“ಪರೀಕ್ಷೆ ಬರೆದಾಗಿದೆ, ಎಷ್ಟು ಅಂಕ ಬರ್ತಾವೋ ಗೊತ್ತಿಲ್ಲ, ಕಾತುರದಿಂದ ಇದ್ದೀನಿ’ – ಹೀಗೆ ಹೇಳಿ ನಕ್ಕರು ನಟಿ ಅಂಕಿತಾ ಅಮರ್.
ಕನ್ನಡ ಜನತೆಗೆ ಈ ನಟಿ ಹೊಸಬರೇನಲ್ಲ. ಕಿರುತೆರೆಯಲ್ಲಿ ನಟನೆ, ನಿರೂಪಣೆ ಮಾಡಿ ಸೈ ಎನಿಸಿಕೊಂಡ ಈ ಅಪ್ಪಟ ಕನ್ನಡತಿ ಸದ್ಯ ಸಿನಿರಂಗದಲ್ಲಿ ತಮ್ಮ ಭವಿಷ್ಯ ಕಾಣುವ ಹೊಸ್ತಿಲಲ್ಲಿದ್ದಾರೆ. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ನಾಯಕ ನಟಿ ಅಂಕಿತಾ, ತಮ್ಮ ಸಿನಿಯಾನದ ಅಂಬೆಗಾಲಿನ ಕ್ಷಣಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಈ ಚಿತ್ರ ಸೆ.5ರಂದು ತೆರೆಕಾಣುತ್ತಿದೆ. ಸೆ.4ರಂದು ವಿಶೇಷ ಪ್ರೀಮಿಯರ್ ಶೋ ನಡೆಯಲಿದೆ. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಆಯ್ಕೆಯಾಗಿದ್ದೇ ಒಂದು ಸೋಜಿಗ ಎನ್ನುತ್ತಾರೆ ಅಂಕಿತಾ.
ಚಿತ್ರದ ಪಾತ್ರದ ಬಗ್ಗೆ ಮಾತನಾಡುತ್ತ, “ಈ ಚಿತ್ರದ ನಟನೆಗೆ ಯಾವುದೇ ಆಡಿಷನ್ ಕೊಟ್ಟಿರಲಿಲ್ಲ. ನನ್ನದೊಂದು ಪೋಸ್ಟ್ ನೋಡಿ ನಿರ್ದೇಶಕರು ಭೇಟಿಯಾಗಿ ಮಾತನಾಡಿದರು. ಕೇವಲ ನನ್ನ ಕಣ್ಣು ನೋಡಿ ಅನಾಹಿತಾ ಪಾತ್ರಕ್ಕೆ ಆಯ್ಕೆ ಮಾಡಿದರು. ಅನಾಹಿತಾ ನೆನಪುಗಳೊಟ್ಟಿಗೆ ಸಾಗುವ ಭಾವನಾತ್ಮಕ ಹುಡುಗಿ. ಕವಯಿತ್ರಿ ಕೂಡ. ಅನಾಹಿತಾ ಹೆಸರೇ ಸುಂದರ, ನದಿ ಉಗಮವಾಗುವ ಸ್ಥಳ ಎಂಬುದು ಇದರರ್ಥ. ನದಿಯಲ್ಲಿ ನೀರು ಹರಿಯುವಂತೆ ಇವಳಲ್ಲಿ ಭಾವನೆ ಹರಿಯುತ್ತವೆ. ತನ್ನ ಕನಸು, ಭಾವನೆ, ಮನೋಭಿಲಾಷೆ ಯಾವುದನ್ನೂ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಫೋಟೋ ತೆಗೆಯುದು, ಫೋಟೋಗೆ ತಕ್ಕ ಕವಿತೆಯನ್ನು ಡೈರಿಯಲ್ಲಿ ಬರೆಯೋದು ಇದೇ ಅವಳ ಪ್ರವೃತ್ತಿ. ಚಿತ್ರದಲ್ಲಿ ಮೂರು ರೂಪಗಳಲ್ಲಿ ಅನಾಹಿತಾ ಪ್ರೇಕ್ಷಕರ ಮುಂದೆ ಕಾಣುತ್ತಾಳೆ. ನನ್ನ ವ್ಯಕ್ತಿತ್ವವೂ ಹೀಗೆ. ಹಾಗಾಗಿ ಅನಾಹಿತಾ ನನಗೆ ಆಪ್ತವಾಗಿದ್ದಾಳೆ’ ಎನ್ನುತ್ತಾರೆ ಅಂಕಿತಾ.
ನಟಿ ಅಂಕಿತಾಗೆ ಚಂದನವನದಲ್ಲಿ ಇದು ಚೊಚ್ಚಲ ಚಿತ್ರ. ಹಾಗಾಗಿ ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಸಿನಿಮಾ ಬಗ್ಗೆ ಮತ್ತಷ್ಟು ಹೇಳುವ ಅವರು, “ಅಮೃತವರ್ಷಿಣಿ, ನಮ್ಮೂರ ಮಂದಾರ ಹೂವೆ ಚಿತ್ರಗಳಂತೆ ಈ ಚಿತ್ರದಲ್ಲಿ ಹಾಡುಗಳು ಪ್ರಧಾನವಾಗಿವೆ. “ಓ ಅನಾಹಿತಾ’ ಎಂಬ ಆಚರಣೆ ಮಾಡುವ ಹಾಡಿದೆ, “ಸದಾ ನೀನೆ’ ಎಂಬ ಸಾಹಿತ್ಯಕ್ಕೆ ಒತ್ತು ನೀಡಿರುವ ಹಾಡು, ಭಾವಗೀತೆ ಶೈಲಿಯ “ಹೇಳು ಗೆಳತಿ’, ಶಾಸ್ತ್ರೀಯ ಲೇಪನದ “ರಾಧೆ ನೀನು ಆರಾಧಿಸಿ’ ಹಾಡುಗಳು ಸಂಗೀತ ಪ್ರಿಯರಿಗೆ ಇಷ್ಟವಾಗುತ್ತೆ. ಇಲ್ಲಿ ನೈಜತೆ, ಸರಳತೆ, ಸುಂದರ ಸಾಹಿತ್ಯವಿದೆ. ಕನ್ನಡ ಚಿತ್ರರಂಗದಲ್ಲೂ ಈ ಶೈಲಿಯ ಸಿನಿಮಾ ಮಾಡಬಹುದು ಎಂದು ತೋರಿಸಿದ್ದೇವೆ’ ಎಂಬುದು ಅಂಕಿತಾ ಅಂತರಾಳದ ಮಾತುಗಳು.
ಪರಂವಃ ಸ್ಟುಡಿಯೋಸ್‌ನಡಿ ಕೆಲಸ ಮಾಡಿದ ಅನುಭವದ ಬಗ್ಗೆ ಹೇಳುವ ಅವರು, “ಮೊದಲಿಗೆ ಇದು ಪರಂವಃ ಚಿತ್ರ ಎಂದು ಗೊತ್ತಿರಲಿಲ್ಲ. ನಂತರ ಗೊತ್ತಾದಾಗ
ಬಹಳ ಖುಷಿಯಾಯಿತು. ಇದೊಂದು ಕಲಾವಿದರಿಗೆ ಶಾಲೆ ಇದ್ದಂತೆ. ಸೃಜನಾತ್ಮಕತೆಗೆ ಇಲ್ಲಿ ಹೆಚ್ಚು ಜಾಗವಿದೆ. ಒಬ್ಬರ ಕನಸಿಗೆ ಇನ್ನೊಬ್ಬರು ಇಲ್ಲಿ ಹೆಗಲು ನೀಡುತ್ತಾರೆ. ಇದು ನನಗೊಂದು ಹೊಸ ಪ್ರಪಂಚ’ ಎನ್ನುತ್ತಾರೆ ಅಂಕಿತಾ.