ಅಂಕೋಲಾ : ತಾಲೂಕಿನ ಗಂಗಾವಳಿ ನದಿಯ ಪ್ರವಾಹಕ್ಕೆ ಹಾನಿಯುಂಟಾದ ಹೊನ್ನಳ್ಳಿ ಏತ ನೀರಾವರಿ ಘಟಕ ಪರಿಶೀಲನೆ ನಡೆಸಿದ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವ ಜೆ.ಸಿ.ಮಾಧುಸ್ವಾಮಿ ಘಟಕದ ಅವಸ್ಥೆ ಹಾಗೂ ನಿರ್ವಹಣೆಯ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
2019 ರ ನೆರೆಹಾವಳಿಯಿಂದಾದ ಹಾನಿಯ ವರದಿಯ ನಂತರ ಮುಂದುವರೆದ ಮಾಹಿತಿ ಮತ್ತು ಹೊಸ ಘಟಕದ ನಿರ್ಮಾಣದ ಪ್ರಸ್ತಾವನೆಯನ್ನೇಕೆ ಕಳುಹಿಸಲಿಲ್ಲ ಎಂದು ಸಚಿವರು ಕೇಳಿದ ಪ್ರಶ್ನೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ.
ಇನ್ನು ಮುಂದೆ ಹೊಸ ಘಟಕದ ನಿರ್ಮಾಣ ಮಾಡುವಾಗ ಘಟಕವನ್ನು ಮುಳಗಡೆಯಾಗದ ಹಾಗೆ ಸೂಕ್ತ ಎತ್ತರದಲ್ಲಿ ನಿರ್ಮಿಸಬೇಕೆಂದೂ ಸೂಚನೆ ನೀಡಿದರು. ಹಾಗೂ ರೈತರ ಕೃಷಿ ಜಮೀನುಗಳು ಮುಳುಗಡೆಯಾಗದ ಹಾಗೆ ಕ್ರಮ ಕೈಗೊಳ್ಳಲು ಯೋಜನೆ ಸಿದ್ದಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿಯವರು ಕೋಡಸಣಿ ಸೇತುವೆಯ ಬಳಿ ನದಿಯ ಇಕ್ಕೆಲಗಳಲ್ಲಿ ಉಂಟಾಗುವ ಮಣ್ಣಿನ ಕೊರೆತದ ಬಗ್ಗೆ ಜಿಪಿಎಸ್ ಆಧರಿತ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು ಬಳಿಕ ಹೊನ್ನಳ್ಳಿ ಏತ ನೀರಾವರಿ ಘಟಕವನ್ನು ವೀಕ್ಷಿಸಿದರು.
ಜುಲೈ 23 ರಂದು ಭಾರೀ ಮಳೆ ಹಾಗೂ ಗಂಗಾವಳಿ ನದಿ ಪ್ರವಾಹದ ಪರಿಣಾಮ ತಾಲೂಕಿನ ಏತ ನೀರಾವರಿ ಘಟಕಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ನಾಲ್ಕು ಘಟಕಗಳಿದ್ದು ಹೊನ್ನಳ್ಳಿ, ಡೋಂಗ್ರಿ, ಸಂತೆಪೇಟೆ, ಶಿರಗುಂಜಿ ಎಲ್ಲ ನಾಲ್ಕೂ ಘಟಕಗಳು ಮುಳುಗಡೆಯಾಗಿ ಪಂಪ್ ಹೌಸ್ ಮತ್ತು ವಿದ್ಯುತ್ ಉಪಕರಣಗಳಿಗೆ ತೀವ್ರ ಹಾನಿಯುಂಟಾಗಿದೆ.
ಇದನ್ನೂ ಓದಿ:ಸಿಗಂದೂರು ಲಾಂಚಿನಲ್ಲಿ ಸ್ಥಳೀಯರಿಗೆ ಸಿಗದ ಆದ್ಯತೆ; ಆಕ್ರೋಶ
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿ, ಮೃತ್ಯುಂಜಯ ಸ್ವಾಮಿ, ತಾಲೂಕು ದಂಡಾಧಿಕಾರಿ ಉದಯ ಕುಂಬಾರ, ತಾ.ಪಂ.ಈಓ ಪಿ.ವೈ.ಸಾವಂತ, ಉ.ಕ.ಸಣ್ಣ ನೀರಾವರಿ ಇಲಾಖೆಯ ಅಸಿಸ್ಟಂಟ್ ಎಕ್ಸಿಕ್ಯೂಟಿವ್. ಎಂಜಿನೀಯರ ವಿನೋದ ನಾಯ್ಕ, ಸೀನಿಯರ ಎಂಜಿನೀಯರ ರೂಪಾ ಉಪಸ್ಥಿತರಿದ್ದರು.
ಪ್ರವಾಹದಿಂದ ನದಿ ಪಾತ್ರದ ಕೃಷಿ ಜಮೀನುಗಳು ಕೊಚ್ಚಿ ಹೋಗದಂತೆ ನದಿಯ ಎರಡೂ ಕಡೆ ರಕ್ಷಣಾ ಗೋಡೆ ನಿರ್ಮಿಸಿ ರೈತರು ಪ್ರವಾಹದಿಂದ ಕಳೆದುಕೊಂಡ ಜಮೀನು ಮತ್ತೆ ಸಿಗುವಂತಾಗಬೇಕು ಎಂದು ಮೊಗಟಾ ಜಿ.ಪಂ.ಮಾಜಿ ಸದಸ್ಯ ಜಗದೀಶ ನಾಯಕ ಹೇಳಿದರು.