ಕೋಲಾರ: ಅನ್ನಭಾಗ್ಯ ಯೋಜನೆಯಡಿ ವಿತರಿಸುವ ತೊಗರಿಬೇಳೆ ಸಂಪೂರ್ಣ ಕಳಪೆಯಾಗಿದ್ದು, ಟೆಂಡರ್‌ದಾರರು, ಅವರಿಗೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಹಾರ ಸರಬರಾಜು ಇಲಾಖೆ ವ್ಯವಸ್ಥಾಪಕ ಶಿವಣ್ಣಗೆ ರೈತ ಸಂಘದಿಂದ ಮನವಿ ನೀಡಲಾಯಿತು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಅಪೌಷ್ಟಿಕತೆಯಿಂದ ಯಾವ ವ್ಯಕ್ತಿಯೂ ನರಳಬಾರದೆಂದು ಸಾವಿರಾರು ಕೋಟಿ ಖರ್ಚು ಮಾಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಟೆಂಡರ್‌ದಾರರ ಹಣದಾಹಕ್ಕೆ ಬಡವರ ಆಹಾರ ಕಳಪೆ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ದಂಧೆಕೋರರು ಜಿಲ್ಲೆಯಲ್ಲಿದ್ದಾರೆ ಎಂದು ಆರೋಪಿಸಿದರು.
ವಾಪಸ್ ಕಳುಹಿಸಿ: ಎರಡು ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ತೊಗರಿಬೇಳೆ ವಿತರಿಸುತ್ತಿಲ್ಲ. ಖಾಸಗಿ ಟೆಂಡರ್‌ದಾರರ ಎನ್‌ಸಿಡಿಎಕ್ಸ್ ಕಂಪನಿಯಿಂದ ಉಪ ಗುತ್ತಿಗೆ ಪಡೆದು, ಅತಿ ಕಳಪೆ ತೊಗರಿಬೇಳೆ ಪೂರೈಕೆ ಮಾಡಿದ್ದರಿಂದ ಅದನ್ನು ಕೋಲಾರ ತಾಲೂಕಿನಿಂದ ವಾಪಸ್ ಕಳುಹಿಸಿದ್ದೀರಿ. ಆದರೆ, ಈಗಾಗಲೇ ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಾಲೂಕುಗಳಿಗೆ ಪೂರೈಕೆ ಮಾಡಿರುವ ತೊಗರಿಯನ್ನೂ ಕೂಡಲೇ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದರು.
ತೊಗರಿಬೇಳೆಯ ಗುಣಮಟ್ಟವನ್ನು ಪರಿಶೀಲನೆ ಮಾಡಲು ನೇಮಿಸಿರುವ ಅಧಿಕಾರಿಯು ಸಹ ಟೆಂಡರ್‌ದಾರರ ಜೊತೆ ಶಾಮೀಲಾಗಿ ಈ ರೀತಿ ಕಳಪೆ ಆಹಾರವನ್ನು ಗ್ರಾಹಕರಿಗೆ ನೀಡಿ, ವಂಚನೆ ಮಾಡುತ್ತಿರುವುದು ಬಹಿರಂಗವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಬೇಳೆ ವಿತರಿಸಿ: ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಈಗಾಗಲೇ ಪೂರೈಕೆಯಾಗಿರುವ ಕಳಪೆ ತೊಗರಿ ವಾಪಸ್ ಕಳುಹಿಸಿ, ಗುಣಮಟ್ಟದ್ದನ್ನು ಎರಡು ದಿನದ ಒಳಗೆ ನೀಡದೇ ಹೋದರೆ, ತಮ್ಮ ಇಲಾಖೆ ಮುಂದೆ ಸಾವಿರಾರು ಗ್ರಾಹಕರ ಜೊತೆ ತೊಗರಿ ಸುರಿದು ನ್ಯಾಯ ಪಡೆದುಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಸೂಕ್ತ ಕ್ರಮದ ಭರವಸೆ: ಮನವಿ ಸ್ವೀಕರಿಸಿದ ವ್ಯವಸ್ಥಾಪಕ ಶಿವಣ್ಣ ಮಾತನಾಡಿ, ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸುತ್ತಿರುವ ತೊಗರಿಬೇಳೆ ಗುಣಮಟ್ಟ ಕಡಿಮೆ ಇದ್ದು, ಅದನ್ನು ವಾಪಸ್ ಕಳುಹಿಸುವ ಜೊತೆ 3 ತಿಂಗಳಿಂದ ಸಮರ್ಪಕ ಬೇಳೆಯನ್ನು ಟೆಂಡರ್‌ದಾರರು ಪೂರೈಸುತ್ತಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ತೊಂದರೆಯಾಗಿದೆ. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಗುಣಮಟ್ಟದ ಬೇಳೆ ತರಿಸಿಕೊಡುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಮಂಗಸಂದ್ರ ವೆಂಕಟೇಶ್, ತಿಪ್ಪಣ್ಣ, ಅಶೋಕ್, ಅಶ್ವತ್ಥಪ್ಪ, ಮಂಗಸಂದ್ರ ನಾಗೇಶ್ ಇದ್ದರು.