Advertisement

ವೈಭವದ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

12:50 PM Apr 20, 2019 | keerthan |

ಹುಳಿಯಾರು: ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರೀ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

Advertisement

ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಯವರ ಧಾರ್ಮಿಕ ಕೈಂಕರ್ಯಗಳು ನಡೆದವು. ಸ್ವಾಮಿಯ ಪೂಜೆಯಿಂದ ಹಿಡಿದು, ಪತ್ತು, ನಗಾರಿ, ಧ್ವಜ, ಸೂರ್ಯಪಾನ, ಚಂದ್ರಪಾನ, ಚಾಮರ, ಮಕರ ತೋರಣ ಹೀಗೆ ಎಲ್ಲಾ ವಿವಿಧ ಕೈಂಕರ್ಯವನ್ನು ಪುರೋಹಿತ ವರ್ಗ ನೆರವೇರಿಸಿದ್ದು, ವಿಶೇಷವಾಗಿತ್ತು. ಆಂಜನೇಯಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಗೌಡಗೆರೆಯ ದುರ್ಗಮ್ಮದೇವರು ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಸಕಲ ವಾದ್ಯಮೇಳದೊಂದಿಗೆ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಬಂದ ನಂತರ ಕೆಂಚರಾಯಸ್ವಾಮಿ, ದೂತರಾಯ ಸ್ವಾಮಿ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ರಥದ ಬಳಿ ಕರೆತರಲಾಯಿತು. ಜೈಕಾರದೊಂದಿಗೆ ಶುಭಲಗ್ನದಲ್ಲಿ ಆಂಜನೇಯ ಸ್ವಾಮಿಯವರನ್ನು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥದ ಮುಂದೆ ನೆಟ್ಟಿದ್ದ ಕದಳಿ ಮರವನ್ನು ತುಂಡರಿಸಿದ ನಂತರ ಫಲಪುಷ್ಪಾದಿಗಳಿಂದ, ರಂಗಿನ ಬಾವುಟ, ತಳಿರು ತೋರಣಗಳಿಂದ ಅಲಂಕೃತಗೊಂಡ ರಥವನ್ನು ಮಂಗಳವಾದ್ಯ, ವೇದ ಘೋಷಗಳ ನಡುವೆ, ಜೈ ಹನುಮಾನ್‌ ಉದ್ಘೋಷದೊಂದಿಗೆ ಭಕ್ತರು ರಥವನ್ನು ಎಳೆದರು. ಭಕ್ತರು ದೂರದಿಂದಲೇ ಬಾಳೆಹಣ್ಣನ್ನು ರಥದ ಕಲಶಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮಹಿಳೆಯರು ಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿದರು. ಮೂವತ್ತು ಅಡಿಗೂ ಎತ್ತರದ ರಥೋತ್ಸವವನ್ನು ವೀಕ್ಷಿಸಲು ಅಪಾರ ಭಕ್ತರು ಆಗಮಿಸಿದ್ದರು.

ರಥೋತ್ಸವದ ನಂತರ ಬ್ರಾಹ್ಮಣರಿಗೆ ಸಂತರ್ಪಣೆ ನಡೆಯಿತಲ್ಲದೆ, ದೇವಾಲಯ ಸಮಿತಿ, ಆರ್ಯವೈಶ್ಯ ಜನಾಂಗದವರಿಂದ, ಯುವಕ ಸಂಘದವರಿಂದ ಭಕ್ತಾಗಳಿಗೆ ಪಾನಕ, ಫಲಾಹಾರ ಸೇವೆ ನಡೆಯಿತು. ರಥಕ್ಕೆ ಹಾಗೂ ಶ್ರೀ ಸ್ವಾಮಿಯವರಿಗೆ ಹಾಕಿದ ಹಾರಗಳನ್ನು ಹರಾಜಿನಲ್ಲಿ ಸಹಸ್ರಾರು ರೂ.ಗಳಿಗೆ ಕೊಳ್ಳುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು.

Advertisement

ಆರ್ಯವೈಶ್ಯ ಮಹಿಳಾ ಮಂಡಳಿ, ಶ್ರೀ ಮಾರುತಿ ಭಜನಾಮಂಡಳಿ ಹಾಗೂ ಎಮ್ಮೆಕರಕೆಹಟ್ಟಿ ”ಶ್ರೀರಾಮ ಭಜನಾ ಮಂಡಳಿ”ಯವರಿಂದ ಅಖಂಡ ಭಜನೆ ಹಾಗೂ ಕೆಳಗಲ ಗೊಲ್ಲರಹಟ್ಟಿ ಯಾದವ ತಂಡಗಳ ವಿಶೇಷ ಕೋಲಾಟ ಭಕ್ತರ ಗಮನ ಸೆಳೆಯಿತು. ಊರಿನ ತುಂಬೆಲ್ಲಾ ಕೇಸರಿ ಬಣ್ಣದ ಮಾರುತಿ ಧ್ವಜ ರಾರಾಜಿಸುತ್ತಿತ್ತು. ಶ್ರೀಸೇನೆಯ ಸ್ವಯಂಸೇವಕರು ಶಿಸ್ತಿನಿಂದ ಸಕಲ ಕಾರ್ಯಗಳಲ್ಲೂ ತೊಡಗಿಕೊಂಡು ನಿರ್ವಹಿಸಿದರು. ಬೇಸಿಗೆ ಬಿಸಿಲಿನ ಝಳವನ್ನು ಲೆಕ್ಕಿ ಸದೆ ದಬ್ಬಗುಂಟೆ, ರಂಗನಕೆರೆ, ಹೊಯ್ಸಳಕಟ್ಟೆ, ಕಲ್ಲೇನ ಹಳ್ಳಿ, ಮರೆನಡು, ಹುಳಿಯಾರು, ಬೆಳ್ಳಾರ ಸೇರಿದಂತೆ ದಸೂಡಿ ಸುತ್ತಮುತ್ತಲ ಹತ್ತಾರೂ ಹಳ್ಳಿಗಳ ಜನರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಇಂದಿನಿಂದ ಕೊಲ್ಲಾಪುರದಮ್ಮನ ವಾರ್ಷಿಕೋತ್ಸವ

ಹುಳಿಯಾರು: ಇಲ್ಲಿನ ಹೊಸಹಳ್ಳಿಯ ಶ್ರೀ ಮಹಾಲಕ್ಷ್ಮೀ ಕೊಲ್ಲಾಪುರದ ಕರಿಯಮ್ಮ ದೇವಿಯವರ ಮೊದಲ ವರ್ಷದ ವಾರ್ಷಿಕೋತ್ಸವ ಮತ್ತು ಆರತಿ ಬಾನವನ್ನು ಶನಿವಾರದಿಂದ ಏ.26 ಶುಕ್ರವಾರದವರೆಗೆ ಏರ್ಪಡಿಸಲಾಗಿದೆ ಎಂದು ದೇಗಲದ ಅಧ್ಯಕ್ಷ ಜಯಣ್ಣ ತಿಳಿಸಿದರು. ಶನಿವಾರ ಸಂಜೆ ವಜ್ರತೀರ್ಥ ಸ್ನಾನ, ಮಹಾಮಂಗಳಾರತಿ ಮತ್ತು ಪ್ರಸಾಸ ವಿನಿಯೋಗ. ಸಂಜೆ 6 ಕ್ಕೆ ನೂರೊಂದೆಡೆ ಸೇವೆ ನಡೆಯಲಿದೆ. ಮಂಗಳವಾರ ಶ್ರೀ ಅಮ್ಮನವರಿಗೆ ಕುಂಕುಮಾರ್ಷನೆ, ಅಭಿಷೇಕ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಸಂಜೆ 8 ಕ್ಕೆ ಆರತಿ ಬಾನ ನಡೆಯಲಿದೆ. ಶುಕ್ರವಾರ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಗಣಪತಿ, ನವಗ್ರಹ ಹೋಮ, ಅಮ್ಮನವರಿಗೆ ಮೂಲಮಂತ್ರ ಹೋಮ, ಮಹಾಲಕ್ಷ್ಮೀ ಹೋಮ, 12-30 ಕ್ಕೆ ಪುರ್ಣಾಹುತಿ ನಂತರ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಉಯ್ನಾಲೋತ್ಸವ ನಡೆಯಲಿದೆ. ಎಂದು ಅಧ್ಯಕ್ಷ ಎಚ್.ಜಯಣ್ಣ, ಕನ್ವೀನರ್‌ ಎಚ್.ಎನ್‌.ನಾಗೋಜಿರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಸಲಮ್ಮ ದೇವಿ ಸಿಡಿ, ರಥೋತ್ಸವ ಇಂದು

ತುರುವೇಕೆರೆ: ಪಟ್ಟಣದ ಗ್ರಾಮದೇವೆತೆ ಉಡುಸಲಮ್ಮ ದೇವಿ ಸಿಡಿ ಮತ್ತು ರಥೋತ್ಸವವು ಶನಿವಾರ ನಡೆಯಲಿದ್ದು, 21 ರಂದು ಭಾನುವಾರ ಹಗಲುಪರಿಷೆ ,ರಾತ್ರಿ ಆನೆ ಉತ್ಸವ ನಡೆಯಲಿದೆ. 22 ರ ಸೋಮವಾರ ಮದ್ಯಾಹ್ನ 1 ಗಂಟೆ ಮಹಾ ರಥೋತ್ಸವ ನಡೆಯಲಿದೆ, ಶನಿವಾರ 20 ರಂದು ನಡೆಯುವ ಸಿಡಿಯಲ್ಲಿ ಮೂಡ್ಲಿಗಿರಿಗೌಡರ ಕುಲಸ್ಥರಾದ ಅತ್ತಿಕುಳ್ಳೆ ಪಾಳ್ಯ,ಹರಿಶಿಣದಹಳ್ಳಿ ಚಿಕ್ಕತುರುವೇಕೆರೆ ಆನಂದಪಾಳ್ಯ, ಭೂವನಹಳ್ಳಿ ಪಾಳ್ಯದವರು ಸಿಡಿ ಕಂಬ ಏರಿಲಿದ್ದು, ಭಕ್ತರು ಭಾಗವಹಿಸಲು ದೇಗುಲದ ಧರ್ಮದರ್ಶಿ ಶ್ರೀನಿವಾಸ್‌ ಮನವಿ ಮಾಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next