Advertisement

ಮಾಸಾಂತ್ಯಕ್ಕೆ ಸಿಗದ ಅನ್ನಭಾಗ್ಯ ಯೋಜನೆ ಸಾಮಗ್ರಿ

09:33 PM Sep 06, 2019 | Sriram |

ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದ ಕೆಲವು ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳ ಅಂತ್ಯದವರೆಗೆ ಅನ್ನಭಾಗ್ಯ ಯೋಜನೆ ಸಾಮಗ್ರಿಗಳು ವಿತರಣೆಯಾಗದ ಹಿನ್ನೆಲೆಯಲ್ಲಿ ಜನರು ಪಡಿತರ ಸಾಮಗ್ರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

Advertisement

ಜಿಲ್ಲೆಯಿಂದ ಜಿಲ್ಲೆಗಳಿಗೆ ವಲಸೆ ಹೋಗುವ ಕುಟುಂಬಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಸರಕಾರ ನಿಯಮದ ಅನ್ವಯ ರಾಜ್ಯದ ಪಡಿತರ ಕಾರ್ಡ್‌ ಹೊಂದಿರುವವರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾದರೂ ಸಾಮಗ್ರಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ನಿಯಮವೇ ಕುತ್ತು
ಸರಕಾರ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಬರುವ ಕಾರ್ಡ್‌ದಾರರಿಗೆ ಅಗತ್ಯವಿರುವಷ್ಟು ಸಾಮಗ್ರಿಗಳು ಮಾತ್ರ ಹಂಚಿಕೆಯಾಗುತ್ತಿವೆ. ಸಿಮೀತ ದಾಸ್ತಾನಿನಲ್ಲಿಯೇ ಇತರೆ ಜಿಲ್ಲೆ ಹಾಗೂ ಪ್ರದೇಶದ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆ ಸಾಮಗ್ರಿ ವಿತರಿಸಬೇಕಾಗಿದೆ. ಇದರಿಂದಾಗಿ ಉಡುಪಿ ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿಗೂ ಮುನ್ನವೇ ಸಾಮಗ್ರಿಗಳು ಖಾಲಿಯಾಗುತ್ತಿದೆ. ನ್ಯಾಯಬೆಲೆ ಅಂಗಡಿ ವ್ಯಾಪ್ತಿ ಕಾರ್ಡ್‌ದಾರರು ಖಾಲಿ ಕೈಯಲ್ಲಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇತರೆ ಪ್ರದೇಶದ 3,558 ಪಡಿತರ
ಜಿಲ್ಲೆಯಲ್ಲಿ ಪ್ರಸ್ತುತ 291 ಪಡಿತರ ಅಂಗಡಿಗಳಿವೆ. ಕುಂದಾಪುರ 116, ಕಾರ್ಕಳ 56, ಉಡುಪಿ 119 ಪಡಿತರ ಅಂಗಡಿಗಳಿವೆ. ಆಗಸ್ಟ್‌ ತಿಂಗಳಲ್ಲಿ ಕಾರ್ಕಳದಲ್ಲಿ 949, ಉಡುಪಿಯಲ್ಲಿ 1690, ಕುಂದಾಪುರದಲ್ಲಿ 919 ಕಾರ್ಡ್‌ ಸೇರಿದಂತೆ ಇತರೆ ಪ್ರದೇಶದ 3,558 ಕಾರ್ಡ್‌ದಾರರು ಜಿಲ್ಲೆಯಲ್ಲಿ ಪಡಿತರ ಪಡೆದುಕೊಳ್ಳುತ್ತಿದ್ದಾರೆ.

ನಿಗದಿತ ಸಮಯಕ್ಕೆ ವಿತರಣೆಯಾಗುತ್ತಿಲ್ಲ
ಪ್ರತಿ ತಿಂಗಳು 1ನೇ ತಾರೀಕಿನಿಂದ 25ರ ವರೆಗೆ ರೇಶನ್‌ ಕಡ್ಡಾಯವಾಗಿ ವಿತರಣೆಯಾಗಬೇಕು. ಆದರೆ ಕೆಲ ಗ್ರಾಮೀಣ ಭಾಗದಲ್ಲಿ 10ಕ್ಕೆ ವಿತರಣೆ ಪ್ರಾರಂಭಿಸಿ 25ರ ಒಳಗೆ ಮುಕ್ತಾಯ ಮಾಡುತ್ತಿದ್ದಾರೆ.

Advertisement

2.2 ಲಕ್ಷ ಕಾರ್ಡ್‌ಗಳಿವೆ
ಜಿಲ್ಲೆಯಲ್ಲಿ ಒಟ್ಟು 2,29,508 ಕಾರ್ಡ್‌ಗಳಿವೆ. ಉಡುಪಿ ತಾಲೂಕಿನಲ್ಲಿ ಅಂತ್ಯೋದಯ 11,149, ಬಿಪಿಎಲ್‌ 64,448, ಎಪಿಎಲ್‌ 66,451, ಕಾರ್ಕಳದಲ್ಲಿ ಅಂತ್ಯೋದಯ 4,164, ಬಿಪಿಎಲ್‌ 33,064, ಎಪಿಎಲ್‌ 19,559,ಕುಂದಾಪುರದಲ್ಲಿ ಅಂತ್ಯೋದಯ 13,596, ಬಿಪಿಎಲ್‌ 59,945, ಎಪಿಎಲ್‌ 23,575 ಕಾರ್ಡ್‌ಗಳಿವೆ.

ಪಡಿತರ ಅಂಗಡಿಗಳಲ್ಲಿ 1ನೇ ತಾರೀಕಿನಿಂದ 25ರ ವರೆಗೆ ಅಕ್ಕಿ ವಿತರಣೆ ಮಾಡಲಾಗುತ್ತದೆ. ಫ‌ಲಾನುಭವಿಗಳು ನಿಗದಿ ಸಮಯ ದೊಳಗೆ ಸಾಮಗ್ರಿ ಪಡೆದುಕೊಳ್ಳಬೇಕು.

ಆಯಾ ವ್ಯಾಪ್ತಿಗೆ ಅಗತ್ಯವಿದ್ದಷ್ಟು ಪಡಿತರ ಸಾಮಗ್ರಿ ವಿತರಣೆ
ಪಡಿತರ ಅಂಗಡಿಗಳಿಗೆ ಆಯಾ ವ್ಯಾಪ್ತಿಗೆ ಬರುವ ಕಾರ್ಡ್‌ಗಳಿಗೆ ಅಗತ್ಯವಿರುವಷ್ಟು ಪ್ರಮಾಣದ ಪಡಿತರ ಸಾಮಗ್ರಿ ವಿತರಿಸಲಾಗುತ್ತದೆ. ಒಂದು ವೇಳೆ ಬೇರೆ ಪ್ರದೇಶದಿಂದ ಕಾರ್ಡ್‌ದಾರರು ಸಾಮಗ್ರಿ ಪಡೆದುಕೊಂಡಾಗ ಕೊರತೆ ಬೀಳುತ್ತದೆ. ಅವರವರ ಪಡಿತರ ಅಂಗಡಿ ಹೊರತುಪಡಿಸಿ ಇತರ ಅಂಗಡಿಗಳಲ್ಲೂ ಪಡಿತರವನ್ನು ಪಡೆದುಕೊಳ್ಳಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಗಳು ತಿಳಿಸಿವೆ.

ಸಾಮಗ್ರಿ ಸಾಗಾಟಕ್ಕೆ
ಹೆಚ್ಚು ಹಣ ವ್ಯಯ
ತಿಂಗಳ ಅಂತ್ಯದಲ್ಲಿ ಪಡಿತರ ಅಂಗಡಿಯಲ್ಲಿ ರೇಶನ್‌ ದೊರಕುತ್ತಿಲ್ಲ. ಬೇರೆ ಪಡಿತರ ಅಂಗಡಿಗಳಿಗೆ ತೆರಳಬೇಕಾದರೆ ಸುಮಾರು 4 ಕಿ.ಮೀ. ಹೋಗಬೇಕಾಗುತ್ತದೆ. ಸಾಮಗ್ರಿ ಸಾಗಾಟಕ್ಕೆ ಹೆಚ್ಚು ಹಣ ವ್ಯಯಿಸಬೇಕಾದ ಪರಿಸ್ಥಿತಿ ಬಂದಿದೆ.
-ಸುಕನ್ಯಾ, ಉಡುಪಿ

ನಿಗದಿತ ಪ್ರಮಾಣ
ಅಕ್ಕಿ ವಿತರಣೆ
ನ್ಯಾಯಬೆಲೆ ಅಂಗಡಿಗಳಿಗೆ ನಿಗದಿತ ಪಡಿಸಿದಷ್ಟು ಪ್ರಮಾಣದ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಆದರೆ ಕೆಲವು ಅಂಗಡಿಗಳಲ್ಲಿ ಹೊರ ಜಿಲ್ಲೆ ಹಾಗೂ ಪ್ರದೇಶದವರು ಪಡೆದುಕೊಳ್ಳುತ್ತಿರುವುದರಿಂದ ಪಡಿತರ ಸಾಮಗ್ರಿ ಕೊರತೆ ಎದುರಾಗುತ್ತಿದೆ.
-ಬಿ.ಕೆ.ಕುಸುಮಾಧರ್‌, ಆಹಾರ, ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ(ಪ್ರಭಾರ)

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next