Advertisement

ಪ್ರಾಣಿ ದಾಳಿ ಪರಿಹಾರ ಧನ 10 ಲಕ್ಷ ರೂ.ಗೆ ಏರಿಕೆ?

12:30 AM Feb 18, 2019 | |

ಬೆಂಗಳೂರು: ಮಾನವ ಮತ್ತು ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ಧನ ಹೆಚ್ಚಿಸಬೇಕೆಂಬ ಹಲವು ದಿನಗಳ ಬೇಡಿಕೆಗೆ ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿ ಸ್ಪಂದಿಸಿದ್ದು, ಪರಿಹಾರ ಧನವನ್ನು ದ್ವಿಗುಣಗೊಳಿಸಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ವನ್ಯಜೀವಿ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದು, ಪ್ರಸ್ತಾವನೆ ಅಂಗೀಕಾರವಾದರೆ ಸದ್ಯ ಕೊಡುತ್ತಿರುವ 5 ಲಕ್ಷ ರೂ.ಪರಿಹಾರ ಧನ 10 ಲಕ್ಷ ರೂ.ಗೆ ಏರಿಕೆಯಾಗಲಿದೆ.

Advertisement

ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಭೂಮಿ ವಿಸ್ತರಣೆ, ಅರಣ್ಯ ಒತ್ತುವರಿ ಹೆಚ್ಚಳ, ಅಭಿವೃದಿಟಛಿ ಹೆಸರಿನಲ್ಲಿ ಅರಣ್ಯದ ಮೇಲೆ ಮಾನವನ ಹಸ್ತಕ್ಷೇಪ, ಆನೆ ಹಾಗೂ ಇತರೆ ವನ್ಯಜೀವಿಗಳ ಸಂಖ್ಯೆಯಲ್ಲಿ ಏರಿಕೆ ಹಾಗೂ ಅರಣ್ಯದಲ್ಲಿ ಆಹಾರದ ಕೊರತೆಯಂತಹ ಪ್ರಮುಖ ಕಾರಣದಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಇಂತಹ ದಾಳಿಗಳನ್ನು ತಡೆಯಲು ಅರಣ್ಯ ಇಲಾಖೆಯು ಕಾಡಂಚಿನ ಗ್ರಾಮಗಳಲ್ಲಿ ಸೌರಬೇಲಿ ಅಳವಡಿಕೆ, ಕಂದಕಗಳ ನಿರ್ಮಾಣ,ಉಪಯೋಗಿಸಿದ ರೈಲ್ವೆ ಹಳಿಯಲ್ಲಿ ತಡೆಗೋಡೆ ಯಂತಹ ವಿವಿಧ ಕ್ರಮಗಳನ್ನು ಕೈಗೊಂಡಿದ್ದರೂ ದಾಳಿ ಮುಂದುವರಿದಿದೆ.

ಪ್ರಾಣಿ ದಾಳಿಯಿಂದ ಸತ್ತರೆ ಸದ್ಯ 5 ಲಕ್ಷ ರೂ. ನೀಡಲಾಗುತ್ತಿದೆ. ವ್ಯಕ್ತಿ ಸತ್ತ ದಿನವೇ ಅವರ ಕುಟುಂಬಕ್ಕೆ 2 ಲಕ್ಷ ರೂ.ಚೆಕ್‌ ಅಥವಾ ನಗದು ನೀಡಲಾಗುತ್ತದೆ. ಆನಂತರ ಒಂದು ವಾರದಲ್ಲಿ ಕಾಗದ ಕೆಲಸವನ್ನು ಮುಗಿಸಿ ಉಳಿದ ಮೂರು ಲಕ್ಷ ರೂ.
ನೀಡಲಾಗುತ್ತಿದೆ.ಇದರ ಜತೆಗೆ ಕಳೆದ ವರ್ಷದಿಂದ ಸಾಂತ್ವನ ಧನ ಎಂದು ಐದು ವರ್ಷಗಳವರೆಗೆ ಪ್ರತಿ ತಿಂಗಳು 2,000 ಸಾವಿರ ರೂ.ನೀಡಲಾಗುತ್ತಿದೆ. ಇದರ ನಡುವೆ ಕುಟುಂಬಕ್ಕೆ ಆಧಾರವಾಗುವ ವ್ಯಕ್ತಿಯೇ ಸಾವಿಗೀಡಾದರೆ 5 ಲಕ್ಷ ರೂ. ಪರಿಹಾರ ಧನ ಸಾಕಾಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸ ಸೇರಿ ಇನ್ನಿತರ ಖರ್ಚಿಗಾಗಿ ಪರಿಹಾರ ಧನವನ್ನು ಹೆಚ್ಚಿಸಬೇಕೆಂದು ಅರಣ್ಯದಂಚಿನ ಗ್ರಾಮಸ್ಥರು ಹಾಗೂ ವನ್ಯಜೀವಿ ತಜ್ಞರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಕಳೆದ ವರ್ಷ 35 ಮಂದಿ ಸಾವು: ಪ್ರಾಣಿ ದಾಳಿಯಿಂದ 2017 -18ನೇ ಸಾಲಿನಲ್ಲಿ ರಾಜ್ಯದ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು, ಒಂದು ಮಗು ಸೇರಿ ಒಟ್ಟು 35 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಆನೆಯಿಂದ 22 ಮಂದಿ ಬಲಿಯಾಗಿದ್ದಾರೆ. ಉಳಿದಂತೆ 6 ಮಂದಿ ಕರಡಿ, 3 ಮಂದಿ ಚಿರತೆ, ಇಬ್ಬರು ಮೊಸಳೆ, ಕಾಡು ಹಂದಿ ಹಾಗೂ ಕಾಡೆಮ್ಮೆ ದಾಳಿಯಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೂ ಹೆಚ್ಚಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಳೆಹಾನಿ ಪರಿಹಾರ ಹೆಚ್ಚಳಕ್ಕೂ ಪ್ರಸ್ತಾವನೆ: ವನ್ಯ ಪ್ರಾಣಿಗಳಿಂದ ಮಾನವನ ಮೇಲಿನ ದಾಳಿಗಿಂತಲೂ ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿ ವರ್ಷ ವನ್ಯಜೀವಿಗಳಿಂದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರಾಸರಿ 3,000 ಪ್ರಕರಣಗಳು ಅರಣ್ಯ ಇಲಾಖೆಗೆ ಬರುತ್ತಿವೆ. ಹೀಗಾಗಿ, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, ಬೆಳೆಹಾನಿ ಪ್ರಕರಣಗಳ ಪರಿಹಾರ ಧನವನ್ನು ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

ಕುಟುಂಬದಲ್ಲಿ ಒಬ್ಬರಿಗೆ ಕೆಲಸ ನೀಡಿ ಮಾನವೀಯತೆ ಸಾವಿಗೀಡಾದ ಕುಟುಂಬದ ಒಬ್ಬರಿಗೆ ಖಾಯಂ ದಿನಗೂಲಿ ಕೆಲಸ
ನೀಡುವ ಮೂಲಕ ಮಲೆಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ಮಾನವೀಯತೆ ಮೆರೆಯುತ್ತಿದ್ದಾರೆ. ಕುಟುಂಬಕ್ಕೆ ಆಧಾರ ಸ್ತಂಭ ವಾದ ವ್ಯಕ್ತಿ ಪ್ರಾಣಿದಾಳಿಗೆ ತುತ್ತಾದರೆ ಆ ವ್ಯಕ್ತಿಯ ಮಗನಿಗೆ ಅಥವಾ ಕುಟುಂಬ ಸದಸ್ಯರಿಗೆ ನಮ್ಮ ವಲಯದಲ್ಲಿ ಖಾಯಂ ದಿನಗೂಲಿ ಕೆಲಸ ನೀಡಲಾಗುತ್ತಿದೆ. ಇದರಿಂದ ಆ ಕುಟುಂಬಕ್ಕೆ ಹೆಚ್ಚಿನ ನೆರವು ಸಿಕ್ಕಂತಾಗುತ್ತದೆ, ಸಹಾನುಭೂತಿಯೂ ಹೆಚ್ಚಾಗುತ್ತದೆ. ಜತೆಗೆ ಗ್ರಾಮಸ್ಥರಿಗೂ ಇಲಾಖೆ ಕುರಿತು ನಂಬಿಕೆ ಬರುತ್ತದೆ ಎಂದು ಮಲೆಮಹಾದೇಶ್ವರ ವನ್ಯಜೀವಿಧಾಮ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ ತಿಳಿಸಿದರು.

ಪರಿಹಾರ ಧನ 10 ಲಕ್ಷ ರೂವರೆಗೆ ಏರಿಕೆಯಾದರೆ ಉಪಯುಕ್ತವಾಗಲಿದೆ.ಇದರ ಜತೆಗೆ ಬೆಳೆ ಹಾನಿ ಪರಿಹಾರವನ್ನು
ಮಾರುಕಟ್ಟೆ ದರಕ್ಕೆ ಹೆಚ್ಚಿಸಿದರೆ ಕಾಡಂಚಿನ ರೈತರಿಗೆ ಉಪಯೋಗವಾಗಲಿದೆ.
– ಸಂಜಯ್‌ ಗುಬ್ಬಿ, ವನ್ಯಜೀವಿ ತಜ್ಞ

ಪರಿಹಾರ ಧನ ಹೆಚ್ಚಳ ಕುರಿತು ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡು ಆರ್ಥಿಕ ಇಲಾಖೆಗೆಪ್ರಸ್ತಾವನೆ ಸಲ್ಲಿಸಿದ್ದೇವೆ. ಶೀಘ್ರದಲ್ಲಿಯೇ  ಅಂಗೀಕಾರವಾಗುವ ಸಾಧ್ಯತೆಯಿದೆ. ಇದರ ಜತೆಗೆ ಬೆಳೆ ಹಾನಿ ಪರಿಹಾರ ಹೆಚ್ಚಳಕ್ಕೂ ಸರ್ಕಾರ ಆಸಕ್ತಿ ತೋರಿದ್ದು, ಪ್ರಸ್ತಾವನೆ ಸಲ್ಲಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
– ಪುನಾಟಿ ಶ್ರೀಧರ್‌,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next