ನಟ ಡಾಲಿ ಧನಂಜಯ್ ನಿರ್ಮಾಣ ಮತ್ತು ನಿರ್ದೇಶನದ “ಬಡವ ರಾಸ್ಕಲ್’ ಸಿನಿಮಾ ಸಕ್ಸಸ್ ಬಳಿಕ ಅದೇ ತಂಡ ಮತ್ತೂಂದು ಸಿನಿಮಾಕ್ಕೆ ತಯಾರಾಗಿದೆ. ಅಂದಹಾಗೆ, ಈ ಹೊಸ ಸಿನಿಮಾಕ್ಕೆ “ಅಣ್ಣ ಫ್ರಂ ಮೆಕ್ಸಿಕೋ’ ಎಂದು ಟೈಟಲ್ ಇಡಲಾಗಿದ್ದು, ಶಂಕರ್ ಗುರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಧನಂಜಯ್ ನಾಯಕನಾಗಿ ಹೊಸಥರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ನಟ ಧನಂಜಯ್ ಜನ್ಮದಿನಕ್ಕೆ ಚಿತ್ರತಂಡ ಸಿನಿಮಾದ ಸಣ್ಣದೊಂದು ಝಲಕ್ ಬಿಟ್ಟುಕೊಟ್ಟು ಸಿನಿಪ್ರಿಯರ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸದ್ದಿಲ್ಲದೆ “ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮುಹೂರ್ತವನ್ನು ನೆರವೇರಿಸಿದೆ.
ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಡೆದ “ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ, “ರಾಯಲ ಸ್ಟುಡಿಯೋಸ್’ನ ಪಾಲುದಾರರಾದ ಜಾನ್ವಿ ರಾಯಲ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕರು ಹಾಜರಿದ್ದರು.
‘ಅಣ್ಣ ಫ್ರಂ ಮೆಕ್ಸಿಕೋ’ ಪಕ್ಕ ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದ್ದು, “ದಿ ರಾಯಲ ಸ್ಟುಡಿಯೋಸ್’ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದು. “ಐರಾ ಫಿಲಂಸ್’ ಕೂಡ ಜೊತೆಯಾಗಿ ಕೈ ಜೋಡಿಸಿದೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದು, ಮುಂಬರುವ ಜನವರಿ ತಿಂಗಳಿನಿಂದ “ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಕರ್ನಾಟಕದ ವಿವಿಧೆಡೆ ಮತ್ತು ಮೆಕ್ಸಿಕೋ ಸೇರಿದಂತೆ ಹಲವು ಕಡೆಗಳಲ್ಲಿ “ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಚಿತ್ರೀಕರಣ ನಡೆಸಲ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.