Advertisement

ಕೃಷಿಕರಿಗೆ ಹೆಗಲು ಕೊಟ್ಟ ಅಣ್ಣಾ

11:56 AM Feb 01, 2018 | Team Udayavani |

ಬೆಂಗಳೂರು: “ದೇಶದ ರೈತರ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮಾ.23ರಿಂದ ದೆಹಲಿಯ
ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇನೆ,’ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಘೋಷಿಸಿದ್ದಾರೆ.

Advertisement

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ನಗರದ ಬಸವ ನಗುಡಿ ನ್ಯಾಷನಲ್‌ ಕಾಲೇಜು ಮೈದಾನ
ದಲ್ಲಿ ಹಮ್ಮಿಕೊಂಡಿದ್ದ ರೈತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. 

ಕಳೆದ ಎರಡು ತಿಂಗಳಿಂದ ಒಡಿಶಾ, ಬಿಹಾರ, ರಾಜಾಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಫೆ.1ರಿಂದ ಮತ್ತೆ ಕೆಲವು ರಾಜ್ಯಗಳಿಗೆ ಪ್ರವಾಸ ಕೈಗೊಂಡು ರೈತರ ಸಮಸ್ಯೆ ಆಲಿಸಲಿದ್ದೇನೆ ಎಂದರು.

ಜೈಲ್‌ ಭರೋ ನಡೆಸುವೆ: “ರೈತರ ಪ್ರಗತಿಗಾಗಿ ಮಾ.23ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇನೆ. ಹಾಗೇ ಜೈಲ್‌ ಭರೋ ನಡೆಸಲಿದ್ದೇನೆ. ನೀವೆಲ್ಲರೂ ನನ್ನ ಜೊತೆ ಇರುತ್ತೀರಲ್ಲವೇ,’ ಎಂದು ಅಣ್ಣಾ ಹಜಾರೆ ಕೇಳಿದಾಗ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲ ರೈತರು ತಮ್ಮ ಹಸಿರು ಶಾಲುಗಳನ್ನು ಮೇಲೆತ್ತಿ ತಿರುಗಿಸುತ್ತಾ ಬೆಂಬಲ ಸೂಚಿಸಿದರು.

ಜಿಎಸ್‌ಟಿ ಅಗತ್ಯವಿಲ್ಲ: “ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ಅಗತ್ಯವೇ ಇಲ್ಲ. ಆದರೂ, ಹನಿ ನೀರಾವರಿ ಪದ್ಧತಿಗೆ ಬಳಸುವ ಪರಿಕರ ಸೇರಿದಂತೆ ಕೃಷಿ ಉಪಕರಣಗಳಿಗೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಈ ತೆರಿಗೆ ಹಿಂಪಡೆಯಬೇಕು. ಡಾ. ಸ್ವಾಮಿನಾಥನ್‌ ಸಮಿತಿ ವರದಿಯ ಶೀಘ್ರ ಅನುಷ್ಠಾನಕ್ಕೆ ಉಪವಾಸ ಸತ್ಯಾಗ್ರಹದಲ್ಲಿ ಒತ್ತಾಯಿಸ ಲಾಗುವುದು. ಈ ಹೋರಾಟದಲ್ಲಿ ಜೈಲಿಗೆ ಹೋಗಲು ಕೂಡ ನಾವು ಸಿದ್ಧರಿದ್ದೇವೆ. ರೈತರ ಹೋರಾಟಕ್ಕಾಗಿ ಜೈಲಿಗೆ ಹೋದರೆ ಅದೇ ಅಲಂಕಾರ, ಇದರಲ್ಲಿ ಕಳಂಕ ಇರುವುದಿಲ್ಲ,’ ಎಂದು ಹೇಳಿದರು.

Advertisement

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಕಾರ್ಯಾಧ್ಯಕ್ಷ ಬಸವರಾಜಪ್ಪ, ನಟ ಪ್ರಕಾಶ್‌ ರೈ, ಮಹಾರಾಷ್ಟ್ರದ ಸಂಸದ ರಾಜುಶೆಟ್ಟಿ, ದೇವೇಂದ್ರ ಶರ್ಮ, ವಿ.ಎಂ.ಸಿಂಗ್‌, ನಟರಾಜ್‌ ಹುಳಿಯಾರ್‌, ಹರೀಶ್‌ ಚೌಹಾಣ್‌ ಇತರರು ಇದ್ದರು.  

ನಾನು ಮದುವೆಯಾಗಿಲ್ಲ; ಆದರೆ ಕುಟುಂಬವಿದೆ! “ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿರುವ ನಾನು, ದೇಶ ಸೇವೆಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದೇನೆ. ನಾನು ಮದುವೆಯಾಗಿಲ್ಲ. ಆದರೇ, ಇಡೀ ದೇಶವೇ ನನ್ನ ಕುಟುಂಬ ಇದ್ದಂತೆ. ಯಾವುದೇ ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲ. ಊಟಕ್ಕೆ ಒಂದು ತಟ್ಟೆ, ಮಲಗಲು ಒಂದು ಚಾಪೆ ಬಿಟ್ಟು ಬೇರೇನೂ ನನ್ನ ಬಳಿ ಇಲ್ಲ. ಇದೇ ಮಹದಾನಂದ. ಯಾವ ಕೋಟ್ಯಾಧಿಪತಿಗೂ ನನಗೆ ಸಿಕ್ಕಷ್ಟು ಆನಂದ ಸಿಗುವುದಿಲ್ಲ,’ ಎಂದ ಅಣ್ಣಾ ಹಜಾರೆ, “ಮತ ಪಡೆಯುವುದಕ್ಕಾಗಿ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಯಾವುದೇ ಹೋರಾಟ ಅಥವಾ ಪ್ರವಾಸ ಮಾಡುತ್ತಿಲ್ಲ,’ ಎಂದು ಸ್ಪಷ್ಟಪಡಿಸಿದರು.

ರೈತರ ಸರಣಿ ಆತ್ಮಹತ್ಯೆ ದೇಶದ ಅಭಿವೃದ್ಧಿಯ ಶುಭ ಸೂಚಕವಲ್ಲ. ಇನ್ಮುಂದೆ ಬ್ಯಾಂಕ್‌ ಅಥವಾ ಸೊಸೈಟಿ ಯವರು ರೈತನ ಮನೆಗೆ ಸಾಲ ವಸೂಲಿಗೆ ಬಂದರೆ ಕಂಬಕ್ಕೆ ಕಟ್ಟಿಬಿಡಿ, ಮುಂದಿನದ್ದು ನಾವು ನೋಡಿಕೊಳ್ಳುತ್ತೇವೆ.
ಬಸವರಾಜಪ್ಪ, ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ

ಟೀ ಮಾರುತ್ತಿದ್ದವರು ಪ್ರಧಾನಿಯಾಗಬಹುದು ಎಂದಾದರೆ, ಈ ದೇಶದಲ್ಲಿ ಬಹು ಸಂಖ್ಯಾತರಾಗಿರುವ ರೈತ ಪ್ರಧಾನಿಯಾಗ ಬಾರದೇ? ರೈತರು ಒಗ್ಗಟ್ಟಾಗಬೇಕು.
 ದೇವೇಂದ್ರ ಶರ್ಮ, ಆಹಾರ ತಜ್ಞ

ರೈತರ ಸಂಘಟನೆಗಳು ದೇಶಾದ್ಯಂತ ಹರಿದು ಹಂಚಿಹೋಗಿವೆ. ಹೀಗಾಗಿಯೇ ರೈತರ ಮೇಲೆ ಹಲ್ಲೆ ನಡೆಯುತ್ತಿದೆ. ದೇಶದ ರೈತರು ಒಂದಾದರೆ ಗೋಲಿಬಾರ್‌ ನಡೆಸುವ ತಾಕತ್ತು ಯಾವ ಮುಖ್ಯಮಂತ್ರಿಗೆ ಬರಲು ಸಾಧ್ಯ?
ವಿ.ಎಂ.ಸಿಂಗ್‌, ಸಂಚಾಲಕ, ಅಖೀಲ ಭಾರತ

ಕಿಸಾನ್‌ ಮುಕ್ತಿ ಹೋರಾಟ ಸಮಿತಿ ಬಿಜೆಪಿ, ಕಾಂಗ್ರೆಸ್‌ ಪಕ್ಷದವರು ಇಬ್ಬರೂ ಕಳ್ಳರೇ ಯಾರನ್ನೂ ನಂಬಲು ಸಾಧ್ಯವಿಲ್ಲ. ಮೋದಿ ಸರ್ಕಾರ ಬಂದ ನಂತರ ರೈತರ ಕಲ್ಯಾಣಕ್ಕಾಗಿ ಯಾವೊಂದು ಕೆಲಸವನ್ನೂ ಮಾಡಿಲ್ಲ.
ರಾಜುಶೆಟ್ಟಿ, ಸಂಸದ, ಮಹಾರಾಷ್ಟ್ರ

Advertisement

Udayavani is now on Telegram. Click here to join our channel and stay updated with the latest news.

Next