Advertisement

ಅಧೀಕ್ಷಕ ಅಭಿಯಂತರರಿಗೆ ಅನ್ನದಾತರ ಘೇರಾವ್‌

12:20 PM Dec 03, 2018 | |

ಆಲಮಟ್ಟಿ: ನಮಗೆ ನೀರು ಕೊಡಿ ಇಲ್ಲವೇ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ತಿಮ್ಮಾಪುರ ಏತನೀರಾವರಿ ಯೋಜನೆಯ ರೈತರು ಇಲ್ಲಿಯ ಅಧೀಕ್ಷಕ ಅಭಿಯಂತರರಿಗೆ ಘೇರಾವ್‌ ಹಾಕಿ ಒತ್ತಾಯಿಸಿದರು.

Advertisement

ಮುಂಗಾರು ಹಂಗಾಮಿನ ಕೃಷ್ಣಾಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನಮ್ಮ ಜಮೀನುಗಳಿಗೆ ಕಾಲುವೆ ನೀರು ಪೂರೈಸಲಿಲ್ಲ. ಹಿಂಗಾರು ಹಂಗಾಮಿಗೂ ನೀರು ಬರುತ್ತಿಲ್ಲ. ಆದ್ದರಿಂದ ನಮಗೆ ವೈಜ್ಞಾನಿಕ ಬೆಳೆ ಪರಿಹಾರ ನೀಡಿ ಇಲ್ಲವೇ ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿ.ಸಿ-1ಕಾಲುವೆಗೆ ನೀರು ಹರಿಸಿ ಎಂದು ರೈತರು ಒಕ್ಕೊರಲಿನಿಂದ ಆಲಮಟ್ಟಿ ಅಣೆಕಟ್ಟು ಅಧೀಕ್ಷಕ ಅಭಿಯಂತರರ ಕಚೇರಿ ಆವರಣದಲ್ಲಿ ಅವರ ವಾಹನ ತಡೆದು ಪ್ರತಿಭಟಿಸಿದರು. 

ತಿಮ್ಮಾಪುರ ಏತನೀರಾವರಿ ಯೋಜನೆ ವ್ಯಾಪ್ತಿಯ ಬಾಗಲಕೋಟೆ ತಾಲೂಕಿನ ಬೈರಮಟ್ಟಿ, ಇಂಗಳಗಿ ಹಾಗೂ ಬಸರೀಕಟ್ಟಿ ಗ್ರಾಮಗಳಿಗೆ ಎರಡೂ ಹಂಗಾಮಿನಲ್ಲಿ ಸಮರ್ಪಕ ನೀರು ಹರಿಯದೇ ಇರುವುದರಿಂದ ಜನ-ಜಾನುವಾರುಗಳು ಚಳಿಗಾಲದಲ್ಲಿಯೇ ನೀರಿಗಾಗಿ ಪರದಾಡುವಂತಾಗಿದೆ.

ಇನ್ನು ಬೇಸಿಗೆಯಲ್ಲಿ ಆ ಭಾಗದ ರೈತರು ಜಾನುವಾರುಗಳ ನೀರು ಹಾಗೂ ಮೇವಿಗಾಗಿ ಗುಳೆ ಹೋಗುವ ಪರಿಸ್ಥಿತಿ ಒದಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯವನ್ನು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಮಧ್ಯಭಾಗದಲ್ಲಿ ನಿರ್ಮಿಸಿ ಸುಮಾರು 123 ಟಿಎಂಸಿ ಅಡಿ ನೀರು ಸಂಗ್ರಹಿಸುತ್ತಿದ್ದರೂ ಕೂಡ ಅವಳಿ ಜಿಲ್ಲೆಯ ರೈತರ ಜಮೀನಿಗೆ ನೀರು ಕೊಡುವದಿಲ್ಲವೆಂದರೆ ಹೇಗೆ? ಅವಳಿ ಜಿಲ್ಲೆಯ ಲಕ್ಷಾಂತರ ಎಕರೆ ಜಮೀನು ಹಾಗೂ ನೂರಾರು ಗ್ರಾಮಗಳ ಕೃಷ್ಣಾಮೇಲ್ದಂಡೆ ಯೋಜನೆಗಾಗಿ ಸ್ವಾ ಧೀನಪಡಿಸಿಕೊಂಡು ಸಂತ್ರಸ್ತರನ್ನಾಗಿ ಮಾಡಿ, ನೆಲೆಯೇ ಇಲ್ಲದ ಊರಿಗೆ ಹೋಗಿರುವ ನಮ್ಮ ಸಹೋದರರು ಅವರ ತ್ಯಾಗವನ್ನಾದರೂ ಮನಗಂಡು ಸರ್ಕಾರ ಈ ಭಾಗದ ರೈತರಿಗೆ ಎರಡೂ ಹಂಗಾಮಿಗೆ ನೀರು ಒದಗಿಸಬೇಕು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನಮ್ಮ ಕಾಲುವೆಗಳಿಗೆ ನೀರು ಒದಗಿಸಬೇಕಾಗಿತ್ತಾದರೂ ಆಲಮಟ್ಟಿ ಬಲದಂಡೆ ಕಾಲುವೆಯ ಮುಖ್ಯಸ್ಥಾವರ (ಜಾಕ್‌ವೆಲ್‌)ದಲ್ಲಿ ವಿದ್ಯುತ್‌ ಅವಘಡದಿಂದ ತಿಂಗಳುಗಟ್ಟಲೇ ನೀರೆತ್ತುವ ಪಂಪ್‌ಗ್ಳು ಸ್ಥಗಿತಗೊಂಡಿದ್ದವು. ಅದರಿಂದ ಕಾಲುವೆಗಳಿಗೆ ನೀರು ಹರಿಯಲಿಲ್ಲ. 

Advertisement

ಕೊನೆಗೆ ನ್ಯಾಯೋಚಿತವಾಗಿ ಕೊಡಬೇಕಾದ ನೀರನ್ನಾದರೂ ಕೊಡಬೇಕಲ್ಲವೇ?. ನ.25ರಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದರೂ ಕೂಡ ಇನ್ನುವರೆಗೂ ನಮ್ಮ ಗ್ರಾಮಗಳಿಗೆ ನೀರು ತಲುಪಿಲ್ಲ. ಆದ್ದರಿಂದ ನೀರಾವರಿ ನಿಯಮದಂತೆ ಮೊದಲು ಕಾಲುವೆಯ ಕೊನೆಯಂಚಿನ ರೈತರ ಜಮೀನಿಗೆ ನೀರೊದಗಿಸಬೇಕಾಗಿತ್ತು. ಆದರೆ ಅಧಿಕಾರಿಗಳ ನೀರು ನಿರ್ವಹಣಾ ವ್ಯವಸ್ಥೆಯಲ್ಲಿ ವಿಫಲವಾಗಿದ್ದರ ಪರಿಣಾಮ ಕಾಲುವೆಯ ಕೊನೆಯಂಚಿನ ಗ್ರಾಮಗಳಿಗೆ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿದರು.

ನಂತರ ರೈತರನ್ನು ಸಮಾಧಾನ ಮಾಡಿದ ಅಧೀಕ್ಷಕ ಅಭಿಯಂತರ್‌ ಎಸ್‌.ಎಂ.ಜೋಶಿಯವರು, ಈ ಕುರಿತು ಈಗಾಗಲೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಅಧ್ಯಕ್ಷರ ಆದೇಶದ ಮೇರೆಗೆ ಡಿ.4ರವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು. ಆದ್ದರಿಂದ ನಿರ್ವಹಣಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವೆಂಕಟೇಶ ಹಳ್ಳೂರ, ಬಸವರಾಜ ಬಳೂಲದ, ಪ್ರಭು ಅಳವಂಡಿ, ಗುರುಬಸಪ್ಪ ವಡ್ಡರಕಲ್ಲ, ರಾಮಣ್ಣ ಮೂಕಿ, ರಾಮನಗೌಡ ಮೇಟಿ, ಭೀಮಶಿ ಪೂಜಾರ, ಸಂಗಣ್ಣ ಹುಡೇದ, ಶಂಕ್ರಪ್ಪ ಪಡಿಯಣ್ಣವರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next