Advertisement

ಅನ್ನದಾನಿ ಪರಶಿವ

09:53 AM Nov 24, 2019 | Lakshmi GovindaRaj |

ಊಟ ಅಂದ್ರೆ ಊಟ… ಕುದ್ರೋಳಿ ಊಟ! ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇಗುಲದ ಭೋಜನದ ಜನಪ್ರಿಯತೆ ಭಕ್ತರ ಬಾಯಿಯಲ್ಲಿ ನಿಂತಿರುವುದಕ್ಕೆ ಈ ಮಾತೇ ಸಾಕ್ಷಿ. ಕರಾವಳಿ ಶೈಲಿಯಲ್ಲಿ, ಹಿತವಾದ ಭೋಜನ ಸವಿಯುವ ಸಂತೃಪ್ತಿ ಇಲ್ಲಿ ದಕ್ಕುತ್ತದೆ. 1912ರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪಿಸಿದ ಕುದ್ರೋಳಿಯ ದೇಗುಲಕ್ಕೆ, ಆಧುನಿಕತೆಯ ಮೆರುಗು ತಂದವರು, ಬಿ. ಜನಾರ್ದನ ಪೂಜಾರಿ ಅವರು. ಇಲ್ಲಿ ಊಟ ಹೇಗೆ ರುಚಿಕಟ್ಟೋ, ಅಡುಗೆ ವ್ಯವಸ್ಥೆಯೂ ಅಷ್ಟೇ ಅಚ್ಚುಕಟ್ಟು.

Advertisement

ನಿತ್ಯದ ಭೋಜನ ಕತೆ: ದೇವಳದ ಆವರಣದಲ್ಲಿ 4 ಭೋಜನ ಶಾಲೆ ಇದ್ದು, ಏಕಕಾಲಕ್ಕೆ 3 ಸಾವಿರ ಮಂದಿ ಕುಳಿತುಕೊಳ್ಳಬಹುದು. ಪ್ರತಿನಿತ್ಯ 1500 ಮಂದಿ ಮಧ್ಯಾಹ್ನದ ಅನ್ನ ಪ್ರಸಾದ ಸ್ವೀಕರಿಸುತ್ತಾರೆ. ಜಾತ್ರಾ ಸಮಯದಲ್ಲಿ ಈ ಸಂಖ್ಯೆ 10 ಸಾವಿರದಿಂದ 30 ಸಾವಿರ ದಾಟುತ್ತದೆ.

ಅನ್ನಪೂರ್ಣೇಶ್ವರಿ ಕೊಪ್ಪರಿಗೆ: ದೇವಳದಲ್ಲಿ ಆಧುನಿಕ ಪರಿಕರಗಳನ್ನೊಳಗೊಂಡ ಸುಸಜ್ಜಿತ ಪಾಕಶಾಲೆಯಿದ್ದು, ಅನ್ನಪೂರ್ಣೇಶ್ವರಿ ಕೊಪ್ಪರಿಗೆಯಲ್ಲಿ ಅನ್ನ ತಯಾರು ಮಾಡಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಾಗ, ತತ್‌ಕ್ಷಣಕ್ಕೆ ಅಡುಗೆ ಸಿದ್ಧಪಡಿಸಲು ಬೇಕಾಗುವ ಆಧುನಿಕ ಪರಿಕರಗಳೂ ಇಲ್ಲಿನ ಪಾಕಶಾಲೆಯಲ್ಲಿವೆ. ಸನಿಹದ 1000ಕ್ಕೂ ಅಧಿಕ ಶಾಲಾ ಮಕ್ಕಳು ನಿತ್ಯ ಅನ್ನಪ್ರಸಾದ ಸ್ವೀಕರಿಸುತ್ತಾರೆ.

ಭಕ್ಷ ಸಮಾಚಾರ
-ಪ್ರತಿದಿನ ಅನ್ನ, ಸಾಂಬಾರು, ಪಲ್ಯ, ಪಾಯಸವಿರುತ್ತದೆ.
-ಜಾತ್ರೆ ಸಂದರ್ಭದಲ್ಲಿ ವಿಶೇಷ ಭೋಜನವಿರುತ್ತದೆ.

ಊಟದ ಸಮಯ: ಮಧ್ಯಾಹ್ನ 12.30ರಿಂದ 2.30

Advertisement

ಅನ್ನ ಸಂತರ್ಪಣೆ ಇಲ್ಲ…: ವಿಜಯದಶಮಿ ಮತ್ತು ಮಹಾ ಶಿವರಾತ್ರಿಯಂದು ದೇವಳದಲ್ಲಿ ಅನ್ನ ಸಂತರ್ಪಣೆ ಇರುವುದಿಲ್ಲ.

ಮಂಗಳೂರಲ್ಲೇ ಮೊದಲು: ಶ್ರೀಕ್ಷೇತ್ರದಲ್ಲಿ ಅನ್ನಸಂತರ್ಪಣೆ ಆರಂಭಗೊಂಡಿದ್ದು, 1991ರಲ್ಲಿ. ಮಂಗಳೂರಿನ ದೇವಸ್ಥಾನಗಳ ಪೈಕಿ ಮೊದಲ ಬಾರಿಗೆ ಕುದ್ರೋಳಿಯಲ್ಲಿ “ಅನ್ನ ಪ್ರಸಾದ’ ಆರಂಭಿಸಲಾಯಿತು.

ಸರಕಾರದಿಂದಲೂ ಮನವಿ: ಮಂಗಳೂರಿನ ಕರಾವಳಿ ಉತ್ಸವ ಮೈದಾನ ಅಥವಾ ಇತರೆಡೆಗಳಲ್ಲಿ ಕರಾವಳಿ ಉತ್ಸವ ಅಥವಾ ಕ್ರೀಡಾಕೂಟದಂಥ ಕಾರ್ಯಕ್ರಮಗಳಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಸ್ಪರ್ಧಿಗಳಿಗೆ ಊಟದ ವ್ಯವಸ್ಥೆ ಮಾಡುವಂತೆ ಸರ್ಕಾರದಿಂದಲೂ ದೇವಸ್ಥಾನಕ್ಕೆ ಮನವಿ ಪತ್ರ ಬರುತ್ತದೆ. ಅಂಥ ಸಂದರ್ಭದಲ್ಲಿ ಹೆಚ್ಚುವರಿ ಅನ್ನ ಬೇಯಿಸಲಾಗುತ್ತದೆ.

ಸಂಖ್ಯಾ ಸೋಜಿಗ
1- ಕ್ವಿಂಟಲ್‌ ತರಕಾರಿ ನಿತ್ಯ ಬಳಕೆ
3- ಬಾಣಸಿಗರಿಂದ ಅಡುಗೆ ತಯಾರಿ
20- ಕ್ವಿಂಟಲ್‌ ಅಕ್ಕಿಯಿಂದ ಅನ್ನ
1500- ಮಂದಿಗೆ ನಿತ್ಯ ಅನ್ನಸಂತರ್ಪಣೆ
3000- ಮಂದಿ ಸಾಮರ್ಥ್ಯದ ಭೋಜನಶಾಲೆ
1991- ಇಸವಿಯಲ್ಲಿ ಭೋಜನಶಾಲೆ ಆರಂಭ
7,50,000- ಭಕ್ತರಿಂದ ಕಳೆದವರ್ಷ ಭೋಜನ ಸ್ವೀಕಾರ

ನಮ್ಮ ದೇವಸ್ಥಾನದ ಭೋಜನ ಸ್ವೀಕಾರದಲ್ಲೂ ವೈವಿಧ್ಯತೆ ಇದೆ. ದೇವಸ್ಥಾನಕ್ಕೆ ಬರುವ ಭಕ್ತರಿಗಲ್ಲದೆ, ಸನಿಹದ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪ್ರವಾಸಿಗರು, ಕಲಾವಿದರಿಗೂ ಅನ್ನಪ್ರಸಾದ ನೀಡಲಾಗುತ್ತದೆ.
-ಪದ್ಮರಾಜ್‌ ಆರ್‌., ಖಜಾಂಚಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ

* ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next