ಹೊಸದಿಲ್ಲಿ : ಲೋಕ್‌ಪಾಲ್ ಮಸೂದೆ ಜಾರಿ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜಾರಿ ಮಾಡದೇ ಹೋದರೆ ಮತ್ತೆ ದೆಹಲಿಯಲ್ಲಿ ಬೃಹತ್ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದು 3 ವರ್ಷವಾದರೂ ಲೋಕ್‌ಪಾಲ್ ಮಸೂದೆ ಜಾರಿ ಮಾಡದ ಕುರಿತು ಅಣ್ಣಾ ಹಜಾರೆ ಪತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
‘ಲೋಕ್‌ಪಾಲ್ ಮಸೂದೆ ಮಂಡನೆ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕಕ್ಕಾಗಿ ನಾನು ನಿಮಗೆ 3 ವರ್ಷಗಳಿಂದ ಗಳನ್ನು ಬರೆಯುತ್ತಲೇ ಇದ್ದೇನೆ, ಆದರೆ ನೀವು ನನ್ನ ಪತ್ರಗಳಿಗೆ ಉತ್ತರವನ್ನೇ ನೀಡಿಲ್ಲ’ ಎಂದು ಅಸಮಧಾನ ಹೊರಹಾಕಿದ್ದಾರೆ.
‘ನಾನು ಹೋರಾಟ ನಡೆಸಿ 6 ವರ್ಷಗಳು ಕಳೆದರೂ ಭ್ರಷ್ಟಾಚಾರ ಅಂತ್ಯಗೊಳಿಸಲು ಯಾವುದೇ ಬಿಲ್ ಮಂಡನೆಯಾಗಿಲ್ಲ’ ಎನ್ನುವ ಕುರಿತು ತೀವ್ರ ನೋವು ತೋಡಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನನ್ನ ಹೋರಾಟದ ಮುಂದಿನ ದಿನಾಂಕವನ್ನು ಇನ್ನೊಂದು ಪತ್ರದಲ್ಲಿ ಘೋಷಿಸುವುದಾಗಿ 80 ರ ಹರೆಯದ ಅಣ್ಣಾ ಹಜಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಡುವು ನೀಡಿದ್ದಾರೆ.
2011 ರಲ್ಲಿ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಬೃಹತ್ ಆಂದೋಲನವನ್ನು ನಡೆಸಿದ್ದರು. ಆಂದೋಲನದಲ್ಲಿ ಈಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರು, ಕಿರಣ್ ಬೇಡಿ ಮತ್ತು ಬಾಬಾ ರಾಮ್ ದೇವ್ ಅವರು ಮುಂಚೂಣಿಯಲ್ಲಿದ್ದರು.