Advertisement
ಪೂರ್ಣಪ್ರಜ್ಞ ಕರುಣಾ ವಿಜ್ಞಾನ ಪಿಯು ಕಾಲೇಜಿನಲ್ಲಿ ಕಳವು ಘಟನೆ ನಡೆದಿದ್ದು, ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿದ್ದ ಪ್ರೀ ಪ್ರೈಮರಿ ಶಾಲೆಯಲ್ಲಿ ಕಳವು ನಡೆಸಿದ ಕಳ್ಳರು ಕಚೇರಿ ಒಳ ನುಗ್ಗಿ 18,000 ಮೌಲ್ಯದ ವಸ್ತುಗಳ ಅಪಹರಿಸಿದ್ದರೆ, ಕಾಲೇಜು ಹಾಗೂ ಪ್ರಿ ಪ್ರೈಮರಿ ಸೇರಿ 1.75 ಲಕ್ಷದಿಂದ 2 ಲಕ್ಷದವರೆಗಿನ ಮೌಲ್ಯದ ವಸ್ತುಗಳು, ನಗದು ಕಳವಾಗಿರುವ ಬಗ್ಗೆ ಶಿಕ್ಷಣ ಸಂಸ್ಥೆಯು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಮಧ್ಯರಾತ್ರಿ ಕಳ್ಳರ ಕಾರ್ಯಾಚರಣೆ?
ಗುರುವಾರ ಮುಂಜಾನೆ ಎಂದಿನಂತೆ ಸಿಬ್ಬಂದಿಗಳು ಬೆಳಗ್ಗೆ ಕಚೇರಿಯ ಬಾಗಿಲು ತೆರೆದಾಗ ಕಳ್ಳತನದ ಬಗ್ಗೆ ತಿಳಿದು ಬಂದಿದೆ. ತಕ್ಷಣವೇ ಕಚೇರಿ ಸಿಬ್ಬಂದಿ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಧ್ಯರಾತ್ರಿ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಕಳ್ಳರು ಹೆದ್ದಾರಿ ಮೂಲಕ ಆಗಮಿಸಿ ಶಿಕ್ಷಣ ಸಂಸ್ಥೆಗೆ ನುಗ್ಗಿದ್ದಾರೆ ಎಂದು ತಿಳಿದು ಬಂದಿದೆ. ಪಿಯು ಕಾಲೇಜಿನ ಕಚೇರಿಯ ಬಾಗಿಲುಗಳ ಮುರಿದು ಒಳ ನುಗ್ಗಿ ಕಪಾಟಿನ ಬೀಗ ಮುರಿದು ಅಲ್ಲಿಯೇ ಇದ್ದ 1,75,000 ರೂ. ಮತ್ತು ಪ್ರಿ ಪ್ರೈಮರಿಯಲ್ಲಿದ್ದ 18 ಸಾವಿರ ರೂಪಾಯಿ ಕಳ್ಳತನ ನಡೆಸಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳ್ಳತನದಲ್ಲಿ ಹಣವಷ್ಟೆ ಕಳವಾಗಿದೆಯೋ ಅಥವಾ ಕಡತಗಳು ಯಾವುದಾದರೂ ನಾಪತ್ತೆಯಾಗಿದೆಯೋ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.