Advertisement

ಭಿನ್ನತೆಯ ಸೊಗಸಿಗೆ  ಬೇರೆ ಹೆಸರಿದೆ !

02:25 PM May 20, 2021 | Team Udayavani |

ಹುಡುಗಿಯರು ಸಣ್ಣ ವಯಸ್ಸಿನಲ್ಲೇ  ಅಡುಗೆ ಆಟ, ಮನೆ ಆಟ, ಶಾಲೆ ಆಟ ಹೀಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಏನೆಲ್ಲ ನಡೆಯುತ್ತಿರುತ್ತದೋ ಅವುಗಳನ್ನೇ ಒಂದು ಆಟವಾಗಿಸಿಕೊಂಡು ನಮ್ಮ ಬಾಲ್ಯವನ್ನು ಕಳೆದಿರುತ್ತೇವೆ. ಆ ವಯಸ್ಸಿಗೇನು ಗೊತ್ತು ನಮಗೆ ಅದೇ ಮುಂದಿನ ನಮ್ಮ ಜೀವನದ ವಾಸ್ತವವಾಗಿಬಿಡುತ್ತೇ ಅಂತ! ಹೀಗೆ ಆಡುತ್ತಿರುವಾಗಲೇ ಎಲ್ಲೋ ನಮ್ಮ ಮನಸ್ಸು ನಮ್ಮನ್ನು ಮುಂದೆ ಬರುವಂಥ ಜೀವನ ಶೈಲಿಗೆ ಸಿದ್ಧವಾಗಿಸಿ ಬಿಡುತ್ತದೆ. ಹೀಗೆ ಮನೆ, ಅಪ್ಪ, ಅಮ್ಮನನ್ನು ನಟಿಸಿ ಆಟವಾಡುವಾಗಲೇ ಎಲ್ಲೋ ನಮ್ಮ ಮನಸ್ಸು ನಮ್ಮದೊಂದು ಅಸ್ತಿತ್ವಕ್ಕೆ ಹಾತೊರೆಯಬಹುದು. ಆಗಲೇ ಮನಸ್ಸು ಮಗು, ಸಂಸಾರ ಎನ್ನೋ ಕನಸಿನ ಅಲೆಗಳನ್ನು ಎಬ್ಬಿಸೋಕೆ ಶುರು ಮಾಡಿ ಬಿಡುತ್ತದೆ.

Advertisement

ಹಾಗೆ ಮದುವೆಯಾಗಿ, ಮಗುವನ್ನು ಒಂಭತ್ತು ತಿಂಗಳು ತನ್ನೊಳಗೆ ಸಲಹಬೇಕಾದರೆ ಕಾಣೋ ಕನಸಿನ ಖುಷಿ ಬೇರೆಯದ್ದೇ. ಏಕೆಂದರೆ, ಈ ಕನಸು ನನಸ್ಸಾಗೋ ದಿನದ ಗಡಿ ಆಕೆಗೆ ಗೊತ್ತು. ಹೀಗೆ ಕಂಡ ಕನಸ್ಸಿನ ಬಗ್ಗೆ, ಅದು ನನಸಾದ ಕ್ಷಣದ ಬಗ್ಗೆ ನನ್ನ ಸ್ನೇಹಿತೆ ಸುಜಾತಾ (ಹೆಸರು ಬದಲಿಸಿದೆ) ಹೇಳಿದ್ದು ನಿಮಗೆಲ್ಲರಿಗೂ ಹೇಳಬೇಕು ಎಂಬ ಆಸೆ ನನಗೆ.

ಅವಳು ಹೇಳಿದಳು, ನನ್ನ ಗಂಡನಿಗೆ ಹಾಗೂ ನನಗೆ ನಾವು ಆದಷ್ಟು ಬೇಗ ತಂದೆ-ತಾಯಿಯಾಗಬೇಕು ಎಂಬ ಕನಸಿತ್ತು. ನಮ್ಮ ಮೊದಲನೇ ಮಗು ನಾಲ್ಕು ತಿಂಗಳ ಗರ್ಭಾವಸ್ಥೆಯಲ್ಲೇ ಹೋಗಿಬಿಟ್ಟಿತು. ಅದೇನು ತೊಂದರೆಯಾಯಿತು ಎಂದು ನಮಗೆ ತಿಳಿಯಲೇ ಇಲ್ಲ. ಆಗ ನಾವು ಅನುಭವಿಸಿದ ನೋವು ಹೇಳತೀರದು. ಆದರೆ ನಾವು ಧೃತಿಗೆಡಲಿಲ್ಲ. ಕೆಲವು ಸಮಯದ ಅನಂತರ ಮತ್ತೆ ಗರ್ಭಧರಿಸಿದೆ. ಆದರೆ ಆರು ತಿಂಗಳಾಗುವಾಗ ಅದರ ಆಗಮನವಾಯಿತು.

ಅವಳು ಹುಟ್ಟಿದ ತತ್‌ಕ್ಷಣ ಆಕೆಯ ಅಳುವೊಂದನ್ನೇ ಕೇಳಿ ನಾನು ಮಲಗಿ ಬಿಟ್ಟೆ. ಮೂರು ತಿಂಗಳು ಮುಂಚೆ ಹುಟ್ಟಿದರಿಂದ ಆಕೆಯನ್ನು ತುರ್ತು ಘಟಕದಲ್ಲಿ ಇರಿಸಲಾಗಿತ್ತು. ನಮಗೂ ಸುಸ್ತಾಗಿದ್ದರಿಂದ ಮಗುವನ್ನು ಮಾರನೇ ದಿನ ಬೆಳಗ್ಗೆ ನೋಡುವ ಅವಕಾಶ ಸಿಕ್ಕಿತು. ನಾವು ಒಳ ಹೋಗುವ ಮುನ್ನ ವೈದ್ಯರು ನಮ್ಮೊಂದಿಗೆ ಏನೋ ಮಾತಾಡುವುದಿದೆ ಎಂದು ಹೇಳಿದರು. ಇದನ್ನು ಕೇಳಿದ್ದೇ ತಡ, ನಮಗೆ ಎಲ್ಲಿಲ್ಲದ ಭಯ. ಕೊನೆಗೂ ವೈದರ ಎದುರು ಕುಳಿತಿದ್ದೆವು. ನಮ್ಮ ಮಗುವಿನ ಮುಖ ಚಹರೆಯನ್ನು ಗಮನಿಸಿ, ಅವಳಿಗೆ “ಡೌನ್ಸ್‌ ಸಿಂಡ್ರೋಮ್‌’ ಇದೆ ಎಂದು ಖಚಿತ ಪಡಿಸಿದರು.

ನಮ್ಮಿಬ್ಬರಿಗೆ ಜಗತ್ತು ಮುಳುಗಿದ ಹಾಗಾಯಿತು. ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯದಾಯಿತು. ಮಗುವಿನ ಮುಖವನ್ನು ನೋಡದೇ ಇರಲು ಸಾಧ್ಯವೇ ಎಂದು ಮನಸ್ಸು ಕೇಳತೊಡಗಿತು. ಕೊನೆಗೆ ಒಳ ಹೋಗಿ ಮಗುವನ್ನು ಎತ್ತಿಕೊಂಡೆ. ನನಗೆ ಅಳು ತಡೆಯಲಾಗಲಿಲ್ಲ. ಪಾಪ, ಪುಟ್ಟ ಕಂದ ಏನೂ ಅರಿಯದೆ ಗಾಢ ನಿದ್ರೆಯಲ್ಲಿತ್ತು.

Advertisement

ಮುಂದಿನ ಕೆಲವು ತಿಂಗಳುಗಳು ನನಗೆ ನನ್ನ ಮಗಳ ಮೇಲಿನ ಚಿಂತೆ ಕಾಡತೊಡಗಿತ್ತು. ಆ ಚಿಂತೆ ನಮ್ಮ ಸಂಸಾರದ ಮೇಲೂ ಪ್ರಭಾವ ಬೀರಿತ್ತು.  ಮಗು ತುರ್ತು ನಿಗಾ ಘಟಕದಲ್ಲಿ ಇದ್ದ ಕಾರಣ ನಮ್ಮ ಮನೆಗೆ ವೈದ್ಯರು, ನರ್ಸುಗಳು ಬರುತ್ತಿದ್ದರು. ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಯಿತು. ಆಗ ಮನಸ್ಸು ನಿರಾಳವಾಗುತ್ತಿತ್ತು, ಹೊರ ಜಗತ್ತು ನನ್ನ ಮಗುವನ್ನು ಇನ್ನೂ ನೋಡಿಯೇ ಇಲ್ಲವಲ್ಲ ಎಂದು. ನೋಡಿದರೆ ಯಾರು ಏನೆನ್ನುತ್ತಾರೋ, ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ.

ವೈದ್ಯರು ನಮ್ಮ ಬಳಿ ಮಗು ಬೆಳೆದ ಮೇಲೆ ಏನೆಲ್ಲ ವ್ಯತ್ಯಾಸವಾಗಬಹುದು, ಏನೆಲ್ಲ ಸವಾಲುಗಳಿರಬಹುದು  ಎಂಬ ವಿಷಯಗಳನ್ನು ಹೇಳಿ ಹೋಗುತ್ತಿದ್ದರು. ಆ ಮೂಲಕ ನಮ್ಮನ್ನು, ನಮ್ಮ ಮನಸ್ಸನ್ನು ಸಿದ್ಧಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ನಾನು ಮಾತ್ರ ಎಲ್ಲವನ್ನು ಕೇಳಿಸಿಕೊಂಡು ಕುಗ್ಗಿ ಹೋಗುತ್ತಿದ್ದೆ. ಮಗುವಿನ ನೆನಪಾದಾಗೆಲ್ಲ ಅವಳ ಸೋಲುಗಳೇ ಕಾಣುತ್ತಿತ್ತೇ ಹೊರತು, ಅವಳ ಸಾಧ್ಯತೆಗಳಲ್ಲ.

ಇನ್ನು ಅವಳಿಗೊಂದು ಚಂದದ ಬದುಕು ಕಟ್ಟಿಕೊಡಬೇಕೆಂಬುದು ನಮ್ಮ ಆಸೆ. ಆದರೆ ಅದಕ್ಕೆ ನಮ್ಮದೊಂದೆ ಬೆಂಬಲವಿದ್ದರೆ ಸಾಕೆ? ಹೊರಗಿನ ಜಗತ್ತು ಅವಳನ್ನು ಎಲ್ಲರಂತೇ ಸ್ವೀಕರಿಸಬೇಕಲ್ಲ?  ನಮಗೆ ವಾಸ್ತವವನ್ನು ಒಪ್ಪಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾದುವು. ಇವಳನ್ನು ಶಾಲೆಗೆ ಸೇರಿಸಿದಾಗ ಕೆಲವು ಮಕ್ಕಳು ಇವಳಿಂದ ದೂರ ಉಳಿಯುತ್ತಿದ್ದರು.

ಜತೆಗೆ ಆಟವಾಡುತ್ತಿರಲಿಲ್ಲ. ನಮಗೆ ಅದನ್ನೆಲ್ಲ ಸಹಿಸಲಾಗುತ್ತಿರಲಿಲ್ಲ. ಮನಸ್ಸಿನೊಂದು ಮೂಲೆಯಲ್ಲಿ ಯಾವಾಗಲೂ ಅನ್ನಿಸುವುದುಂಟು, ಅವಳು ಮಾಡಿರದ ತಪ್ಪಿಗೆ ಅವಳಿಗ್ಯಾಕೆ ಶಿಕ್ಷೆ ಎಂದು.  ಹಾಗೆ ಅವಳಿಗೆ ಬೇಕಾದಂತಹಾ ಜೀವನವನ್ನು ನಾವವಳಿಗೆ ಕೊಡುವುದರಲ್ಲಿ ಎಲ್ಲೋ ಸೋಲುತ್ತಿದ್ದೇವೆ ಎಂಬ ಭಾವನೆ ಕಾಡುತ್ತದೆ.  ಕೆಲವೊಮ್ಮೆ ಅನ್ನಿಸುತ್ತದೆ, ಜೀವನ ಬಿಳಿಯ ಹಾಳೆಯ ಮೇಲೆ ಪೆನ್ಸಿಲ್‌ನಿಂದ ಬರೆದ ಚಿತ್ರದ ಹಾಗೆ ಇರಬಾರದೇ ಎಂದು. ಯಾವ ಚಿತ್ರ ನಮಗೆ ಸರಿಹೊಂದುವುದಿಲ್ಲವೊ ಅದನ್ನು ಅಳಿಸಿಬಿಡುವಂಥ ಸಾಧ್ಯತೆ ನನಗಿರಬೇಕಿತ್ತು ಎಂದು. ಆದರೆ ನನ್ನ ಮಗಳ ನಸು ನಗೆಯ ಮುಖವನ್ನೊಮ್ಮೆ ನೋಡಿದರೆ ಸಾಕು, ಇಂಥ ಕಷ್ಟ, ಬೇಜಾರು, ಅಸಹಾಯಕತೆ ಎಲ್ಲವನ್ನೂ ಮರೆತು ಬಿಡುತ್ತೇವೆ.

ಹೌದು! ಅದೇ ನಮಗೆ ಜೀವನದ ಆಧಾರ. ಅದೇ ನಮ್ಮ ಧೈರ್ಯ. ಅವಳು ಅಳುವುದು ಕಮ್ಮಿ. ಮನ ತುಂಬಿ ನಗುವುದೇ ಹೆಚ್ಚು. ಬಹುಶಃ ಇದು ಅವಳಿಗೆ ಮಾತ್ರ ಸಾಧ್ಯ. ಏಕೆಂದರೆ ಅವಳು ಜಗತ್ತಿನಿಂದ ಏನನ್ನೂ ನಿರೀಕ್ಷಿಸುವುದೇ ಇಲ್ಲ. ಬಂದದನ್ನು ಬಂದಂತೆ ಸ್ವೀಕರಿಸುತ್ತಾಳೆ.

ತನ್ನ ಕನಸಿನ ಎಲ್ಲ ಭಾವನೆಗಳನ್ನು ಹೇಳಿಕೊಂಡ  ಸುಜಾತಾ, ಇಷ್ಟು ಹೇಳಿ ಸಂಭ್ರಮದ ನಗೆ ಬೀರಿದಳು. ಸಾರ್ಥಕ ಭಾವದಲ್ಲಿ ಮಿಂದಳು! ಎಲ್ಲಿರಿಗಿಂತ ಭಿನ್ನವಾಗಿರುವುದರಲ್ಲಿ ಏನೂ ತೊಂದರೆಯಿಲ್ಲ. ನಿಜವೆಂದರೆ ಜಗತ್ತಿನಲ್ಲಿ ಎಲ್ಲರೂ ಒಂದೇ ತರವಿದ್ದರೆ ಸೊಗಸಿಲ್ಲ. ಎಲ್ಲ ಕಡೆ ಒಂದೇ ಬಣ್ಣವಿದ್ದರೆ ಏನು ಚಂದ? ಪ್ರಕೃತಿಯಲ್ಲಿ ಹಲವು ಬಣ್ಣಗಳಿರಬೇಕು. ಈ ವಿಭಿನ್ನತೆಯಲ್ಲಿ ಒಂದು ಚೆಲುವಿದೆ. ಎಲ್ಲರಲ್ಲೂ ಇರುವ ಸಾಧ್ಯತೆಯನ್ನು ನಾವು ಗುರುತಿಸಿದರೆ ಸಾಕು, ಜೀವನ ಸುಲಭವಾಗಿ ಬಿಡುತ್ತದೆ. ಅಸಾಧ್ಯವಾದದ್ದು ಯಾವುದೂ ಇಲ್ಲ  ಎಂದು ತೋರಿಸುವ ಈ ವಿಶೇಷ ಮಕ್ಕಳು ಬದುಕಬೇಕು. ಅದಕ್ಕೆ ನಾವು ಚೆಂದದ ಅವಕಾಶ ಕಲ್ಪಿಸಬೇಕು.

ಸ್ಫೂರ್ತಿ ,ತಸ್ಮೇನಿಯಾ

Advertisement

Udayavani is now on Telegram. Click here to join our channel and stay updated with the latest news.

Next