ಜುಲೈ ತಿಂಗಳಿನಿಂದ ಸರಕಾರ ಅನ್ನಭಾಗ್ಯಕ್ಕೆ ಚಾಲನೆ ನೀಡಿದೆ. ಇದರಡಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 35 ರೂ.ಗಳಂತೆ ತಲಾ 170 ರೂ. ನೇರ ನಗದು ವರ್ಗಾವಣೆ ಮೂಲಕ ನೀಡುತ್ತಿದೆ. ಇದರ ನಡುವೆಯೇ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯಹವಾರಗಳ ಇಲಾಖೆಯಿಂದ ಫಲಾನುಭವಿಗಳ ಆಯ್ಕೆ ಏನು ಎಂಬುದರ ಸಮೀಕ್ಷೆ ನಡೆಸಿದೆ. ಅದರಲ್ಲಿ ಶೇ. 80ರಷ್ಟು ಗ್ರಾಹಕರು ತಮಗೆ ನಗದು ಬದಲಿಗೆ ಅಕ್ಕಿ ನೀಡುವುದೇ ಸೂಕ್ತ ಎಂದು ಹೇಳಿರುವುದು ಬೆಳಕಿಗೆ ಬಂದಿದೆ.
Advertisement
ಪ್ರತಿ ತಾಲೂಕಿನ ಕನಿಷ್ಠ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ನಿರೀಕ್ಷಕರು, ಕೆಲವೆಡೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡಿತರ ಚೀಟಿದಾರರಿಂದ ಸಿದ್ಧ ಮಾದರಿ ಪ್ರಶ್ನೆಗಳನ್ನು ಮುಂದಿಟ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಅವುಗಳನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸಲಾಗಿದೆ. ಅದರಂತೆ ಶೇ. 80ರಿಂದ 82ರಷ್ಟು ಗ್ರಾಹಕರು ಅಕ್ಕಿ ಬದಲಿಗೆ ನಗದು ನೀಡುತ್ತಿರುವ ಬಗ್ಗೆ ತೃಪ್ತವಾಗಿಲ್ಲ. ನಗದು ಬದಲಿಗೆ ಅಕ್ಕಿ ನೀಡುವುದೇ ಉತ್ತಮ. ಇದರಿಂದ ಬಡ ಕುಟುಂಬಗಳ ಹಸಿವು ನೀಗುವುದರ ಜತೆಗೆ ಸರಕಾರದ ಮೂಲ ಉದ್ದೇಶವೂ ಈಡೇರಿದಂತಾ ಗುತ್ತದೆ ಎಂದು ಹೇಳಿರುವುದಾಗಿ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
Related Articles
ಕೆಲವು ಜಿಲ್ಲೆಗಳಿಂದ ಹೆಚ್ಚುವರಿ ಅಕ್ಕಿಯೂ ಬೇಡ; ನಗದು ಬೇಡ. ಇವೆರಡರ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರ ಮೊದಲ ಆಡಳಿತ ಅವಧಿಯಲ್ಲಿ ಅಂದರೆ 2013-2017ರಲ್ಲಿ ನೀಡಲಾಗುತ್ತಿದ್ದ ಅಕ್ಕಿ ಜತೆಗೆ ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ ನೀಡಬೇಕು ಎಂದು ಪಡಿತರ ಚೀಟಿದಾರರು ಮನವಿ ಮಾಡಿದ್ದಾರೆ. ತೊಗರಿ, ಅಡುಗೆ ಎಣ್ಣೆ, ಸಕ್ಕರೆ ಬೆಲೆ ಗಗನಕ್ಕೇರಿದೆ. ತಲಾ ಯೂನಿಟ್‌ಗೆ 170 ರೂ. ನೀಡುತ್ತಿರುವ ಸರಕಾರ, ಅದೇ ಹಣದಲ್ಲಿ ಈ ಉತ್ಪನ್ನಗಳನ್ನು ನೀಡಬೇಕು. ಆಗ ಬಡ ಕುಟುಂಬಗಳಿಗೆ ನೆರವಾಗುವುದರ ಜತೆಗೆ ಹಣ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದೂ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
Advertisement
ಈಗಿರುವುದೇ ಮುಂದುವರಿಯಲಿ; ಕರಾವಳಿ ಜಿಲ್ಲೆಗಳುಕರಾವಳಿ ಭಾಗದ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸುವುದು ಸೂಕ್ತ ಎಂದು ಆ ಭಾಗದ ಪಡಿತರ ಚೀಟಿದಾರರು ಹೇಳಿದ್ದಾರೆ. ಇದಕ್ಕೆ ಮುಖ್ಯವಾಗಿ ಅಲ್ಲಿನ ಜನ ಕುಚಲಕ್ಕಿ ಸೇವಿಸುತ್ತಾರೆ. ಹಾಗಾಗಿ ಈ ಅಭಿಪ್ರಾಯ ವ್ಯಕ್ತವಾಗಿದೆ ಎಂದೂ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ವಿಜಯಕುಮಾರ ಚಂದರಗಿ