Advertisement

ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕಿದ್ದ ತಡೆಯಾಜ್ಞೆ ತೆರವು

06:30 AM Dec 30, 2017 | Team Udayavani |

ಬೆಂಗಳೂರು: ಅಂಜನಿಪುತ್ರ ಸಿನಿಮಾ ಪ್ರದರ್ಶನಕ್ಕಿದ್ದ ನಿರ್ಬಂಧ ತೆರವುಗೊಳಿಸಿ ಸಿಟಿ ಸಿವಿಲ್‌  ಕೋರ್ಟ್‌ ಆದೇಶಿಸಿದೆ.
ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಚಿತ್ರತಂಡ ತಪ್ಪೊಪ್ಪಿಕೊಂಡು , ಅಕ್ಷೇಪಾರ್ಹ ಸಂಭಾಷಣೆ ತೆಗೆಯಲು ಕೋರಿದ್ದ ಮನವಿಯನ್ನು ಸೆನ್ಸಾರ್‌ ಮಂಡಳಿ ಬೇಗ ಪುರಸ್ಕರಿಸಲಿಲ್ಲ. ಈ ಪ್ರಕ್ರಿಯೆಯಿಂದ ವಿಳಂಬವಾಯಿತು. ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದು ತಪ್ಪಾಗಿದೆ. 

Advertisement

ಮುಂದಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯಾಗುವಂತಹ ರೀತಿ ನಡೆದುಕೊಳ್ಳುವುದಿಲ್ಲ. ಈಗಾಗಲೇ ಚಿತ್ರತಂಡ ಸಾಕಷ್ಟು ನಷ್ಟ  ಅನುಭವಿಸಿದೆ. ಹೀಗಾಗಿ ಪ್ರದರ್ಶನಕ್ಕೆ ವಿಧಿಸಿದ್ದ ತಡೆಯಾಜ್ಞೆ ತೆರುವುಗೊಳಿಸುವಂತೆ ಕೋರಿ ಅಫಿಡವಿಟ್‌ ಸಲ್ಲಿಸಿದರು.

ಚಿತ್ರತಂಡದ ಅಫಿಡವಿಟ್‌ ಪುರಸ್ಕರಿಸಿದ ನ್ಯಾಯಪೀಠ, ಈ ಮೊದಲು ನ್ಯಾಯಾಲಯ ಆದೇಶ ಉಲ್ಲಂ ಸಿದ್ದಕ್ಕೆ 25 ಸಾವಿರ ರೂ.  ದಂಡ ವಿಧಿಸಿ. ಮುಂದಿನ  ದಿನಗಳಲ್ಲಿ ನ್ಯಾಯಾಂಗದ ಆದೇಶಗಳಿಗೆ ಬದ್ಧವಾಗಿರಬೇಕು ಎಂದು ಸಲಹೆ ನೀಡಿ, ಚಿತ್ರಪ್ರದರ್ಶನಕ್ಕಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶ ನೀಡಿತು.

ವಕೀಲರ ಕ್ಷಮೆಯಾಚಿಸಿದ ನಿರ್ದೇಶಕ ಹರ್ಷ!
ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಚಿತ್ರದ ನಿರ್ದೇಶಕ ಹರ್ಷ, ವಕೀಲರಿಗೆ ಅವಮಾನಿಸುವಂತಹ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ. ಆ ದೃಶ್ಯದ ಅಗತ್ಯತೆಗೆ ಅನುಗುಣವಾಗಿ ಸಂಭಾಷಣೆಯಿತ್ತು . ಇದರಿಂದ ವಕೀಲರಿಗೆ ನೋವಾಗಿದ್ದರೆ,  ಕ್ಷಮೆ ಕೋರುತ್ತೇನೆ ಎಂದರು. ಅಲ್ಲದೆ ಆಕ್ಷೇಪಾರ್ಹ ಸಂಭಾಷಣೆಯನ್ನು ತೆಗೆದು ಹಾಕುವುದಾಗಿ ತಿಳಿಸಿದರು.

ಪ್ರಕರಣ ಏನು?
ವಕೀಲ ಸಮುದಾಯಕ್ಕೆ  ಅವಮಾನವಾಗುವಂತಹ ಸಂಭಾಷಣೆಯನ್ನು ಚಿತ್ರದಲ್ಲಿ ಬಳಸಲಾಗಿದೆ. ಈ ಸಂಬಂಧ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ವಕೀಲ  ನಾರಾಯಣಸ್ವಾಮಿ ಮತ್ತಿತರರು  ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್‌ 23ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜನವರಿ 3ರವರೆಗೆ ಚಿತ್ರಪ್ರದರ್ಶನ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದ ಆದೇಶದ ಬಳಿಕವೂ ಚಿತ್ರಪ್ರದರ್ಶನ ಮುಂದುವರಿಸಿದ್ದರಿಂದ ವಕೀಲರು, ಅಂಜನಿಪುತ್ರ ಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ವಕೀಲ ನಾರಾಯಣಸ್ವಾಮಿ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದರು.

Advertisement

ಈ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ , ಮುಂದಿನ ವಿಚಾರಣೆಯವರೆಗೂ  ಅಂಜನಿ ಪುತ್ರ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರುವಂತೆ  ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next