Advertisement
ಕಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಬಹುಜನ ಸಮಾಜ ಪಕ್ಷದ ಮಚ್ಚೇಂದ್ರ ಕಾಡಾಪುರೆ ಸೇರಿ 9 ಜನ ಉಳಿದುಕೊಂಡಿದ್ದಾರೆ. ಆದರೆ ಪ್ರಕಾಶ ಹುಕ್ಕೇರಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ನೇರ ಕದನ ಇರುವುದರಿಂದ ಉಳಿದ ಅಭ್ಯರ್ಥಿಗಳ ಬಗ್ಗೆ ಅಂತಹ ಆಸಕ್ತಿ ಮತದಾರರಲ್ಲಿ ಕಾಣುತ್ತಿಲ್ಲ.
Related Articles
Advertisement
ಟಿಕೆಟ್ ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳಲ್ಲಿ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಅದರಲ್ಲೂ ಬಿಜೆಪಿ ಟಿಕೆಟ್ ವಿಷಯ ರಾಜ್ಯಮಟ್ಟದಲ್ಲಿ ಬಹಳ ದೊಡ್ಡ ಸುದ್ದಿ ಮಾಡಿತ್ತು. ಕಡೆಯ ಕ್ಷಣದವರೆಗೆ ಹೆಸರು ಘೋಷಣೆ ಮಾಡದೇ ಇದ್ದದ್ದು ಗೊಂದಲಕ್ಕೆ ಕಾರಣವಾಗಿತ್ತು. ಟಿಕೆಟ್ ಮೇಲೆ ಆಸೆ ಇಟ್ಟುಕೊಂಡಿದ್ದ ಮಾಜಿ ಸಂಸದ ರಮೇಶ ಕತ್ತಿ ಬಂಡಾಯದ ಸೂಚನೆ ಸಹ ನೀಡಿದ್ದರು.
ಕಾಂಗ್ರೆಸ್‌ಗೆ ಸೇರುವ ಬೆದರಿಕೆ ಹಾಕಿದ್ದರು. ಕೊನೆಗೆ ಇವರ ಬಂಡಾಯವನ್ನು ಶಮನ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬೆಳಗಾವಿಗೆ ಬರಬೇಕಾಯಿತು. ಕತ್ತಿ ಅವರ ಈ ಅಸಮಾಧಾನ ಚುನಾವಣೆಯಲ್ಲಿ ಬಿಜೆಪಿಗೆ ಸಮಸ್ಯೆ ಉಂಟು ಮಾಡಿದರೂ ಅಚ್ಚರಿ ಇಲ್ಲ.
ಕಾಂಗ್ರೆಸ್‌ನಲ್ಲಿ ಸಹ ಪ್ರಕಾಶ ಹುಕ್ಕೇರಿಗೆ ಟಿಕೆಟ್ ನೀಡಬಾರದೆಂದು ಚಿಕ್ಕೋಡಿ ಭಾಗದ ಮಾಜಿ ಶಾಸಕರು ವರಿಷ್ಠರ ಮೇಲೆ ಒತ್ತಡ ಹಾಕಿದ್ದರು. ಆದರೆ ಜೊಲ್ಲೆ ವಿರುದ್ಧ ಸಮಬಲದ ಹೋರಾಟ ಮಾಡುವ ಅಭ್ಯರ್ಥಿ ಸಿಗದೇ ಇರುವ ಕಾರಣ ಮಾಜಿ ಶಾಸಕರ ಒತ್ತಡ ಕೆಲಸ ಮಾಡಲಿಲ್ಲ. ಇದರ ಜತೆಗೆ ಪ್ರಕಾಶ ಹುಕ್ಕೇರಿ ಸಹ ಚಿಕ್ಕೋಡಿ ಬದಲು ಬೆಳಗಾವಿಯಿಂದ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದರು. ಆದರೆ ಇದಕ್ಕೆ ಸತೀಶ ಜಾರಕಿಹೊಳಿ ಅಡ್ಡಿಯಾದರು.
ಬಿಜೆಪಿ ಎಂದಿನಂತೆ ಪ್ರಧಾನಿ ಮೋದಿ ಅವರ ಗಾಳಿಯನ್ನೇ ನೆಚ್ಚಿಕೊಂಡಿದೆ. ಪಕ್ಷದ ಅಭ್ಯರ್ಥಿ ಜೊಲ್ಲೆಗೆ ತಮ್ಮ ಸಾಧನೆ ಹೇಳಿಕೊಳ್ಳುವ ಅವಕಾಶ ಇಲ್ಲ. ಆದರೆ ಸಾಮಾಜಿಕವಾಗಿ ಜನರ ಜತೆ ಹತ್ತಿರದ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು, ಕಾರ್ಯಕರ್ತರು ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಜೊಲ್ಲೆ ಅವರನ್ನು ಬೆಂಬಲಿಸಬೇಕೆಂದು ಪ್ರಚಾರ ಮಾಡುತ್ತಿದ್ದಾರೆ. ಇದರ ಜತೆಗೆ ಜೊಲ್ಲೆ ಅವರ ಪತ್ನಿ ಶಶಿಕಲಾ ಅವರು ಶಾಸಕಿಯಾಗಿರುವುದೂ ಅನುಕೂಲವಾಗಿದೆ.
ಹುಕ್ಕೇರಿಗೆ ಕೆಲಸದ ವಿಶ್ವಾಸ – ಆರು ಬಾರಿ ಶಾಸಕರಾಗಿ ನಂತರ ಮೊದಲ ಪ್ರಯತ್ನದಲ್ಲೇ ಸಂಸದರಾದ ಅನುಭವಿ ರಾಜಕಾರಣಿ ಪ್ರಕಾಶ ಹುಕ್ಕೇರಿ ಅವರಿಗೆ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ಹೆಚ್ಚಿನ ವಿಶ್ವಾಸ. ಐದು ವರ್ಷಗಳ ಈ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆಂದು ಹೇಳುವ ಅವರು ಇದೇ ಅಭಿವೃದ್ಧಿ ಕೆಲಸಗಳು ತಮ್ಮ ಕೈಹಿಡಿಯಲಿವೆ ಎಂಬ ವಿಶ್ವಾಸ ಹೊಂದಿದ್ದಾರೆ.
ಕ್ಷೇತ್ರ ವ್ಯಾಪ್ತಿ?: ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ಯಮಕನಮರಡಿ ವಿಧಾನಸಭೆ ಕ್ಷೇತ್ರ.
ನಿರ್ಣಾಯಕ ಅಂಶ: ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅಧಿಕವಾಗಿದ್ದಾರೆ. ಹೀಗಾಗಿ ಎರಡೂ ಪ್ರಮುಖ ಪಕ್ಷಗಳು ಇದೇ ಸಮಾಜದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇವರ ಜತೆಗೆ ಕುರುಬರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಮತ್ತು ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ಚುನಾವಣೆಯ ಫಲಿತಾಂಶ ಅದಲು ಬದಲು ಮಾಡುವ ಶಕ್ತಿ ಹೊಂದಿದ್ದಾರೆ. ಇಲ್ಲಿ ಜೆಡಿಎಸ್ ಹೆಸರಿಗೆ ಮಾತ್ರ. ಹೀಗಾಗಿ ಮೈತ್ರಿ ಧರ್ಮ ಕಾಣಿಸುವುದೇ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇರುವುದರಿಂದ ಫಲಿತಾಂಶ ಬಹಳ ಕುತೂಹಲ ಮೂಡಿಸಿದೆ.
ಒಟ್ಟು ಮತದಾರರು – 15,79,309ಪುರುಷರು – 8,06,052
ಮಹಿಳೆಯರು – 7,73,202
ಇತರೆ – 55 ಜಾತಿವಾರು ಲೆಕ್ಕಾಚಾರ
ಲಿಂಗಾಯತರು – 3.90 ಲಕ್ಷ
ಕುರುಬರು – 1.84 ಲಕ್ಷ
ಎಸ್‌ಸಿ – 2 ಲಕ್ಷ
ಎಸ್‌ಟಿ – 1 ಲಕ್ಷ
ಮುಸ್ಲಿಂ – 1.98 ಲಕ್ಷ
ಮರಾಠ – 1.47 ಲಕ್ಷ
ಜೈನ್ – 1.03 ಲಕ್ಷ
ಹಣಬರ – 1.04 ಲಕ್ಷ. * ಕೇಶವ ಆದಿ