Advertisement

Ankola:ಹಣ ಕೀಳುತ್ತಿದ್ದ ನಕಲಿ ಮಂಗಳಮುಖಿಗೆ ಹಿಗ್ಗಾಮುಗ್ಗಾ ಗೂಸಾ

11:17 PM Jun 21, 2024 | Team Udayavani |

ಅಂಕೋಲಾ : ಮಂಗಳಮುಖಿಯರ ರೀತಿಯಲ್ಲಿ ವೇಷಭೂಷಣ ಧರಿಸಿ ಹಣ ಕೀಳುವ ಕಾಯಕದಲ್ಲಿ ತೊಡಗಿದ್ದ ಪುರುಷನೋರ್ವ ನೈಜ ಮಂಗಳಮುಖಿಯ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದ ಘಟನೆ ಪಟ್ಟಣದಲ್ಲಿ ಜರುಗಿದೆ.

Advertisement

ಸುರತ್ಕಲ್ ಮೂಲದ ವ್ಯಕ್ತಿ ಎಂದು ಹೇಳಿಕೊಳ್ಳುವ ಈತ ಕಳೆದ ಕೆಲವು ದಿನಗಳಿಂದ ಮಂಗಳಮುಖಿಯರಂತೆ ಬಟ್ಟೆಗಳನ್ನು ಧರಿಸಿ ಗಡ್ಡ ಮೀಸೆ ಬೋಳಿಸಿಕೊಂಡು ಜಿಲ್ಲೆಯಾದ್ಯಂತ ಹಣ ಪಡೆಯುತ್ತಿದ್ದ ಎಂದು ಹೇಳಲಾಗುತ್ತಿದೆ. ಅಸಲಿ ಮಂಗಳಮುಖಿಯರು ನಿಯಮಿತವಾಗಿ ತೆರಳುವ ಕೆಲವು ಸ್ಥಳಗಳಲ್ಲಿ ಅವರಿಗಿಂತ ಮುನ್ನವೇ ಹಣ ಪಡೆದುಕೊಂಡು ಮಾಯವಾಗುತ್ತಿದ್ದ. ನಂತರ ಇನ್ನೊಂದು ಸ್ಥಳಕ್ಕೆ ತೆರಳಿ ಪಡೆದು ಮಾಡುತ್ತಿದ್ದ.

ಮಂಗಳಮುಖಿಯರು ಅಂಗಡಿಗಳಿಗೆ ತೆರಳಿದಾಗ ಈಗಾಗಲೇ ಹಣ ನೀಡಿರುವುದಾಗಿ ಅಂಗಡಿಕಾರರು ತಿಳಿಸಿದ ವೇಳೆ ಯಾರೋ ಅಪರಿಚಿತರು ಮಂಗಳಮುಖಿಯರ ಹೆಸರಿನಲ್ಲಿ ಹಣ ಎತ್ತುತ್ತಿರುವುದು ತಿಳಿದು ಬಂದಿದೆ. ಕಳೆದ ವಾರ ಮುರುಡೇಶ್ವರದಲ್ಲಿ ಇದೇ ರೀತಿಯಾಗಿ ಅಂಗಡಿಗೆ ತೆರಳಿ ಮಂಗಳಮುಖಿಯರ ವೇಷದಲ್ಲಿ ಭಿಕ್ಷೆ ಸಂಗ್ರಹಿಸಿದ್ದ. ಮಂಗಳಮುಖಿಯರ ಸಂಘದವರು ನಕಲಿ ಮಂಗಳಮುಖಿಯರನ್ನು ಪತ್ತೆ ಹಚ್ಚಲು ಹೊಂಚು ಹಾಕಿ ಕೂತಿದ್ದರು ಎನ್ನಲಾಗಿದೆ.

ಗುರುವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಅಂಗಡಿಯಲ್ಲಿ ಮಂಗಳಮುಖಿಯೆಂದು ಹೇಳಿಕೊಂಡು ಹಲವರಿಂದ ಹಣ ವಸೂಲಿ ಮಾಡಿದ್ದ. ಈ ನಡುವೆ ನಿಯಮಿತವಾಗಿ ಬರುವ ಮಂಗಳಮುಖಿಯರ ಪರಿಚಯಸ್ಥ ಬೆಳಂಬಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇವ ಗೌಡ ನಕಲಿ ಮಂಗಳಮುಖಿಯನ್ನು ಪತ್ತೆ ಮಾಡಿದ್ದಾರೆ. ಅವನ ಹಿಂದೆಯೇ ನಿಯಮಿತವಾಗಿ ಬರುವ ಮಂಗಳಮುಖಿ ಹಣ ಕೇಳಲು ಬಂದಾಗ ಅಂಗಡಿಕಾರರು ಈಗಾಗಲೇ ಹಣ ನೀಡಿದ್ದಾಗಿ ಹೇಳಿ ನಕಲಿ ಮಂಗಳಮುಖಿಯನ್ನು ತೋರಿಸಿದ್ದಾರೆ. ಸಿನಿಮಾ ಶೈಲಿಯಲ್ಲಿ ಬೆನ್ನತ್ತಿದ್ದ ನೈಜ ಮಂಗಳಮುಖಿ ವೇಷ ಧರಿಸಿದ ಪುರುಷನನ್ನು ಪಟ್ಟಣದ ಕ್ರೈಸ್ತ ಮಿತ್ರ ಚರ್ಚ್ ಬಳಿ ಹಿಡಿದು ಥಳಿಸಿದ್ದಾರೆ.

ಮಂಗಳಮುಖಿಯೆಂದು ವೇಷ ಧರಿಸಿದ ವ್ಯಕ್ತಿಯ ಬ್ಯಾಗ್ ಪರಿಶೀಲನೆ ಮಾಡಿದಾಗ ಪುರುಷರ ಬಟ್ಟೆಗಳು ದೊರೆತಿದ್ದು, ಎಲ್ಲಿಯೂ ಕೆಲಸ ಸಿಗದೇ ಇದ್ದಾಗ ಈ ದಂಧೆಗೆ ಇಳಿದಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ನಂತರ ಸಂಘದ ಮುಖ್ಯಸ್ಥೆಗೆ ಕರೆ ಮಾಡಿ ಈ ವಿಷಯ ತಿಳಿಸಿದಾಗ ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next