Advertisement
ಹದ್ದು ಒಬ್ಬಂಟಿಯಾಗಿ ಬಾನೆತ್ತರಕ್ಕೆ ಹಾರುತ್ತದೆ. ಯಾವುದೇ ಕಾರಣಕ್ಕೂ ಪಾರಿವಾಳ, ಗಿಳಿ, ಕಾಗೆಗಳ ಜತೆಗಲ್ಲ. ಇದೇ ರೀತಿ ಯಾವುದೇ ಯಶಸ್ಸನ್ನು ಗಳಿಸಬೇಕಾದರೆ ಮೊದಲು ನಮ್ಮ ಮನಃಸ್ಥಿತಿ ಗಟ್ಟಿಯಾಗಿರಬೇಕು. ಸ್ವ-ಪ್ರಯತ್ನ, ಪರಿಶ್ರಮ ಮುಖ್ಯ. ಕಾಲೆಳೆಯುವವರಿಂದ ದೂರವಿದ್ದು, ನಕಾರಾತ್ಮಕ ಮನಃಸ್ಥಿತಿಯವರಿಂದ ಆದಷ್ಟು ಅಂತರವನ್ನು ಕಾಪಾಡಿಕೊಳ್ಳುವುದು ಉತ್ತಮ. ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಲ್ಲೆ ಎನ್ನುವ ಛಾತಿ ನಮ್ಮದಾಗಬೇಕು.
Related Articles
Advertisement
ತಾಯಿ ಹದ್ದು ಯಾವಾಗಲೂ ತನ್ನ ಗೂಡಿನಲ್ಲಿರುವ ಮೃದುವಾದ ಹುಲ್ಲನ್ನು ಹೊರ ತೆಗೆಯುತ್ತಿರುತ್ತದೆ. ಮೆದುತನವಿದ್ದರೆ ತನ್ನ ಮರಿಗಳು ಎಲ್ಲಿ ಆಲಸಿಗಳಾಗುತ್ತವೋ, ಗುಟುಕಿಗೆ ಹಾತೊರೆಯಲಾರವೋ, ರೆಕ್ಕೆ ಬಿಚ್ಚಲಾರವೋ ಎನ್ನುವ ಕಾಳಜಿ. ಸಮತಟ್ಟಾದ ರಸ್ತೆಗಳು ಹೇಗೆ ಉತ್ತಮ ಚಾಲಕನನ್ನು ರೂಪಿಸುವುದಿಲ್ಲವೋ ಹಾಗೆಯೇ ಕಷ್ಟಗಳೇ ಇಲ್ಲದ ಜೀವನ ಸರಿಯಾದ ವ್ಯಕ್ತಿಯನ್ನು ರೂಪಿಸಲಾರವು. ಸಮಸ್ಯೆಗಳನ್ನು ಎದುರಿಸುವುದು ಪ್ರಾರಂಭದಿಂದಲೇ ರೂಢಿ ಆಗಬೇಕು. ಬದುಕು ಯಾವತ್ತೂ ಸುಖದ ಸುಪ್ಪತ್ತಿಗೆ ಅಲ್ಲ.
ಹೆಣ್ಣು ಹದ್ದು ಸುಖಾ ಸುಮ್ಮನೆ ಗಂಡು ಹದ್ದನ್ನು ನಂಬುವುದಿಲ್ಲ. ಅದರ ಬದ್ಧತೆಯನ್ನು ಪರೀಕ್ಷಿಸುತ್ತದೆ. ಗಂಡು ಹದ್ದಿನ ಬದ್ಧತೆಯನ್ನು ಪರೀಕ್ಷಿಸಲು, ಹೆಣ್ಣು ಹದ್ದು ರೆಂಬೆಯನ್ನು ಹಿಡಿದುಕೊಂಡು ಆಕಾಶದೆತ್ತರಕ್ಕೆ ಹಾರಿ, ಅಲ್ಲಿಂದ ತಾನು ಹಿಡಿದುಕೊಂಡಿರುವ ರೆಂಬೆಯನ್ನು ಬೀಳಿಸಿ ಅದನ್ನು ಹಿಡಿಯಲು ಗಂಡು ಹದ್ದಿಗೆ ಸೂಚಿಸುತ್ತದೆ. ಭೂಮಿಗೆ ರೆಂಬೆ ಬೀಳುವ ಮೊದಲೇ ಗಂಡು ಹದ್ದು ಅದನ್ನು ಹಿಡಿದುಕೊಂಡರೆ ಹೆಣ್ಣು ಹದ್ದು ಆ ಗಂಡು ಹದ್ದನ್ನು ನಂಬುತ್ತದೆ. ಇಲ್ಲವೆಂದರೆ ನೀನೊಂದು ತೀರ ನಾನೊಂದು ತೀರ. ಯಾವುದೇ ವ್ಯಕ್ತಿಯನ್ನು ನಂಬುವುದಕ್ಕಿಂತ ಮುಂಚೆ ಆತನ ಯೋಗ್ಯತೆ, ಕೌಶಲ, ಸಾಮರ್ಥ್ಯಗಳನ್ನು ಮೊದಲೇ ತಿಳಿದಿರಬೇಕಾಗುತ್ತದೆ. ಮೊದಲೇ ನಂಬಿ ಮೋಸ ಹೋಗುವುದು ತರವಲ್ಲ.
ಹೋರಾಡು ಬಿಳ್ವನ್ನಮೊಬ್ಬಂಟಿ ಯಾದೊಡಂ
ಧೀರ ಪಥವನೆ ಬೆದಕು ಸಕಲ ಸಮಯದೊಳ್
ದೂರದಲ್ಲಿ ಗೊಣಗುತ್ತಾ ಬಾಳುವ ಬಾಳ್ಗೆàನು ಬೆಲೆ?
ಹೋರಿ ಸತ್ವವ ಮೆರೆಸು ಮಂಕುತಿಮ್ಮ
ಎನ್ನುವಂತೆ ಹದ್ದಿನ ಮನಸ್ಥಿತಿ ನಮ್ಮ ಯಶಸ್ವಿ ಜೀವನಕ್ಕೆ ಪ್ರಬಲವಾದ ನೀಲನಕ್ಷೆಯನ್ನು ನೀಡುತ್ತದೆ. ನಿಶ್ಚಿತ ಪ್ರಯತ್ನದೊಂದಿಗೆ ವ್ಯಕ್ತಿ ತನ್ನ ಸಂಪೂರ್ಣ ಸಾಮರ್ಥ್ಯಗಳನ್ನು ಹೊರ ಹಾಕಬಹುದು ಮತ್ತು ಸಾಧನೆಯ ಹೊಸ ಎತ್ತರಕ್ಕೆ ಹಾರಬಹುದು.
-ಕೆ.ಟಿ. ಮಲ್ಲಿಕಾರ್ಜುನಯ್ಯ
ಶಿಕ್ಷಕರು ಕಳ್ಳಿಪಾಳ್ಯ, ಕೊರಟಗೆರೆ