Advertisement

ಅಂಜನಾದ್ರಿಯ ಹನುಮ 

12:31 PM May 13, 2017 | |

ಅಂಜನಾದ್ರಿ ಪರ್ವತ, ಗಂಗಾವತಿಯಿಂದ ಕಿಷ್ಕಿಂದಾ ಮಾರ್ಗದಲ್ಲಿ 16 ಕಿ.ಮೀ ದೂರದಲ್ಲಿದೆ. ಹುಲಗಿ  ಅಥವಾ ಗಂಗಾವತಿ ಯಾವುದೇ ಮಾರ್ಗದಿಂದಲೂ ಸುಲಭವಾಗಿ ಇಲ್ಲಿಗೆ ತಲುಪಬಹುದು.  ಈ ಪರ್ವತಕ್ಕೂ ಪುರಾಣಕ್ಕೂ ನಂಟು ಇದೆ. ಈ ಕ್ಷೇತ್ರ ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಾಗಿ ನೆಲೆ ನಿಂತಿದೆ. ರಾಮಾಯಣ ಕಾಲಕ್ಕೆ ವಾನರ ಸೇನೆಯ ತಾಣವಾಗಿದ್ದ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರದಡ್ಡಿ, ಹನುಮಾಪುರ, ತಿರುಮಲಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡ ಅಂಜನಾದ್ರಿ ಪರ್ವತತಾಣವು ಆಂಜನೇಯನ ಜನ್ಮಸ್ಥಳವಾಗಿ ಪ್ರಸಿದ್ಧವಾಗಿದೆ. ಇಲ್ಲಿ ಉದ್ಬವ ಆಂಜನೇಯ ಭಕ್ತರನ್ನು ಸೆಳೆಯುತ್ತಿದ್ದಾನೆ. 

Advertisement

ಒಂದು ದಿನ ವಾನರರಾಜ ಕೇಸರಿ ಮತ್ತು ಅಂಜನಾದೇವಿಯರು ತಮ್ಮ  ರಾಜ್ಯದ ಸುಮೇರು ಪರ್ವತದ ಮೇಲೆ ವಿಹರಿಸುತ್ತಿದ್ದರು. ಹಾಗೇ ಮೃದುವಾಗಿ ಗಾಳಿ ಬೀಸುತ್ತಿರುವಾಗ ಅಂಜನಾದೇವಿಯ ಸೀರೆಯ ಸೆರಗು ಗಾಳಿಗೆ ಮೇಲಕ್ಕೆ ಹಾರಿತು. ಅವಳಿಗೆ ತನ್ನ ದೇಹವನ್ನು ಯಾರೋ ಸ್ಪರ್ಶಿಸುತ್ತಿರುವರೆಂಬ ಅನುಭವವಾಯಿತು.  ತನ್ನ ವಸ್ತ್ರವನ್ನು ಸರಿ ಮಾಡಿಕೊಂಡು “ನಾನು ಈಗಲೇ ಶಾಪವನ್ನು ಕೊಟ್ಟು ಅವನನ್ನು ಭಸ್ಮ ಮಾಡುತ್ತೇನೆ’ ಎಂದು ಕೋಪದಿಂದ ಶಾಪ ನೀಡಿದಳು. ಈಕೆಯ ಮಾತಿಗೆ ಪ್ರತಿಯಾಗಿ ವಾಯುದೇವನೆ ಹೇಳುತ್ತಿದ್ದಾನೆಂಬಂತೆ ಅವಳಿಗೆ ಭಾಸವಾಗಿ “ದೇವೀ, ನಾನು ನಿನ್ನ ವ್ರತವನ್ನು ಕೆಡಿಸಲಿಲ್ಲ’. ದೇವಿ ನಿನಗೆ ನನ್ನಷ್ಟೇ ತೇಜಸ್ವಿ, ಬಲಶಾಲಿಯಾದ ಹಾಗೂ ಬುದ್ದಿಶಕ್ತಿಯಲ್ಲಿ ಅದ್ವಿತೀಯನಾದ ಮಗನು ಜನಿಸುತ್ತಾನೆ. ಅವನು ಭಗವಂತನ ಸೇವಕನಾಗುತ್ತಾನೆ. ನಾನು ಅವನನ್ನು ರಕ್ಷಿಸುತ್ತೇನೆ’ ಎಂದಂತೆ ಭಾಸವಾಯಿತು.

ಅನಂತರ ಅಂಜನಾದೇವಿ ಮತ್ತು ಕೇಸರಿ ತಮ್ಮ ಸ್ಥಾನಕ್ಕೆ ಹೊರಟುಹೋದರು. ಭಗವಾನ್‌ ಶಂಕರರು  ಅಂಶರೂಪದಿಂದ ಅಂಜನಿಯ  ಕಿವಿಯ ಮುಖಾಂತರ ಅವಳ ಗರ್ಭದಲ್ಲಿ ಪ್ರವೇಶಿಸಿದನು. ಚೈತ್ರ ಶುಕ್ಲ ಪೌರ್ಣಮಿ ಮಂಗಳವಾರದ ದಿನ ಅಂಜನಾದೇವಿಯ ಮನೆಯಲ್ಲಿ ಭಗವಾನ್‌ ಶಂಕರನು ವಾನರ ರೂಪದಲ್ಲಿ ಜನಿಸಿದನು ಎಂಬುದು ರಾಮಾಯಣದಲ್ಲಿ ಬರುವ ದೃಷ್ಟಾಂತ. ಅದೇ ಈ ಅಂಜನಾ ಪರ್ವತದ ಮೇಲಿರುವ ಆಂಜನೇಯನ ಜನ್ಮಸ್ಥಳ. 

ಈ ಪರ್ವತ ಹತ್ತಲು ಕಡಿದಾದ  ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳು 
 ನಿರ್ಮಿತವಾಗಿದೆ.  ಈ ಮೆಟ್ಟಿಲುಗಳನ್ನೇರುವುದೇ ಒಂದು ಹರಸಾಹಸ. ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿವೆ ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳು.  ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು.  ಸುತ್ತಲೂ ಹಸಿರುಟ್ಟ ನಿಸರ್ಗ, ಇವುಗಳನ್ನೆಲ್ಲ ನೋಡುತ್ತ ಬೆಟ್ಟದ ಪೂರ್ಣ ಮೇಲು¤ದಿಗೆ ಬಂದರೆ ಸಾಕು, ಆಯಾಸವೆಲ್ಲ ಕರಗಿಹೋಗಿರುತ್ತದೆ.

Advertisement

ಈ ಬೆಟ್ಟದ ಮೇಲೆ ಧ್ಯಾನಮಂದಿರ. ದೇವಾಲಯದ ಮುಂದೆ ತುಳಸಿಕಟ್ಟೆ, ದೀಪಮಾಲಿಕಾ ಸ್ಥಂಭ ಇದೆ. ದೊಡ್ಡಬಂಡೆಗಲ್ಲೊಂದರ ಮೇಲೆ ನಿರ್ಮಿಸಿದ ದೇವಾಲಯ ಪ್ರದಕ್ಷಿಣಾ ಪಥವನ್ನು ಹೊಂದಿದ್ದು, ದೇವಾಲಯ ಒಳಗೆ ಬಂಡೆಗಲ್ಲಿನಲ್ಲಿ ಉದ್ಬವ ಆಂಜನೇಯ ಮೂರ್ತಿ ಇದೆ.    ಇಲ್ಲಿ ಕೋತಿಗಳ ಕಾಟ ಹೇಳತೀರದು. ಸದಾ ಕಾಲ ಇಲ್ಲಿ ರಾಮಜಪ ನಡೆಯುತ್ತಿರುತ್ತದೆ. ದೇವಾಲಯ ಸುತ್ತಲೂ ಬಂಡೆಗಲ್ಲುಗಳ ಆವೃತ್ತವಾಗಿದೆ.   ಬೆಟ್ಟದ ಮೇಲೆ ನಿಂತು ನಿಸರ್ಗದ ಸೌಂದರ್ಯ ಸವಿಯಬೇಕು. ಒಂದೆಡೆ ಆನೆಗೊಂದಿ. ಹಾಳು ಹಂಪೆಯ ಪರಿಸರ. ತುಂಗಭದ್ರಾ ನದಿಯಲ್ಲಿ ಮುಳುಗಿದ ಹಳೆಯ ಹಂಪೆಯ ದೇಗುಲಗಳು ಕಾಣುತ್ತವೆ. 

ವೈ.ಬಿ.ಕಡಕೋಳ

Advertisement

Udayavani is now on Telegram. Click here to join our channel and stay updated with the latest news.

Next