ಆ ದಿನ ಕೊನೆಯ ಕ್ಲಾಸ್ ಬಂಕ್ ಮಾಡಿ ಕಾಲೇಜ್ ಬಳಿಯ ಬಸ್‌ಸ್ಟಾಪ್‌ಗೆ ಬಂದಿದ್ದೆ. ಆಗಿದ್ದೆಲ್ಲಾ ಆಮೇಲೆಯೇ… ಏನೋ ಗಾಬರಿ, ಎಲ್ಲಿಗೋ ಬೇಗ ಹೋಗಬೇಕು ಎಂಬ ತವಕದಿಂದ ಬಸ್ಸಿಗಾಗಿ ಕಾಯುತ್ತಾ ಮುದ್ದು ಮುಖದ ಹುಡುಗಿಯೊಬ್ಬಳು ಅಲ್ಲಿ ನಿಂತಿದ್ದಳು. ಅವಳನ್ನು ಕಂಡಾಗ ಮನದಲ್ಲಿ ಏನೋ ತಳಮಳ, ನನ್ನನ್ನು ನಾನು ಮರೆತು ಬೇರೊಂದು ಲೋಕಕ್ಕೆ ಹೋದ ಅನುಭವವಾಯ್ತು. ಆ ಸೌಂದರ್ಯ, ಸರಳತೆ, ಹಿಡಿಯಷ್ಟು ಅಹಂಕಾರವಿಲ್ಲದ ಅವಳ ಮುಖ ನನಗೆ ಹುಚ್ಚು ಹಿಡಿಸಿಬಿಟ್ಟಿತು. ಯಾರಿವಳು? ಎಂದು ಯೋಚಿಸುತ್ತಿರುವಾಗಲೇ ನನ್ನ ಬಸ್ಸು ಬಂತು.
ಅದೇನು ಅದೃಷ್ಟವೋ; ಅವಳು ಕೂಡಾ ಆ ಬಸ್ಸನ್ನೇ ಹತ್ತಿ, ಎದುರುಗಡೆ ಸೀಟಿನಲ್ಲಿಯೇ ಕುಳಿತುಕೊಂಡಳು. ಕಣೆಪ್ಪೆ ಮಿಟುಕಿಸದೆ ಅವಳನ್ನೇ ನೋಡುತ್ತಿದ್ದೆ. ಎರಡೇ ನಿಮಿಷದ ನೋಟದಿಂದಲೇ ನನ್ನೆದೆಯ ಗುಡಿಯಲ್ಲಿ ಒಲುಮೆಯ ದೀಪ ಹೊತ್ತಿಸಿದಳು ಅವಳು. ನೋಡನೋಡುತ್ತಿದ್ದಂತೆ ನನ್ನೂರು ಬಂದಿತ್ತು. ಮನಸ್ಸಿಲ್ಲದ ಮನಸ್ಸಿನಲ್ಲಿ ಬಸ್ಸಿನಿಂದ ಇಳಿದಾಗ ಏನೋ ಕಳೆದುಕೊಂಡ ಭಾವ. ಮನೆಗೆ ಬಂದ ಮೇಲೂ ಎಲ್ಲಿ ನೋಡಿದರೂ ಅವಳ ಮುಖವೇ ಕಾಣುತ್ತಿತ್ತು. ಒಂದೆರಡು ದಿನ ಮನದಲ್ಲಿ ಏನೋ ಮೌನ-ಬೇಸರ. ಹೃದಯದಲ್ಲಿ ದಿನವೂ ಅವಳದೇ ದೀಪೋತ್ಸವ.
ಇವೆÇಲ್ಲಾ ಆಗಿ ಸುಮಾರು ತಿಂಗಳ ನಂತರ, ಇನ್ನೇನು ಪರೀಕ್ಷೆ ಹತ್ತಿರವಾಗಿ ಕಾಲೇಜು ಮುಗಿಯುವ ದಿನಗಳಲ್ಲಿ ಮತ್ತೆ ಅವಳು ಕಾಲೇಜಿನಲ್ಲಿ ಕಣ್ಣಿಗೆ ಬಿದ್ದಳು. ನನಗಾದ ಸಂತೋಷಕ್ಕೆ ಪಾರವೇ ಇಲ್ಲ. ಅವಳು ನನ್ನ ಜೂನಿಯರ್ ಅಂತ ಗೊತ್ತಾಗಿದ್ದೇ ಆಗ. ಕಾಲೇಜು ಮುಗಿಯಲು ಮೂವತ್ತು ದಿನ ಮಾತ್ರ ಬಾಕಿಯಿತ್ತು. ಅಷ್ಟರಲ್ಲಿ ಹೇಗಾದರೂ ಮಾಡಿ ಅವಳನ್ನು ಮಾತಾಡಿಸಬೇಕು ಅಂತ ಭಾರೀ ಪ್ರಯತ್ನ ಮಾಡಿದೆ.
“ಯಾಕೋ ಅವ ಹಿಂದೆ ಬಿದ್ದಿದ್ದೀಯಾ? ಬೇರೆ ಯಾರು ಸಿಗಲಿಲ್ವೇನೋ ನಿಂಗೆ? ಒಳ್ಳೆ ಸೊಕ್ಕಿನ ಹುಡ್ಗಿ ತರಾ ಕಾಣಾ¤ಳೆ’ ಎಂದು ಸ್ನೇಹಿತರು ಗದರಿದರೂ ನನ್ನ ಮನಸ್ಸು ಅವಳಿಂದ ಒಂದಿಂಚೂ ಆಚೀಚೆ ಅಲ್ಲಾಡಲಿಲ್ಲ. ಅವಳದೇ ಧ್ಯಾನದಲ್ಲಿ ಆರು ಪರೀಕ್ಷೆಗಳು ಮುಗಿದು, ಕೊನೆಯ ಪರೀಕ್ಷೆಯ ದಿನ ಬಂತು. ಬಸ್ ಇಳಿದು ಕಾಲೇಜ್ ಕಡೆ ಹೋಗುತ್ತಿದ್ದೆ. ಎದುರಿಂದ ಅವಳು ಬರುತ್ತಿದ್ದಳು. ಹಿಂದಿನ ದಿನವೇ ಅವಳ ಪರೀಕ್ಷೆಗಳೆಲ್ಲ ಮುಗಿದಿದ್ದರಿಂದ ಊರಿಗೆ ಹೋಗುವ ತವಕದಲ್ಲಿದ್ದಳು.
ಇಬ್ಬರೂ ರಸ್ತೆಯಲ್ಲಿ ಎದುರು-ಬದುರಾದೆವು. ಅವಳು ನನ್ನನ್ನು ನೋಡಿಯೂ ನೋಡದ ಹಾಗೆ ಮುಖ ತಿರುಗಿಸಿ ಹೊರಟೇ ಹೋದಳು.
ಸಂಜೆ ಮನೆಗೆ ಹೋಗುವಾಗ ಮನದಲ್ಲಿ ದುಃಖ ಆವರಿಸಿತ್ತು. ಒಂದು ಕಡೆ ಕಾಲೇಜು ಮುಗಿಯಿತು ಎಂಬ ಬೇಸರ, ಇನ್ನೊಂದು ಕಡೆ ಇಷ್ಟ ಪಟ್ಟವಳು ಸಿಗಲಿಲ್ಲ ಎಂಬ ನೋವು. ಸಂಜೆ ಅದೇ ಅಂಕೋಲಾ ಬಸ್ ಹತ್ತಿ ಕಿಟಕಿಗೆ ತಲೆ ಒತ್ತಿ ಕುಳಿತುಕೊಡೆ.
ಆಗ ತಾನೇ ಶುರುವಾಗಿದ್ದ ಮುಂಗಾರು ಮಳೆಯ ಜಿಟಿ-ಜಿಟಿ ಹನಿಗಳು, ಜೊತೆಗೆ ಒದ್ದೆ ಕಂಗಳು. ಬಸ್ ಇಳಿದು, ಸುರಿವ ಆ ಮೊದಲ ಮಳೆಯಲ್ಲಿ ನೆನೆಯುತ್ತಾ, ನಮ್ಮೂರಿನ ಸೇತುವೆಯ ಮೇಲೆ ಹೆಜ್ಜೆ ಹಾಕುವಾಗ ಆಕಾಶದ ಕಾಮನಬಿಲ್ಲಿನ ಮೇಲೆ ಕಾಣಿಸಿದ್ದು ಅವಳದೇ ಮುದ್ದು ಮುಖ. ಆದರೂ ಹೃದಯ ಹೇಳುತ್ತಿದೆ- ಅವಳು ಮುಂದೊಂದು ದಿನ ಸಿಕ್ಕೇ ಸಿಗುತ್ತಾಳೆ. ಅವಳ ಜೊತೆ ನಾನು ಮಾತಾಡೇ ಆಡುತ್ತೀನಿ ಅಂತ…
* ಎಂ. ನಾಗಪ್ಪ ಪ್ರಭು, ಅಂಕೋಲಾ