ಮಂಡ್ಯ: ಜಿಲ್ಲಾ ಜೆಡಿಎಸ್‌ನ ಅತೃಪ್ತ ಶಾಸಕರೆಂದು ಬಿಂಬಿತವಾಗಿರುವ ರವೀಂದ್ರ ಶ್ರೀಕಂಠಯ್ಯ ಅವರ ಮೈಸೂರು ನಿವಾಸಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಪುತ್ರ ನಿಖಿಲ್ಗೆ ರಾಜಕೀಯ ತೊಡಕುಗಳು ಎದುರಾಗದಂತೆ ಅನಿತಾ ಬೆಂಬಲವಾಗಿ ನಿಲ್ಲಲು ಮುಂದಾಗಿದ್ದಾರೆ.
ಕ್ಷೇತ್ರಕ್ಕೆ ಅನುದಾನ ಹಂಚಿಕೆ ಹಾಗೂ ಕೆಆರ್‌ಎಸ್ ನಿವಾಸಿಗಳಿಗೆ ಹಕ್ಕುಪತ್ರ ನೀಡದಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನಗೊಂಡಂತೆ ಕಂಡುಬಂದಿದ್ದರು. ಆ ಹಿನ್ನೆಲೆಯಲ್ಲಿ 5000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಸಿಎಂ ಕುಮಾರಸ್ವಾಮಿ ಬಂದಿದ್ದಾಗಲೂ ಗೈರು ಹಾಜರಾಗಿದ್ದರಲ್ಲದೆ, ಜೆಡಿಎಸ್ ಕಾರ್ಯಕ್ರಮಗಳಿಂದಲೂ ಅಂತರ ಕಾಯ್ದುಕೊಂಡಿದ್ದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಸ್ಪರ್ಧೆ ಹಿನ್ನೆಲೆಯಲ್ಲಿ ಸ್ವಪಕ್ಷೀಯ ಶಾಸಕನ ಅತೃಪ್ತಿ ಶಮನಕ್ಕೆ ಅನಿತಾ ಮುಂದಾಗಿದ್ದಾರೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಮೈಸೂರಿನ ರವೀಂದ್ರ ಶ್ರೀಕಂಠಯ್ಯ ನಿವಾಸಕ್ಕೆ ಪುತ್ರ ನಿಖಿಲ್ ಜೊತೆ ತೆರಳಿದ ಅನಿತಾ ಕುಮಾರಸ್ವಾಮಿ, ಉಪಹಾರ ಸೇವನೆ ಮಾಡಿ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.
ನಿಮ್ಮ ಅಸಮಾಧಾನ, ಅತೃಪ್ತಿ ಎಲ್ಲವನ್ನೂ ಬದಿಗಿಟ್ಟು ನಿಖಿಲ್ ಗೆಲುವಿಗೆ ಪೂರ್ಣ ಸಹಕಾರ ನೀಡಿ. ನಿಮ್ಮ ಬೇಡಿಕೆಗಳಿಗೆ ಚುನಾವಣೆ ಮುಗಿದ ನಂತರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲು ಸಿದ್ಧರಿದ್ದೇವೆ. ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸೋಣ. ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳದಂತೆ ಮನವಿ ಮಾಡಿದರು.
ಅನಿತಾ ಕುಮಾರಸ್ವಾಮಿ ಅವರ ಮಾತಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ ರವೀಂದ್ರ ಶ್ರೀಕಂಠಯ್ಯ, ನನಗೆ ಯಾರ ಮೇಲೂ ಬೇಸರವಿಲ್ಲ. ಅತೃಪ್ತಿ ಇದೆ ಎನ್ನುವುದೆಲ್ಲಾ ಕೇವಲ ವದಂತಿಯಷ್ಟೇ. ಚುನಾವಣೆಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆ ನಟ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.