಾರ್ಯಕರ್ತರು ಹಗಲಿರುಳು ಶ್ರಮ ವಹಿಸಿ, ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಇದನ್ನೂ ಓದಿ : ಮದುವೆ ವಯಸ್ಸು ಏರಿಕೆ: ಮರುಪರಿಶೀಲನೆಗೆ ಕೇಂದ್ರ ಚಿಂತನೆ
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಪಿ. ಶೆಟ್ಟಿ ಗುರ್ಮೆ, ಗೀತಾಂಜಲಿ ಎಂ. ಸುವರ್ಣ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಚುನಾವಣಾ ಪ್ರಬಾರಿ ಕಿರಣ್ ಕುಮಾರ್ ಕೊಡ್ಗಿ, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಪಕ್ಷದ ಪ್ರಮುಖರಾದ ಗಂಗಾಧರ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿಜಯಕುಮಾರ್ ಉದ್ಯಾವರ, ಸುರೇಂದ್ರ ಪಣಿಯೂರು, ಗೋಪಾಲಕೃಷ್ಣ ರಾವ್, ಸಂದೀಪ್ ಶೆಟ್ಟಿ, ಸುಮಾ ಯು. ಶೆಟ್ಟಿ, ಉದಯ್ ಶೆಟ್ಟಿ ಇನ್ನಾ, ರೇಷ್ಮಾ ಶೆಟ್ಟಿ, ಶಶಿಪ್ರಭಾ ಶೆಟ್ಟಿ , ಸಚಿನ್ ಸುವರ್ಣ ಪಿತ್ರೋಡಿ ಮೊದಲಾದವರು ಉಪಸ್ಥಿತರಿದ್ದರು.