ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ರೈತರ ಪಾಲಿಗೆ ನಿರಾಶ ದಾಯಕವಾಗಿದೆ. ಇದೊಂದು ಗಿಮಿಕ್ ಬಜೆಟ್ ಎಂದು ನಂಜನಗೂಡು ಉಪಚುನಾವಣೆ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನ್ನದಾತರಿಗೆ ಅನ್ಯಾಯ ಎಸಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೆ ಬರದಿಂದ ಸಂಕಷ್ಟದಲ್ಲಿರುವ ರೈತ ಸಾಲಮನ್ನಾ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರಿಗೆ ರೈತರಿಗೆ ಯಾವುದೇ ಯೋಜನೆ ಘೋಷಿಸದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅರ್ಧ ಸಾಲಮನ್ನಾ ಮಾಡಬೇಕಿತ್ತು: ಬಜೆಟ್‌ನಲ್ಲಿ ಕನಿಷ್ಠ ರೈತರ ಅರ್ಧ ಸಾಲವನ್ನಾದರೂ ಮನ್ನಾ ಮಾಡಬೇಕಿತ್ತು. ಬೇರೆ ಇಲಾಖೆಗಳಿಗೆ ತುಸು ಅನುದಾನ ಕಡಿತ ಮಾಡಿ, ಈ ಹಣವನ್ನು ಸಾಲಮನ್ನಾಕ್ಕೆ ಬಳಸಿ ರೈತ ಸಮುದಾಯವನ್ನು ಉಳಿಸಬೇಕಿತ್ತು. ಕೇವಲ ರೈತರಿಗಾಗಿ ಮೊಸಳೆ ಕಣ್ಣೀರು ಹಾಕುವ ಈ ಮಹಾಶಯರಿಗೆ ಇದು ಅರ್ಥವಾಗಬೇಕಲ್ಲವೇ ಎಂದು ಕುಟುಕಿದರು
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 49 ತಾಲೂಕುಗಳ ಪೈಕಿ 43 ತಾಲೂಕುಗಳ ಘೋಷಣೆ ಮಾಡಲಾಗಿತ್ತು. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನೂ ಇಲ್ಲ. ಚಾಮರಾಜನಗರ, ದಾವಣಗೆರೆ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಉಪವಿಭಾಗಗಳ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ ಎಂದು ದೂರಿದರು. ಸಿದ್ದರಾಮಯ್ಯ ಮಂಡಿಸಿರುವ ಈ ಬಜೆಟ್‌ನಲ್ಲಿನ ಯೋಜನೆಗಳು ಕಾರ್ಯಗತಗೊಳ್ಳಲು ಕನಿಷ್ಠ ನಾಲ್ಕು ವರ್ಷ ಬೇಕಿದೆ. ಕಂದಾಯ ಇಲಾಖೆಯ ಡಿ ಗ್ರೂಪ್ ನೌಕಕರ ಕುರಿತು ಪ್ರಸ್ತಾಪವಾಗಿಲ್ಲ ಎಂದು ತಿಳಿಸಿದರು.
ಇದುವರೆಗೂ ನಾಮಪತ್ರ ಸಲ್ಲಿಕೆಯಿಲ್ಲ: ನಂಜನಗೂಡು ಉಪ ಚುನಾವಣೆಗೆ ಇದುವರೆಗೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಮಂಗಳವಾರದಿಂದ ನಾಮಪತ್ರ ಸ್ವೀಕರಿಸಲು ಚುನಾವಣಾಧಿಕಾರಿ ಜಿ. ಜಗದೀಶ ಕಾದು ಕುಳಿತ್ತಿದ್ದು, ಗುರುವಾರವೂ ಯಾರೂ ನಾಮಪತ್ರ ಸಲ್ಲಿಸಲು ಕಚೇರಿಗೆ ಆಗಮಿಸಲಿಲ್ಲ. ಗುರುವಾರ 6 ನಾಮಪತ್ರದ ಅರ್ಜಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ದಯಾನಂದ್ ತಿಳಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಸೋಮವಾರ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.