ಕನ್ನಡ ಚಿತ್ರರಂಗದಲ್ಲಿ ಹೀರೋಗಳು ನಿರ್ದೇಶಕರಾಗಿರುವುದು ಹೊಸದೇನಲ್ಲ. ಹಲವು ನಟರು ನಿರ್ದೇಶಕರಾಗಿ ಎಂಟ್ರಿಕೊಟ್ಟಿದ್ದಾಗಿದೆ. ಇತ್ತೀಚೆಗಷ್ಟೇ ಸತೀಶ್ ನೀನಾಸಂ ಕೂಡ ನಿರ್ದೇಶನಕ್ಕೆ ಧುಮುಕಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅನೀಶ್ ತೇಜೇಶ್ವರ್ ಸರದಿ. ಹೌದು, “ವಾಸು ನಾನು ಪಕ್ಕಾ ಕಮರ್ಷಿಯಲ್’ ಚಿತ್ರದ ನಂತರ ಅನೀಶ್ ತೇಜೇಶ್ವರ್ ಏನು ಮಾಡುತ್ತಾರೆ, ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬ ಬಗ್ಗೆ ಒಂದಷ್ಟು ಪ್ರಶ್ನೆಗಳಿದ್ದವು. ಆ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.
ಹೌದು, ಅನೀಶ್ ತೇಜೇಶ್ವರ್ ಈಗ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ನಾಯಕರಾಗಿಯೂ ನಟಿಸುತ್ತಿದ್ದಾರೆ. ಅವರು ಮೊದಲ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ರಾಮಾರ್ಜುನ’. ಈಗಾಗಲೇ ಸದ್ದಿಲ್ಲದೆಯೇ ಅನೀಶ್ ತೇಜೇಶ್ವರ್ ಅವರು, ಶೇ.30 ರಷ್ಟು ಚಿತ್ರೀಕರಣವನ್ನೂ ಮಾಡಿ ಮುಗಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಜನವರಿ 12 ರಂದು “ರಾಮಾರ್ಜುನ’ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಲಾಂಚ್ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ ಅವರು.
ತಮ್ಮ ಚೊಚ್ಚಲ ನಿರ್ದೇಶನದ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಅನೀಶ್ ತೇಜೇಶ್ವರ್, “ನಾನು ನಿರ್ದೇಶನ ಮಾಡಬೇಕು ಅಂತ ಯೋಚಿಸಿಯೇ ಇರಲಿಲ್ಲ. ಎಲ್ಲವೂ ಸಡನ್ ಆಗಿ ನಡೆದಿದೆ. ನನಗೂ ಒಂದು ಬದಲಾವಣೆ ಬೇಕಿತ್ತು. ನಾಯಕನಾಗಿಯೇ ನಟಿಸಬೇಕೆಂಬ ಕಾರಣಕ್ಕೆ ಕಥೆಗಳನ್ನು ಕೇಳುತ್ತಲೇ ಇದ್ದೆ. ಅಷ್ಟಕ್ಕೂ “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ನಂತರ, ಗ್ಯಾಪ್ ಆಗುವುದು ಬೇಡ ಎಂಬ ಕಾರಣಕ್ಕೆ ಸಿನಿಮಾ ಮಾಡಲು ನಿರ್ಧರಿಸಿದ್ದೆ.
ಯಾವುದೇ ಚಿತ್ರ ಮಾಡಿದರೂ, ಒಂದುವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ನಾನು ಬೇರೆ ಏನಾದರೂ ಮಾಡಬೇಕು ಅಂತ ಯೋಚಿಸುತ್ತಿರುವಾಗಲೇ, ನನ್ನ ಗೆಳೆಯನೊಬ್ಬ ಒಂದು ಕಥೆ ಹೇಳಿದ. ಅದು ತುಂಬಾನೇ ಇಂಟ್ರೆಸ್ಟಿಂಗ್ ಆಗಿತ್ತು. ಅದನ್ನೇ ಯಾಕೆ ಸಿನಿಮಾ ಮಾಡಬಾರದು ಅಂತ ನಿರ್ಧರಿಸಿದೆ. ನಿರ್ದೇಶನವನ್ನೂ ನಾನೇ ಯಾಕೆ ಮಾಡಬಾರದು ಎಂಬ ಧೈರ್ಯ ಮಾಡಿ, “ರಾಮಾರ್ಜುನ’ ಚಿತ್ರಕ್ಕೆ ನಿರ್ದೇಶಕನಾಗಿದ್ದೇನೆ’ ಎಂದು ವಿವರ ಕೊಡುತ್ತಾರೆ ಅನೀಶ್.
“ರಾಮಾರ್ಜುನ’ ಶೀರ್ಷಿಕೆ ಕೇಳಿದರೆ, ಇಲ್ಲಿ ಇಬ್ಬರು ಹೀರೋಗಳೇನಾದರೂ ಇರುತ್ತಾರಾ ಎಂಬ ಪ್ರಶ್ನೆ ಬರುತ್ತೆ. ಆದರೆ, ಇಲ್ಲಿ ಅನೀಶ್ ತೇಜೇಶ್ವರ್ ಒಬ್ಬರೇ ಇದ್ದು, ಎರಡು ಶೇಡ್ ಇರುವ ಪಾತ್ರ ಮಾಡುತ್ತಿದ್ದಾರಂತೆ. ಹಾಗಾದರೆ, “ರಾಮಾರ್ಜುನ’ ಕಥೆ ಏನು? ಒಂದೇ ವಾಕ್ಯದಲ್ಲಿ ಹೇಳುವ ನಿರ್ದೇಶಕ ಅನೀಶ್, ರಾಮ ಹೇಳಿದರೆ ಅವರ ಮಾತನ್ನು ಕೇಳುವುದು ಕಡಿಮೆ. ಆದರೆ, ಅರ್ಜುನ ಹೇಳಿದರೆ ಕೇಳುತ್ತಾರೆ.
ಅರ್ಜುನನದು ಏನಿದ್ದರೂ ದಂಡಂ ದಶಗುಣಂ. ಇಲ್ಲಿ ಹೀರೋಗೆ ಎರಡು ರೀತಿಯ ಪಾತ್ರಗಳಿವೆ. ಅದು ಇಲ್ಲಿರುವ ಚಾಲೆಂಜ್ ಎನ್ನುತ್ತಾರೆ ಅನೀಶ್. ನಟನೆ ಮತ್ತು ನಿರ್ದೇಶನ ಎರಡು ಕೆಲಸ ಸ್ವಲ್ಪ ಕಷ್ಟ ಆಗಬಹುದೇನೋ? ಇದಕ್ಕೆ ಉತ್ತರಿಸುವ ಅನೀಶ್, ಹಾಗೇನೂ ಇಲ್ಲ. ಇಷ್ಟು ದಿನಗಳ ಕಾಲ ಎಲ್ಲವನ್ನೂ ಹತ್ತಿರದಿಂದ ನೋಡಿ, ಒಂದಷ್ಟು ತಿಳಿದಿದ್ದೇನೆ. ಆ್ಯಕ್ಷನ್-ಕಟ್ ಹೇಳುವುದಷ್ಟೇ ಇಲ್ಲಿ ಹೊಸದು.
ಮೊದಲು ನನಗೆ ವಿಶ್ವಾಸ ಬಂದ ಬಳಿಕ ಚಿತ್ರದ ಹೆಸರು ಹಾಕಿಕೊಂಡು ಅನೌನ್ಸ್ ಮಾಡಬೇಕೆಂಬ ಯೋಚನೆ ಇತ್ತು. ಈಗ ಆ ವಿಶ್ವಾಸ ಬಂದಿದೆ. ಹಾಗಾಗಿ ನಾನೇ ಅನೌನ್ಸ್ ಮಾಡಿಕೊಂಡಿದ್ದೇನೆ. ಜ.12 ರಂದು ಟೀಸರ್ ಲಾಂಚ್ ಆಗಲಿದೆ. ಚಿತ್ರಕ್ಕೆ ಈಗಾಗಲೇ ಎರಡು ಫೈಟ್ಸ್ ಮತ್ತು ಒಂದಷ್ಟು ದೃಶ್ಯಗಳ ಚಿತ್ರೀಕರಣವಾಗಿದೆ. ನಿಶ್ವಿಕಾ ನಾಯ್ಡು ಇಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನವೀನ್ ಅಕ್ಷಿ ಛಾಯಾಗ್ರಹಣವಿದೆ. ಆನಂದ್ ರಾಜವಿಕ್ರಮ್ ಸಂಗೀತವಿದೆ. ವಿಕ್ರಮ್ ಸಾಹಸವಿದೆ ಎಂಬುದು ಅನೀಶ್ ಮಾತು.