ಗಂಗಾವತಿ : ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಪ್ರದೇಶಾಭಿವೃದ್ಧಿಗೆ ರಾಜ್ಯ ಸರಕಾರ ಈ ಭಾರಿಯ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಭಾರಿ ಹೇಳಿದ್ದಾರೆ. ಅಂಜನಾದ್ರಿ ಸುತ್ತಲಿನ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ನೀಲ ನಕ್ಷೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಅಂಜನಾದ್ರಿ ಸುತ್ತಲಿನರುವ ಭೂಮಿಯ ಪೈಕಿ ಚಿಕ್ಕರಾಂಪೂರದಿಂದ ವಿರೂಪಾಪೂರಗಡ್ಡಿ ಸೇತುವೆ ವರೆಗಿನ ಪ್ರದೇಶಕ್ಕೆ ತುಂಗಭದ್ರಾ ನದಿಯ ಪ್ರವಾಹ ಸಂದರ್ಭದಲ್ಲಿ ನದಿಯ ನೀರು ನಿಲ್ಲುವುದರಿಂದ ಸಂಚಾರಕ್ಕೆ ಪ್ರತಿ ವರ್ಷ ತೊಂದರೆಯಾಗುತ್ತದೆ. ಆದ್ದರಿಂದ ಪ್ರವಾಹದ ನೀರು ನಿಲ್ಲುವ ಸ್ಥಳದಲ್ಲಿ ಪ್ರವಾಸಿಗರಿಗೆ ಕಟ್ಟಡ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನೀರಿನಲ್ಲಿ ನಿರ್ಮಾಣ ಮಾಡುವುದು ಎಷ್ಟು ವೈಜ್ಞಾನಿಕವಾಗಿ ಸರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
1962, 1992 ಮತ್ತು 2018 ರಲ್ಲಿ ತುಂಗಭದ್ರಾ ಡ್ಯಾಂ ನಿಂದ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟ ಸಂದರ್ಭದಲ್ಲಿ ಅಂಜನಾದ್ರಿಯ ಹತ್ತಿರ ಇರುವ ಗ್ರಾಮಗಳು, ರಸ್ತೆ ಗದ್ದೆಗಳು ಒಂದು ವಾರದ ತನಕ ನೀರಿನಲ್ಲಿದ್ದವು. ಇದರಿಂದ ರಸ್ತೆ ಸಂಚಾರ ಸ್ಥಗಿತವಾಗಿ ಇಲ್ಲಿಯ ಗ್ರಾಮಗಳ ಜನರು ಬೆಟ್ಟದಲ್ಲಿ ಆಶ್ರಯ ಪಡೆದಿದ್ದರು. ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಸರಕಾರದ ಯೋಜನೆ ಅಂಜನಾದ್ರಿಯ ಬಲ ಭಾಗ ಮತ್ತು ಮುಂದಿನ ಭಾಗದ ರೈತರ ಭೂಮಿಗಿಂತ ಜಂಗ್ಲಿ ರಂಗಾಪೂರ ಅಂಜಿನಳ್ಳಿ ಭಾಗದ ಭೂಮಿ ಎತ್ತರ ಪ್ರದೇಶದಲ್ಲಿರುವುದರಿಂದ ಇಲ್ಲಿಗೆ ನದಿಯ ಪ್ರವಾಹದ ನೀರು ಬರುವುದಿಲ್ಲ. ಆದ್ದರಿಂದ ಪಂಪಾಸರೋವರದಿಂದ ವಿರೂಪಾಪೂರಗಡ್ಡಿ ಸೇತುವೆ ವರೆಗೆ ನದಿಯ ದಂಡೆಯಲ್ಲಿ ಭೂಮಿ ಸ್ವಾಧೀನ ಮಾಡಿಕೊಂಡರೂ ಇಲ್ಲಿಗೆ ನದಿಯ ಪ್ರವಾಹದ ನೀರು ಬಂದು ನಿಯೋಜಿತ ಕಟ್ಟಡಗಳು ನೀರಿನಲ್ಲಿ ಮುಳುಗಿ ಅಪಾಯವಾಗುವ ಸಂಭವಿದೆ.
ಈಗಾಗಲೇ ಸರಕಾರ ಪ್ರವಾಸಿಗರಿಗೆ ವಸತಿ, ಪಾರ್ಕಿಂಗ್, ಬಸ್ ನಿಲ್ದಾಣಗಳು, ಕಮರ್ಷಿಯಲ್ ಕಟ್ಟಡಗಳು ಸೇರಿ ಹಲವು ಯೋಜನೆಯ ಕಟ್ಟಡಗಳನ್ನು ನಿರ್ಮಿಸಲು ಮೊದಲ ಹಂತದಲ್ಲಿ 34 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಮಾಡಿಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಆರಂಭಿಕ ಹಂತದಲ್ಲಿಯೇ ಪ್ರವಾಹದ ನೀರಿನ ಕುರಿತು ತಜ್ಞರ ವರದಿ ಪಡೆದು ಸಾಧಕ ಬಾಧಕಗಳ ಬಗ್ಗೆ ಚಿಂತನೆ ಮಾಡಿ ಶಾಶ್ವತ ಯೋಜನೆಗಳನ್ನು ಇಲ್ಲಿಯ ಪರಿಸರಕ್ಕೆ ಧಕ್ಕೆಯಾಗದಂತೆ ನಿರ್ಮಾಣ ಮಾಡಬೇಕಿದೆ.
ಪ್ರವಾಸೋದ್ಯಮ ಇಲಾಖೆಗಿಲ್ಲ ಶಾಶ್ವತ ಅಧಿಕಾರಿ: ಅಂಜನಾದ್ರಿ, ಕುಮ್ಮಟದುರ್ಗಾ, ಮೋರ್ಯರ ಶಿಲಾಯುಗದ ಸಮಾಧಿ ಬೆಟ್ಟ, ವಾಣಿಭದ್ರೇಶ್ವರ, ಏಳುಗುಡ್ಡ ಪ್ರದೇಶದ ಗುಹಾಂತರ ರೇಖಾ ಚಿತ್ರಗಳು, ಹೇಮಗುಡ್ಡ, ಕನಕಗಿರಿ, ಪುರ, ದೋಟಿಹಾಳ, ಇಟಗಿ ಮತ್ತು ಹುಲಿಗಿ ಪುಣ್ಯಕ್ಷೇತಯ್ರಗಳಿದ್ದು ನಿತ್ಯವೂ ದೇಶ ವಿದೇಶದಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸೋದ್ಯಮದಿಂದ ನೇರ ಪರೋಕ್ಷ ಉದ್ಯೋಗ ಸೃಷ್ಠಿಯಾಗಿ ಆರ್ಥಿಕ ಸಬಲತೆ ಇದ್ದರೂ ಕೊಪ್ಪಳ ಜಿಲ್ಲೆ ರಚನೆಯಾದ ನಂತರ ಪ್ರವಾಸೋದ್ಯಮ ಇಲಾಖೆಗೆ ಸ್ವಂತ ಅಧಿಕಾರಿ ಪೂರ್ಣಪ್ರಮಾಣದ ಸಿಬ್ಬಂದಿ ಕೊರತೆ ಇದೆ. ಅಂಜನಾದ್ರಿ ಭಾಗದ ಪ್ರವಾಸೋದ್ಯಮ ಯೋಜನೆ ರೂಪಿಸಿ ಅನುಷ್ಠಾನ ಮಾಡಲು ಅನ್ಯ ಇಲಾಖೆಯ ಅಧಿಕಾರಿಗಳು ಪ್ರಭಾರಿಯಾಗಿದ್ದಾರೆ. ಪ್ರತಿ ವರ್ಷ ಪ್ರವಾಸೋದ್ಯಮ ಇಲಾಖೆಗೆ ಕೋಟ್ಯಾಂತರ ರೂ.ಗಳ ಅನುದಾನ ಬರುತ್ತದೆ ಕೆಲವೊಮ್ಮೆ ಅನುದಾನವನ್ನು ಖರ್ಚಾಗದೇ ಸರಕಾರಕ್ಕೆ ವಾಪಸ್ ಹೋಗಿರುವ ಅಥವಾ ಅನ್ಯ ಜಿಲ್ಲೆಗೆ ವರ್ಗಾವಾಗಿರುವ ಉದಾಹರಣೆಗಳಿವೆ ಎನ್ನಲಾಗಿದೆ. ಜಿಲ್ಲೆಗೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಉಸ್ತುವಾರಿಯಾಗಿದ್ದರೂ ತಮ್ಮ ಇಲಾಖೆಯನ್ನು ಪ್ರಭಾರಿ ಅಧಿಕಾರಿಗಳ ನಡೆಸುತ್ತಿದ್ದಾರೆ.
ತುಂಗಭದ್ರಾ ನದಿ ನೀರು ಪ್ರವಾಹದ ಸಂದರ್ಭದಲ್ಲಿ ಮಾತ್ರ ಇಲ್ಲಿಯ ಕೆಳ ಮಟ್ಟದಲ್ಲಿರುವ ಭೂಮಿಗೆ ನೀರು ನುಗ್ಗುತ್ತದೆ. ಆದರೂ ತಾಂತ್ರಿಕವಾಗಿ ಯೋಚನೆ ಮಾಡಿ ನೀಲನಕ್ಷೆ ತಯಾರಿಸಲಾಗುತ್ತದೆ. ಸ್ವಾಧೀನ ಭೂಮಿಯಲ್ಲಿ ಕಟ್ಟಡ ಸೇರಿ ಪ್ರವಾಸಿಗರಿಗೆ ಕೆಲ ಮೂಲಸೌಯರ್ಕಕ್ಕೆ ಆದ್ಯತೆ ಇದ್ದು ಎತ್ತರ ಪ್ರದೇಶದ ಭೂಮಿಯನ್ನು ಪರಿಶೀಲನೆ ಮಾಡಿ ಯೋಜನೆ ರೂಪಿಸಲಾಗುತ್ತದೆ. ಪ್ರವಾಸೋದ್ಯದ ಶಾಶ್ವತ ಯೋಜನೆಯಾಗಿದ್ದು ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ.
-ವಿಕಾಶ ಕಿಶೋರ್ ಸುರಳ್ಕರ್ ಜಿಲ್ಲಾಧಿಕಾರಿ.
ಅಂಜನಾದ್ರಿ ಸುತ್ತಲಿರುವ ರೈತರ ಭೂಮಿಯನ್ನು ಪ್ರವಾಸೋಮದ್ಯಮ ಅಭಿವೃದ್ಧಿಗಾಗಿ ಸ್ವಾಧೀನ ಮಾಡಿಕೊಳ್ಳುತ್ತಿದ್ದು ಬೆಟ್ಟದ ಬಲಭಾಗದಲ್ಲಿ ತುಂಗಭದ್ರಾ ನದಿ ಪ್ರವಾಹದ ನೀರು ನಿಲ್ಲುತ್ತದೆ. ಇದರಿಂದ ಯೋಜಿತ ಕಟ್ಟಡಗಳು ನೀರಿನಲ್ಲಿ ಮುಳುಗುವ ಸಾಧ್ಯತೆ ಇದ್ದು ಭೂಮಿ ಸ್ವಾಧೀನಕ್ಕೂ ಮೊದಲು ಅಧಿಕಾರಿಗಳು ಪರಿಶೀಲಿಸಬೇಕು. ಎತ್ತರ ಪ್ರದೇಶದಲ್ಲಿ ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸಬೇಕು.
-ಸುದರ್ಶನ ವರ್ಮಾ ಅಧ್ಯಕ್ಷರು ರೈತ ಸಂಘ ಆನೆಗೊಂದಿ.
– ಕೆ.ನಿಂಗಜ್ಜ