Advertisement

ಚರಿತ್ರೆ ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್‌: ಡಾ|ಜಿ. ಎನ್‌. ಉಪಾಧ್ಯ

01:41 PM Jul 22, 2021 | Team Udayavani |

ಮುಂಬಯಿ: ಘನ ವ್ಯಕ್ತಿತ್ವದ ಜಾರ್ಜ್‌ ಅವರು ಮುಂಬಯಿಯಲ್ಲಿ  ಅರಳಿದ ಮಹಾನ್‌ ಪ್ರತಿಭೆ. ಮುಂಬಯಿಯ ಕಾರ್ಮಿಕರ ಆಂದೋಲನದಲ್ಲಿ ಮಿಂಚಿ ಸಂಚಲನ ಉಂಟು ಮಾಡಿ ಲಕ್ಷಾಂತರ ಬಡ ಕಾರ್ಮಿಕರ ಬಾಳಿಗೆ ಬೆಳಕಾದ ಕ್ರಾಂತಿಯ ಕಿಡಿ  ಅವರು. ಲೋಹಿಯಾವಾದಿ, ಛಲದಂಕಮಲ್ಲ, ದಣಿವರಿಯದ ನಿಷ್ಠಾವಂತ ರಾಜಕಾರಣಿ, ಕಾರ್ಮಿಕ ನೇತಾರ ಹೀಗೆ ವಿವಿಧ ನೆಲೆಗಳಲ್ಲಿ ಲೋಕಮಾನ್ಯರಾದ ಶ್ರೇಯಸ್ಸು ಫೆರ್ನಾಂಡಿಸ್‌ ಅವರಿಗೆ ಸಲ್ಲುತ್ತದೆ.

Advertisement

ಲೋಕೋಪಯೋಗಿಯಾದ ಅಸಾಧಾರಣವಾದ ಕಾರ್ಯ ಸಾಹಸಗಳನ್ನು ಮಾಡಿ ಸಫಲರಾದವರು ಜಾರ್ಜ್‌ ಎಂಬುದು ಉಲ್ಲೇಖನೀಯ. ಪ್ರತಿಯೊಬ್ಬ ವ್ಯಕ್ತಿಯೂ ಚರಿತ್ರೆಗೆ ತನ್ನ ಪಾಲಿನ ಕೊಡುಗೆಯನ್ನು ಸಂದಾಯ ಮಾಡುತ್ತಾನೆ. ಆದರೆ ಚರಿತ್ರೆ ನಿರ್ಮಿಸುವವರ ಸಂಖ್ಯೆ ವಿರಳ. ನಿಜವಾದ ಅರ್ಥದಲ್ಲಿ  ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ನಮ್ಮ ಜಾರ್ಜ್‌ ಎಂದು ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅಭಿಪ್ರಾಯಪಟ್ಟರು.

ಸಾಂತಕ್ರೂಜ್‌ ಪೂರ್ವದ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‌ನ ರಾನಡೆ ಭವನದಲ್ಲಿ ಜು. 13ರಂದು ಸುರೇಖಾ ಹೇಮನಾಥ ದೇವಾಡಿಗ ಅವರ “ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್‌ ಫೆರ್ನಾಂಡಿಸ್‌’ ಕೃತಿ ಸಮರ್ಪಣ ಕಾರ್ಯಕ್ರಮದಲ್ಲಿ  ಕೃತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜಾರ್ಜ್‌ ಅವರು ಮಾನವತಾವಾದಿ. ಜಾತಿ, ಮತ, ಪಂಥ, ಪಂಗಡಗಳನ್ನು ಮೀರಿ ಬೆಳೆದ ದೂರದೃಷ್ಟಿ ಹೊಂದಿದ್ದ ಪ್ರಗತಿಶೀಲ ಚಿಂತಕರೂ ಆಗಿದ್ದರು.

ಸಹಜವಾದ ಪ್ರತಿಭೆ ಸಮಾಜವನ್ನು ಮೀರಿ ಬೆಳೆಯಬಲ್ಲದು ಎಂಬುದಕ್ಕೆ ಜಾರ್ಜ್‌ ಅವರು ಉತ್ತಮ ನಿದರ್ಶನ. ಜಾರ್ಜ್‌ ಅವರ ಕುರಿತು ಅಮ್ಮೆಂಬಳ ಆನಂದ ಅವರು ಕನ್ನಡದಲ್ಲಿ ಕೃತಿಯನ್ನು ರಚಿಸಿದ್ದಾರೆ. ಇದೀಗ ದೊಡ್ಡ ಪ್ರಮಾಣದಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಅವರ ಧೀಮಂತ ವ್ಯಕ್ತಿತ್ವದ ಸಮಗ್ರ ದರ್ಶನ ಪ್ರಸ್ತುತ ಕೃತಿಯಲ್ಲಿ ದಾಖಲಾಗಿದೆ. ಈ ಕೃತಿಯನ್ನು ಅಭಿಜಿತ್‌ ಪ್ರಕಾಶನವು ಪ್ರಕಟಿಸಿದೆ. ಇದೊಂದು ಒಳ್ಳೆಯ ಕೃತಿ. ಬಹು ಶ್ರಮವಹಿಸಿ ಈ ಕೃತಿಯನ್ನು ರಚಿಸಿದ ನಮ್ಮ ವಿಭಾಗದ ಸುರೇಖಾ ದೇವಾಡಿಗ ಅವರ ಶ್ರಮ ಸಾರ್ಥಕವಾಗಿದೆ ಎಂದು ಈ ಮೌಲಿಕ ಕೃತಿಗಾಗಿ ಸುರೇಖಾ ದೇವಾಡಿಗ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ  ಮಾತನಾಡಿ, ಕಾರ್ಮಿಕ ನೇತಾರರಾಗಿ, ರಾಜಕೀಯ ಮುಖಂಡರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ ಜಾರ್ಜ್‌ ಫೆರ್ನಾಂಡಿಸ್‌ ಅವರ ಜೀವನದ ವಿವಿಧ ಮುಖಗಳು, ಏಳುಬೀಳುಗಳನ್ನು ಈ ಕೃತಿಯಲ್ಲಿ ಅವರ ನಿಕಟವರ್ತಿಗಳು, ಆತ್ಮೀಯರು ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಮಾಹಿತಿಗಳನ್ನು ಕಲೆ ಹಾಕುವುದು ಅಷ್ಟು ಸುಲಭದ ಸಂಗತಿಯಲ್ಲ. ಸುರೇಖಾ ದೇವಾಡಿಗ ಅವರು ಬಹಳ ಪರಿಶ್ರಮಪಟ್ಟು ಸಮಯೋಚಿತ ವಿಷಯಗಳನ್ನು ಸಂಗ್ರಹಿಸಿ ದಾಖಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಜಾರ್ಜ್‌ ಫೆರ್ನಾಂಡಿಸ್‌ ಅವರ ಜೀವನದ ಯಶೋಗಾಥೆ ಬಿಂಬಿಸುವ ಈ ಕೃತಿ ಕನ್ನಡ ವಿಭಾಗದ ಸಂಶೋಧನ ಸಹಾಯಕಿ ಆಗಿರುವ ಸುರೇಖಾ ಅವರು ಸಂಪಾದಿಸಿರುವುದು ಅಭಿಮಾನದ ಸಂಗತಿ ಎಂದರು.

Advertisement

ಕೃತಿ ಸಮರ್ಪಣ ಕಾರ್ಯಕ್ರಮದಲ್ಲಿ  ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ| ಉಮಾ ರಾವ್‌, ಕಲಾ ಭಾಗÌತ್‌, ಶೈಲಜಾ ಹೆಗಡೆ, ಪ್ರತಿಭಾ ರಾವ್‌, ಕನ್ನಡ ವಿಭಾಗದ ಕಚೇರಿ ಸಹಾಯಕರಾದ ರೇಷ್ಮಾ ಮಾನೆ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next