ಹಿರಿಯ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಈಗ ಕಿರುತೆರೆಯಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ಕೋವಿಡ್ 19 ಲಾಕ್‌ಡೌನ್ ನಿಂದಾಗಿ ಕಿರುತೆರೆಯ ಧಾರಾವಾಹಿಗಳು ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಈ ಲಾಕ್ ಡೌನ್ ಸಮಯದಲ್ಲಿ ಅನಿರುದ್ಧ್ ಸಿಕ್ಕಿರುವ ಸಮಯವನ್ನು ವ್ಯರ್ಥ ಮಾಡದೇ ಓದು, ಬರಹ ಅಂತೆಲ್ಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೀತಿಯ ಅತ್ತೆ ಭಾರತಿ ವಿಷ್ಣುವರ್ಧನ್ ಅವರ ಬದುಕಿನ ಹೂರಣವನ್ನು ಹೊತ್ತ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ) ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ.
ಈ ಡಾಕ್ಯುಮೆಂಟರಿಯಲ್ಲಿ ಭಾರತಿ ವಿಷ್ಣುವರ್ಧನ್ ಅವರ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಜೀವನವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರಂತೆ ಅನಿರುದ್ª. ಇನ್ನು ಭಾರತಿ ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ “ಬಾಳ ಬಂಗಾರ ನೀನು’ ಹಾಡಿನ ಸಾಲನ್ನೆ ಅನಿರುದ್ಧ್ª ಈ ಡಾಕ್ಯುಮೆಂಟರಿಗೆ ಇಟ್ಟಿದ್ದಾರೆ. ಸುಮಾರು ಎರಡೂವರೆ ತಾಸಿನ ಈ ಸಾಕ್ಷ್ಯಚಿತ್ರಕ್ಕೆ ಅನಿರುದ್ಧ್ ಅವರೆ ಕಥೆ, ಸಂಭಾಷಣೆ ಬರೆದು ಅವರೇ ಸಿದ್ಧಪಡಿಸುತ್ತಿದ್ದಾರೆ.
ಪ್ರತಿದಿನ ಈ ಡಾಕ್ಯುಮೆಂಟರಿಗಾಗಿ ಅನಿರುದ್ಧ್ ಸಮಯವನ್ನು ಮೀಸಲಿಟ್ಟಿದ್ದಾರೆ. ಇನ್ನು ಮನೆಯಲ್ಲಿ ಸುಮ್ಮನೆ ಕೂರದ ಅನಿರುದ್ಧ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು ಮಾಡುತ್ತಾರೆ. ಪತ್ನಿ ಕೀರ್ತಿವರ್ಧನ್, ಅತ್ತೆ ಭಾರತಿಗೆ ಮನೆಯ ಕೆಲಸದಲ್ಲೂ ಆಗಾಗ ಕೈಜೋಡಿಸುತ್ತಾರಂತೆ.
ಈ ಬಗ್ಗೆ ಮಾತನಾಡುವ ಅನಿರುದ್ಧ್, ಸಿಕ್ಕಿರುವ ಸಮಯವನ್ನು ವ್ಯರ್ಥ ಮಾಡಬಾರದು. ಏನಾದರೂ ಹೊಸತನ್ನು ಕಲಿಯುವುದು ಓದುವುದು ಮಾಡಬೇಕು.ಹೊಸ ಹೊಸ ವಿಚಾರಗಳನ್ನು ಓದಿ ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬೇಕು ಎನ್ನುತ್ತಾರೆ. ಇನ್ನು ಅನಿರುದ್ಧ್, ಕಿರುತೆರೆಯ ಧಾರಾವಾಹಿಯಯಲ್ಲಿ ನಟಿಸುವುದಕ್ಕೆ ಅವರನ್ನು ಒಪ್ಪಿಸಿದ್ದು ಅವರ ಪುತ್ರಿಯಂತೆ. “ಹೊಸ ಸವಾಲುಗಳನ್ನು ಎದುರಿಸಲು ಇಷ್ಟಪಡುವ ನಾನು ಧಾರಾವಾಹಿಯನ್ನು ಕೂಡ ಸವಾಲಾಗಿಯೇ ಸ್ವೀಕರಿಸಿದ್ದೆ. ಹೊಸ ಆಯಾಮಗಳನ್ನು ಬಹಳ ವಿವರವಾಗಿ ನಾಟಕದಲ್ಲಾಗಲೀ ಸಿನಿಮಾದಲ್ಲಾಗಲೀ ಅಷ್ಟಾಗಿ ಬಿಚ್ಚಿಡಲು ಸಾಧ್ಯವಿಲ್ಲ. ಕಿರುತೆರೆ ತಲುಪಿರುವಷ್ಟೂ ಯಾವುದೇ ಮಾಧ್ಯಮ ಇಷ್ಟು ಸುಲಭವಾಗಿ ಜನರನ್ನು ಅದೂ ಗ್ರಾಮೀಣ ಭಾಗದಲ್ಲಿ ತಲುಪಿಲ್ಲ. ಜನರ ಪ್ರೀತಿ ಹಾರೈಕೆ ಆಶೀರ್ವಾದವೇ ಈ ಯಶಸ್ಸಿಗೆ ಕಾರಣ’ ಎಂದು ಹೇಳುತ್ತಾರೆ ಅನಿರುದ್ಧ್.