ಕೋಲಾರ: ಸತತ ಬರದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಬೇಸಿಗೆಯ ಬೇಗೆ ತಡೆಯಲಾಗದೇ ಕಾಡುಪ್ರಾಣಿಗಳು, ಪಕ್ಷಿಗಳು ವಸತಿ ಪ್ರದೇಶಗಳತ್ತ ಬರುತ್ತಿರುವುದು ದಯಾನೀಯ ಸ್ಥಿತಿಗೆ ಸಾಕ್ಷಿಯಾಗಿದ್ದರೆ, ಅವುಗಳ ಉಪಟಳದಿಂದ ರೈತರು ಸಂಕಷ್ಟಕ್ಕೀಡಾಗುತ್ತಿರುವುದು ಕಂಡು ಬರುತ್ತಿದೆ.
ಕಾಡಲ್ಲಿರುವ ಪ್ರಾಣಿಗಳು: ಜಿಲ್ಲೆಯ ಅರಣ್ಯಗಳಲ್ಲಿ ಕೋತಿ, ಮೊಲ, ಜಿಂಕೆ ಮತ್ತು ನವಿಲು ಯಥೇಚ್ಛವಾಗಿ ಕಂಡುಬಂದರೆ ಕೆಜಿಎಫ್ ತಾಲೂಕಿನ ಕೃಷ್ಣಾವರಂ ಭಾಗದಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳು ಇದೆ. ಉಳಿದಂತೆ ಕಾಡುಹಂದಿ, ಚಿರತೆ ಇನ್ನಿತರೆ ವನ್ಯಜೀವಿ ಗಳು ಎಲ್ಲಾ ಅರಣ್ಯಗಳಲ್ಲೂ ಕಂಡುಬರುತ್ತಿದೆ.
ನಾಡಿಗೆ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರದ ಹಿನ್ನೆಲೆಯಲ್ಲಿ ಜನಜಾನುವಾರುಗಳ ಜತೆಗೆ ಕಾಡುಪ್ರಾಣಿಗಳಿಗೂ ನೀರಿಗೆ ತತ್ವಾರ ಉಂಟಾಗಿದೆ. ಕಾಡುಪ್ರಾಣಿಗಳಿಗೆ ಆಹಾರವೂ ಸಿಗುತ್ತಿಲ್ಲ. ಜನಜಾನುವಾರುಗಳಿಗೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ, ಜಿಪಂ ಮಾಡುತ್ತಿದ್ದರೆ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಬೇಕು. ಈ ದಿಸೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದ್ದರೂ ಕಾಡುಪ್ರಾಣಿಗಳು ನೀರಿಗಾಗಿ ನಾಡಿಗೆ ಬರುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ನೀರು ಹುಡುಕಾಡುತ್ತಾ ಕಾಡಿನಿಂದ ನಾಡಿಗೆ ರಸ್ತೆ ದಾಟಿಕೊಂಡು ಬರುವಾಗ ವಾಹನ ಡಿಕ್ಕಿಯಾಗಿ ಇಲ್ಲವೇ ಊರೊಳಗೆ ಬೀದಿ ನಾಯಿಗಳ ದಾಳಿಗೆ ಜಿಂಕೆಗಳು ಬಲಿಯಾಗುತ್ತಿರುತ್ತದೆ. ಕಳೆದ ತಿಂಗಳು ವಕ್ಕಲೇರಿ ಅರಣ್ಯ ವ್ಯಾಪ್ತಿಯಲ್ಲಿ ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು 6 ಜಿಂಕೆಗಳು ಮೃತಪಟ್ಟಿತ್ತು. ಅಂತರಗಂಗೆ ಬೆಟ್ಟದಲ್ಲೂ ಇದೇ ರೀತಿ ವಿಷಾಹಾರ ತಿಂದು ಕೋತಿಗಳು ಮೃತಪಟ್ಟಿದ್ದವು. ಇದೆಲ್ಲದಕ್ಕೂ ಕಾಡಿನ ಜೀವ ಸಂಕುಲಗಳಿಗೆ ನೀರು, ಆಹಾರ ಇಲ್ಲದಿಂದ ಉಂಟಾಗಿರುವ ಪ್ರಾಣಹಾನಿಗಳಾಗಿದೆ.
Advertisement
ಜಿಲ್ಲೆಯಲ್ಲಿ ಐದು ಅರಣ್ಯ ವಲಯಗಳಿದ್ದು, ಶ್ರೀನಿವಾಸಪುರದಲ್ಲಿ ಅತೀ ಹೆಚ್ಚು ಅಂದರೆ 18,274 ಹೆಕ್ಟೇರ್ ಅರಣ್ಯವಿದೆ. ಉಳಿದಂತೆ ಕೋಲಾರದಲ್ಲಿ 7053 ಹೆಕ್ಟೇರ್, ಮಾಲೂರಿನಲ್ಲಿ 7368 ಹೆಕ್ಟೇರ್, ಬಂಗಾರಪೇಟೆಯಲ್ಲಿ 8922 ಹೆಕ್ಟೇರ್, ಮುಳಬಾಗಿಲು ತಾಲೂಕಿನಲ್ಲಿ 9214 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯಪ್ರದೇಶ ವ್ಯಾಪಿಸಿದೆ.
Related Articles
Advertisement
ಜಿಂಕೆ, ಕಾಡುಹಂದಿಗಳು ಗ್ರಾಮದಲ್ಲೇ ಓಡಾಟ: ತಾಲೂಕಿನ ಹೋಳೂರು-ಬೆಣ್ಣಂಗೂರು ಮಾರ್ಗದಲ್ಲಿ ಅರಣ್ಯ ಪ್ರದೇಶವಿದ್ದು, ಇಲ್ಲಿ ಜಿಂಕೆ, ನವಿಲು, ಕಾಡುಹಂದಿ ಹೆಚ್ಚಾಗಿದೆ. ಹೋಳೂರು ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದೀಚೆಗೆ ನವಿಲುಗಳು ಕಾಡು ಬಿಟ್ಟು ನಾಡಿಗೆ ಬಂದಿದೆ. ನೀರು, ಆಹಾರವಿಲ್ಲದೆ ಸಂಕಷ್ಟ ಪಡುತ್ತಿರುವ ನವಿಲುಗಳು ಜೀವ ಉಳಿಸಿಕೊಳ್ಳುವ ಸಲುವಾಗಿ ಹಗಲು ವೇಳೆಯಲ್ಲೇ ಊರಿನಲ್ಲಿ ಮನೆಗಳ ಬಳಿ ಓಡಾಡಿಕೊಂಡು ನೀರು, ಆಹಾರವನ್ನು ಬಯಸುತ್ತಿವೆ. ಹಿಂದೆಂದೂ ಈ ಪ್ರಮಾಣದಲ್ಲಿ ನವಿಲುಗಳು ಊರಿನೊಳಗೆ ಬಂದಿದ್ದಿಲ್ಲ ಎನ್ನುತ್ತಾರೆ ಬೆಣ್ಣಂಗೂರು ಗ್ರಾಮಸ್ಥರು.
ಹೋಳೂರು ಮಾತ್ರವಲ್ಲದೆ ಮಾರೇನಹಳ್ಳಿ, ಘಟ್ಟಹಳ್ಳಿ, ಜಡೇರಿ, ಬೆಣ್ಣಂಗೂರು, ನಾಯಕರಹಳ್ಳಿ, ಅಣ್ಣೇನಹಳ್ಳಿ ಹೀಗೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಜಿಂಕೆ, ನವಿಲುಗಳು ನಾಡಿನೊಳಕ್ಕೆ ಬಂದು ನೀರು, ಆಹಾರ ಅರಸುತ್ತಿದೆ. ಬೇತಮಂಗಲ ರಸ್ತೆಯಲ್ಲಿ ಬರುವ ನಡುಪಳ್ಳಿ ಗ್ರಾಮದಲ್ಲೂ ಇದೇ ಪರಿಸ್ಥಿತಿ ಇದೆ. ಜಿಂಕೆಗಳ ಕಾಟಕ್ಕೆ ಬೆಳೆಗಳನ್ನು ಕಳೆದುಕೊಂಡು ಹೈರಾಣವಾಗಿದ್ದೇವೆ ಎನ್ನುತ್ತಾರೆ ನಿವಾಸಿಗಳು. ಜಿಂಕೆಗಳು ರಾತ್ರಿಯಾಗುತ್ತಿದ್ದಂತೆಯೇ ಹಿಂಡುಹಿಂಡಾಗಿ ಹೊಲಗದ್ದೆಗಳತ್ತ ದೌಡಾಯಿಸುತ್ತಿದ್ದು, ಟೊಮೆಟೋ ಸೇರಿದಂತೆ ನಾಟಿ ಮಾಡಿರುವ ತರಕಾರಿಗಳ ಗಿಡದ ಚಿಗುರುಗಳನ್ನೇ ತಿಂದು ಹಾಕುತ್ತಿದೆ. ನವಿಲುಗಳು ಹನಿ ನೀರಾವರಿಯ ಪೈಪ್‌ಗ್ಳನ್ನು ಅಲ್ಲಲ್ಲಿ ತನ್ನ ಕೊಕ್ಕಿನಿಂದ ಕುಟುಕಿ ನೀರು ಕುಡಿಯುತ್ತಿರುವುದರಿಂದ ರೈತರ ಡ್ರಿಪ್‌ನ ಪೈಪ್‌ಗ್ಳು ಹಾಳಾಗುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ.ಕಾಡುಹಂದಿಗಳು ಆಲೂಗಡ್ಡೆ, ಮುಸುಕಿನ ಜೋಳ ತಿಂದು ಹಾಕುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಕಾಡುಹಂದಿಯೊಂದು ರೈತರೊಬ್ಬರ ಮೇಲೆರಗಿ ದಾಳಿ ಮಾಡಿದ್ದರಿಂದ ತೀವ್ರ ಗಾಯಗೊಂಡು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ಜತೆ ಸೆಣಸಾಡಿ ಅಸುನೀಗಿದ್ದನ್ನು ಸ್ಮರಿಸಿಕೊಳ್ಳಬಹುದು.
ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳ ನಿರ್ಮಾಣ:
ಹೋಳೂರು ಭಾಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ನರೇಗಾದನ್ವಯ ಅಲ್ಲಲ್ಲಿ ಕುಂಟೆಗಳನ್ನು ನಿರ್ಮಿಸಲಾಗಿದ್ದರೂ ನೀರು ತುಂಬಿಸುವ ಕಾರ್ಯ ನಡೆಯುತ್ತಿಲ್ಲ. ಗ್ರಾಮಗಳಲ್ಲಿನ ಯುವಕರು ಸ್ವಯಂಪ್ರೇರಿತರಾಗಿ ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿದ್ದರೂ ಅವು ಸಾಕಾಗುತ್ತಿಲ್ಲ. ಹೀಗಾಗಿ ನವಿಲು, ಜಿಂಕೆಗಳು ನೀರು, ಆಹಾರಕ್ಕೆ ಊರೊಳಗೆ ಬರುತ್ತಿದೆ. ಹೋಳೂರು ದೊಡ್ಡಕೆರೆ ಕೆ.ಸಿ.ವ್ಯಾಲಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದು, ಇತ್ತೀಚೆಗೆ ಕೆರೆ ಸುತ್ತಮುತ್ತ ಬೆಳೆದು ನಿಂತಿದ್ದ ನೀಲಗಿರಿ ಮರ ಕಡಿಯಲಾಗಿದೆ. ಕಳೆದ ಕೆಲ ವಾರಗಳಿಂದ ನವಿಲುಗಳು ಊರಿನೊಳಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ನೀರಿಗಾಗಿ ತೊಟಗಳಲ್ಲಿನ ಡ್ರಿಪ್‌ನ ಪೈಪ್‌ಗ್ಳನ್ನು ಕುಟುಕಿ ಹಾನಿ ಮಾಡುತ್ತಿದೆ. ಕಾಡುಹಂದಿಯ ಕಾಟಕ್ಕೆ ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗುತ್ತಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಅರಣ್ಯ ಇಲಾಖೆಗೆ ಮೌಖೀಕವಾಗಿ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಹೋಳೂರು ಗ್ರಾಮದ ರೈತರು.