ಅಂಕೋಲಾ : ತನ್ನ ಪತ್ನಿ ಹಾಗೂ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು 112ಕ್ಕೆ ಕರೆ ಮಾಡಿ ಗೋಗೆರೆದಿದ್ದ ವ್ಯಕ್ತಿಯೊಬ್ಬನ ಕರೆ ಆಧರಿಸಿ ಸ್ಥಳಕ್ಕೆ ಹೋದ ಪೊಲೀಸರೇ ಶಾಕ್ ಆದ ಘಟನೆ ಹಿಲ್ಲೂರಿನ ಬಿಲ್ಲನಬೈಲನಲ್ಲಿ ನಡೆದಿದೆ.
ಹಿಲ್ಲೂರಿನ ಬಿಲ್ಲನಬೈಲನ ಮಂಜುನಾಥ ಬೊಮ್ಮಯ್ಯ ನಾಯಕ ಎಂಬಾತ 112ಕ್ಕೆ ಕರೆ ಮಾಡಿ, ನನ್ನ ಪತ್ನಿ ಹಾಗೂ ಮಗಳನ್ನು ಯಾರೋ ಭೀಕರವಾಗಿ ಕೊಲೆ ಮಾಡಿ ತೆರಳಿದ್ದಾರೆ. ನನಗೇಕೋ ಹೆದರಿಕೆ ಆಗುತ್ತಿದೆ. ಕೂಡಲೆ ಸ್ಥಳಕ್ಕೆ ಬರುವಂತೆ ವಿನಂತಿಸಿದ್ದ.
ಕೂಡಲೆ ಕಾರವಾರದಿಂದ ವೈಯರ್ ಲೆಸ್ ಮೂಲಕ ಕೂಡಲೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುವಂತೆ ಆದೇಶ ಬಂದಿತ್ತು. ಕರೆ ಸ್ವೀಕರಿಸಿದ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬಂದಿ ಪ್ರವೀಣ ಪೂಜಾರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಜೀಪನ್ನೇರಿ ತಾಲೂಕು ಕೇಂದ್ರದಿಂದ 37 ಕಿಲೋ ಮೀಟರ್ ದೂರವಿರುವ ಹಿಲ್ಲೂರಿಗೆ ತೆರಳಿದ್ದರು.
ಕರೆ ಬಂದ 25 ನಿಮಿಷದಲ್ಲೇ ಪೊಲೀಸರು ಸ್ಥಳಕ್ಕೆ ತೆರಳಿ ಮಂಜುನಾಥ ಬೊಮ್ಮಯ್ಯ ನಾಯಕ ಅವರ ಮನೆಯ ಸುತ್ತಮುತ್ತ ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.. ಆದರೆ 15 ನಿಮಿಷ ಕಳೆದರೂ ಶವ ಪತ್ತೆ ಆಗಲಿಲ್ಲ. ಆ ವೇಳೆ ಅಲ್ಲಿಯೇ ಮುಗುಳನಗುತ್ತಲೆ ಇದ್ದ, ಕರೆ ಮಾಡಿದ್ದ ಮಂಜುನಾಥ ನಾಯಕ ನಿಮಗೆ ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ. ಮಾತ್ರವಲ್ಲದೆ ಸಿಗಲ್ಲಾ ಬಿಡಿ ಅವರು ಮುಂದೆ ಕೊಲೆ ಆದರೂ ಆಗಬಹುದು. ನಾನೆ ಮುನ್ನೆಚ್ಚರಿಕೆಯಾಗಿ ಕರೆ ಮಾಡಿದ್ದೆ. ಅವರು ಮನೆಯಲ್ಲಿ ಕಾಣುತ್ತಿಲ್ಲ. ಹಾಗಾಗಿ ಸುಳ್ಳು ಕರೆ ಮಾಡಿದ್ದೆ ಎಂದು ಪೊಲೀಸರ ಮುಂದೆ ಹಲ್ಲು ಕಿರಿದು ನಗೆಯಾಡಿದ್ದಾನೆ. ಆತನ ಮಾತು ಕೇಳಿ ಪಿತ್ತ ನೆತ್ತಿಗೆ ಏರಿದ ಪೊಲೀಸರು ನಾಲ್ಕು ಬಿಗಿದು ಲಾಠಿ ರುಚಿ ತೋರಿಸಿದ್ದಾರೆ.
ಮಾನಸಿಕ ಅಸ್ವಸ್ಥ
ಹಿಲ್ಲೂರು ಗ್ರಾಮದಲ್ಲಿ ಕೊಲೆಯಾಗಿದೆ ಎಂದು ವಿಷಯ ತಿಳಿದ ಕೂಡಲೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಇತನ ಮನೆಯವರು ಆತ ಮಾನಸಿಕ ಅಸ್ವಸ್ಥನಾಗಿ ಕಳೆದೊಂದು ವರ್ಷದಿಂದ ಹೀಗೆ ಮಾಡುತ್ತಿದ್ದಾನೆ. ಇತನ ಕಿರುಕುಳದಿಂದ ಬೇಸತ್ತು ಪತ್ನಿ– ಮಕ್ಕಳು ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇತ ಮಾನಸಿಕ ಅಸ್ವಸ್ಥ ಎಂದು ತಿಳಿದ ಪೊಲೀಸರು ನಿಟ್ಟಿಸಿರು ಬಿಟ್ಟು ಮತ್ತೆ ಅಂಕೋಲಾ ಠಾಣೆಯತ್ತ ಮುಖ ಮಾಡಿದ್ದಾರೆ.
”ಹಿಲ್ಲೂರಿನಲ್ಲಿ ಡಬಲ್ ಮರ್ಡರ್ ಆಗಿದೆ ಎಂದು ಮಾಹಿತಿ ಬಂದಿತ್ತು. ಕೂಡಲೆ ಕಾರ್ಯಪ್ರವೃತ್ತರಾಗಿದ್ದೇವು. ಆದರೆ ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಆತ ಸುಳ್ಳು ಮಾಹಿತಿಯನ್ನು 112 ಗೆ ನೀಡಿದ್ದ” ಎಂದು ಅಂಕೋಲಾ ಪೊಲೀಸ್ ಠಾಣೆ ಪಿಎಸೈ ಉದ್ದಪ್ಪ ಧರೆಪ್ಪನವರ್ ತಿಳಿಸಿದ್ದಾರೆ.