ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಹನುಮ ಜಯಂತಿಗೆ ಬುಧವಾರ ಚಾಲನೆ ನೀಡಲಾಗಿದೆ. ಉತ್ತರ ಪ್ರದೇಶದ ಬೃಂದಾವನದ ಗೋರಕ್ಷಕ ಮಠದ ಶ್ರೀರಾಮದಾಸ ಮಹಾರಾಜ ನೇತೃತ್ವದಲ್ಲಿ 108 ಸಾಧು ಸಂತರು ಭಾಗಿಯಾಗಿ ಚಾಲನೆ ನೀಡಿದರು.
ಕುಂಭೋತ್ಸವಕ್ಕೆ ಋಷಿಮುಖ ಪರ್ವತದ ಬಳಿ ಇರುವ ತುಂಗಭದ್ರಾ ನದಿಯಿಂದ ಸಾಧುಸಂತರು -ಸುಮಂಗಲಿಯ ಸುಮಾರು ೩ ಕಿ.ಮೀ. ಸಾಗಿ ಅಂಜನಾದ್ರಿಯನ್ನು ಹತ್ತಿ 108 ಕುಂಭಗಳಲ್ಲಿ ತರಲಾಗಿದ್ದ ಪವಿತ್ರ ತುಂಗಭದ್ರಾ ನದಿಯ ಜಲದ ಮೂಲಕ ಆಂಜನೇಯನ ಮೂರ್ತಿಗೆ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಜನಾದ್ರಿಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಹನುಮ ಜಯಂತೋತ್ಸವ ಆರಂಭವಾಗಿದ್ದು ಉತ್ತರ ಪ್ರದೇಶದ ಬೃಂದಾವನದ ಗೋರಕ್ಷಕ ಮಠದ ಶ್ರೀರಾಮದಾಸ ಮಹಾರಾಜ ನೇತೃತ್ವದಲ್ಲಿ 108 ಸಾಧು ಸಂತರು ಅಂಜನಾದ್ರಿಗೆ ಆಗಮಿಸಿದ್ದು 9 ದಿನಗಳ ವರೆಗೂ ಇಲ್ಲಿ ಹಲವು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಈಗಾಗಲೇ ಅಂಜನಾದ್ರಿಯ ಮೇಲೆ 108 ಸಾಧು ಸಂತರಿಗೆ ವಸತಿ ಹಾಗೂ ಧಾರ್ಮಿಕ ಹೋಮ ಹವನ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹನುಮಂತನ ಜನ್ಮ ಸ್ಥಳ ಎಂದು ಗಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದ್ದು ಉತ್ತರ ಭಾರತದ ಸಾವಿರಾರು ಹನುಮ ಭಕ್ತರು ನಿತ್ಯವೂ ಇಲ್ಲಿಗೆ ಆಗಮಿಸುತ್ತಿದ್ದಾರೆ. ಚಾರ್‌ಧಾಮ್ ಯಾತ್ರೆಯ ಸಂದರ್ಭದಲ್ಲಿ ಅಂಜನಾದ್ರಿ ಪಂಪಾಸರೋವರಕ್ಕೆ ಹೆಚ್ಚಿನ ಆದ್ಯತೆ ಇದೆ. ಕಿಷ್ಕಿಂದಾ ಅಂಜನಾದ್ರಿಗೂ ಉತ್ತರದ ಅಯೋಧ್ಯೆ, ಮಥುರಾ ಹೀಗೆ ಉತ್ತರ ಭಾರತದ ಹಲವು ಕ್ಷೇತ್ರಗಳಿಗೆ ನೇರ ಸಂಬಂಧವಿದ್ದು ಇಲ್ಲಿಗೆ ಸಾಧು ಸಂತರು ಆಗಮಿಸಿದ್ದು ಹನುಮ ಜಯಂತಿಗೆ ಮಹತ್ವ ಬಂದಿದೆ. ಈ ಭಾರಿಯ ಹನುಮ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ಟ್ರಸ್ಟ್ ಹಾಗೂ ಭಕ್ತರ ಸಹಕಾರದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೃಂದಾವನದ ಗೋರಕ್ಷಕ ಮಠದ ಶ್ರೀರಾಮದಾಸ ಮಹಾರಾಜ, ಅಂಜನಾದ್ರಿಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ, ಕಾಂಗ್ರೆಸ್ ಮುಖಂಡ ರಾಜು ನಾಯಕ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ನರಸಿಂಹಲು ಸೇರಿ ಹನುಮನಹಳ್ಳಿ, ಚಿಕ್ಕರಾಂಪೂರ ಗ್ರಾಮಸ್ಥರಿದ್ದರು.