Advertisement

ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

12:15 PM Feb 04, 2018 | |

ಕೆಂಗೇರಿ: ಹೇರೋಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಮಾಗಡಿ ಮುಖ್ಯ ರಸ್ತೆಯ ಹೇರೋಹಳ್ಳಿಯಲ್ಲಿ ಶತಮಾನಗಳಿಂದ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

Advertisement

ಪ್ರಸಕ್ತ ಸಾಲಿನ ರಥೋತ್ಸವದ ಪ್ರಯುಕ್ತ ಶನಿವಾರ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ವಿಶಿಷ್ಟ ಅಲಂಕಾರನೆರವೇರಿತು. ಇದೇ ವೇಳೆ ರಥದ ಪುಣ್ಯಾಹ ಅಂಕುರಾರ್ಪಣೆ, ನಾಂದಿ, ನವಗ್ರಹ ಆರಾಧನೆ, ಧ್ವಜಾರೋಹಣ, ರಥದ ಅಂಕ ಪೂಜೆ ನಂತರ ಕಳಸ ಸ್ಥಾಪಿಸಲಾಯಿತು. ರಥವನ್ನು ಹೂಗಳಿಂದ ಅಲಂಕರಿಸಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿಗೆ ಅಭಿಷೇಕ ಮಾಡಿದ ನಂತರ ಉತ್ಸವ ಮೂರ್ತಿಯ ಉತ್ಸವ ನೆರವೇರಿತು.

ಪ್ರಮುಖ ಬೀದಿಗಳಲ್ಲಿ ಸಾಗಿದ ಉತ್ಸವದಲ್ಲಿ ಪಾಲ್ಗೊಂಡಿದ್ದ ವೀರಗಾಸೆ, ಡೊಳ್ಳು ಕುಣಿತ, ಗಾರುಡಿಗೊಂಬೆ, ಪೂಜಾ ಕುಣಿತ, ಕಂಸಾಳೆ, ಸೋಮನ ಕುಣಿತ, ಚಂಡೆವಾದ್ಯ, ಕುಂಭ ಕಹಳೆ, ರಂ ಡೋಲು, ಕೀಲು ಕುದುರೆ, ಗೊರವನ ಕುಣಿತ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳ ಕಲಾವಿದರು ಮೆರುಗು ತಂದರು.

ನಂತರ ರಥದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ವಿಧಿವತ್ತಾಜಿ ಪೂಜಾ ಕೈಂಕರ್ಯಗಳನ್ನು ಕೈಗೊಂಡ ನಂತರ ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು. ರಥೋತ್ಸವದ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಎಸ್‌.ಟಿ.ಸೋಮಶೇಖರ್‌, ಪಾಲಿಕೆ ಸದಸ್ಯರಾದ ರಾಜಣ್ಣ, ಎಂ.ವಾಸುದೇವ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next