Advertisement
ಗುರುವಾರ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿದ ಮೂರು ಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿಯ ಫಕ್ಕಿರೇಶ್ವರ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ, ಅಂಬಿಗರ ಸಮಾಜ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅಂಜಲಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಹಂತಕನಿಗೆ ಕಠಿನಾತೀತ ಕಠಿನ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಅಂಜಲಿಯ ಇಬ್ಬರು ಸಹೋದರಿಯರನ್ನು ದತ್ತು ಪಡೆಯುವ ಹಾಗೂ ವ್ಯಾಸಂಗಕ್ಕೆ ಮುಂದಾದರೆ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಭರವಸೆಯನ್ನು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ನೀಡಿದರು.
ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಗುರುವಾರ ಎರಡು ಪ್ರತಿಭಟನೆಗಳು ನಡೆದವು. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ವೀರಾಪುರ ಓಣಿಯ ಕರಿಯಮ್ಮ ದೇವಿ ದೇವಸ್ಥಾನದಿಂದ ಪ್ರತಿಭಟನ ಮೆರವಣಿಗೆ ಆರಂಭಿಸಿ ಇಲ್ಲಿನ ನಗರ ಠಾಣೆಗೆ ಆಗಮಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಪೊಲೀಸರ ನಿರ್ಲಕ್ಷéದಿಂದ ಅಂಜಲಿ ಹತ್ಯೆಯಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ನುಗ್ಗಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡದಿದ್ದಾಗ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಿದರು. ಶಾಸಕ ಮಹೇಶ ಟೆಂಗಿನಕಾಯಿ ಸಹಿತ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಇನ್ನೊಂದೆಡೆ ಎಬಿವಿಪಿ ಕಾರ್ಯ ಕರ್ತರು ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಂತಕ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಅಂಜಲಿ ಹತ್ಯೆ ನಡೆದಿದೆ. ನೇಹಾ ಹಿರೇಮಠ ಹತ್ಯೆ ಸಂದರ್ಭದಲ್ಲೇ ಪೊಲೀಸರು ಕಠಿನ ಕ್ರಮ ಕೈಗೊಂಡಿ ದ್ದರೆ ಇಂತಹ ಘಟನೆಗಳು ಮರು ಕಳಿಸುತ್ತಿರಲಿಲ್ಲ ಎಂದು ಆರೋಪಿಸಿ ದರು. ನೇಹಾ ಹಾಗೂ ಅಂಜಲಿ ಹಂತಕರನ್ನು ಗಲ್ಲಿಗೇರಿಸಿ, ಎನ್‌ಕೌಂಟರ್ ಮಾಡಿ. ಸಾಧ್ಯವಾಗದಿ ದ್ದರೆ ನಮ್ಮ ಕೈಗೆ ಅವರನ್ನು ಕೊಟ್ಟು ಬಿಡಿ ನಾವು ನೋಡಿಕೊಳ್ಳುತ್ತೇವೆ ಎಂದು ಅಂಜಲಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಕನನ್ನು ಕಳೆದು ಕೊಂಡಿದ್ದೇವೆ. ಹಂತಕನಿಗೆ ಗಲ್ಲು ಶಿಕ್ಷೆಯೊಂದೇ ಸೂಕ್ತವಾದುದು ಎಂದು ಅಂಜಲಿ ಸಹೋದರಿ ಯಶೋದಾ ಕಣ್ಣೀರು ಹಾಕಿದರು. ಅಂಜಲಿಗೆ ಮೂವರು ಸಹೋದರಿಯರಿದ್ದು, ಒಬ್ಬರಿಗೆ ಮದುವೆಯಾಗಿದೆ.