ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ “ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ ನಮ್ಮ ಸಂತತಿ ನಾಶವಾಗುವುದು ಖಚಿತ. ದಯಮಾಡಿ ನಮ್ಮನ್ನು ಕಾಪಾಡಿ ಉಳಿಸಿ’ ಎಂದು ಮೊರೆ ಇಟ್ಟಿತು. ಉಳಿದ ಪ್ರಾಣಿಗಳೆಲ್ಲ ಅದಕ್ಕೆ ದನಿಗೂಡಿಸಿದವು. ಅದಕ್ಕೆ ನರಿ ಒಂದು ಉಪಾಯ ಹೇಳಿತು. ವನರಾಜ ಸಿಂಹ ಅದಕ್ಕೆ ಒಪ್ಪಿಗೆ ಸೂಚಿಸಿತು. ಮರುದಿನ ಬೇಟೆಗಾರ ಮನೆಯಲ್ಲಿಲ್ಲದ ಸಮಯದಲ್ಲಿ ಆನೆ ಆತನ ಮನೆಯ ಬಳಿ ನಿಂತು ಗಿಳಿಟ್ಟಿತು. ಹೆದರಿದ ಮನೆಯವರು ಹೊರಕ್ಕೆ ಓಡಿಬಂದರು. ಇದನ್ನೇ ಕಾಯುತ್ತಿದ್ದ ಕರಡಿ ಮಾಮ ಅವರನ್ನೆಲ್ಲಾ ಕರೆದುಕೊಂಡು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವೆನೆಂದು ಹೇಳಿತು. ಮನೆಯವರೆಲ್ಲರೂ ಕರಡಿಯನ್ನು ಹಿಂಬಾಲಿಸಿದರು. ಅವರೆಲ್ಲರೂ ತೊರೆಯೊಂದರ ಬಳಿ ಬಂದರು. ಪೂರ್ವ ಯೋಜನೆಯಂತೆ ಆ ತೊರೆಯ ಸುತ್ತಲೂ ಇದ್ದ ಬಂಡೆಗಳ ಹಿಂಭಾಗದ ಪೊದೆಯೊಳಗೆ ಪ್ರಾಣಿಗಳೆಲ್ಲ ಅವಿತುಕೊಂಡಿದ್ದವು.
ಇತ್ತ ಬೇಟೆಗಾರನ ಕಣ್ಣಿಗೆ ಮುದ್ದಾದ ಜಿಂಕೆಮರಿ ಕಂಡಿತು. ಅವನು ತಡ ಮಾಡಲಿಲ್ಲ. ಸರಕ್ಕನೆ ಪಕ್ಕದ ಮರದ ಹಿಂದೆ ಅಡಗಿ ಬಿಲ್ಲಿಗೆ ಬಾಣ ಹೂಡಿದ. ಅಷ್ಟರಲ್ಲಿ ಇಡೀ ಅಡವಿಯೇ ನಡುಗುವಂತೆ “ನಿಲ್ಲು’ ಎಂಬ ಧ್ವನಿ ಹಿಂದಿನಿಂದ ಬಂದಿತು. ಬೇಟೆಗಾರ ಹಿಂದಕ್ಕೆ ತಿರುಗಿ ನೋಡಿದ. ಅಲ್ಲಿ ಕಾಡುಪ್ರಾಣಿಗಳ ದಂಡೇ ಇತ್ತು. ಅವುಗಳ ಜೊತೆ ಬೇಟೆಗಾರನ ಕುಟುಂಬವೂ ಇತ್ತು. ಬೇಟೆಗಾರ ಬಿಲ್ಲು ಬಾಣವನ್ನು ಎಸೆದು ತನ್ನ ಕುಟುಂಬದವರ ಬಳಿ ಓಡಿ ಬಂದ. ಅವರನ್ನು ಬಾಚಿ ತಬ್ಬಿದ.
ಬಂಡೆಮೇಲೆ ಕುಳಿತ ಸಿಂಹ ಒಂದೇ ನೆಗೆತಕ್ಕೆ ಅವನೆದುರು ಹಾರಿ ಬಂದು “ನೋಡಿದೆಯಾ? ನಿನಗೆ ನಿನ್ನವರ ಮೇಲೆ ಇರುಷ್ಟೇ ಕಾಳಜಿ ನಮಗೂ ನಮ್ಮವರ ಮೇಲಿದೆ’ ಎಂದಿತು. ಬೇಟೆಗಾರನಿಗೆ ಪ್ರಾಣಿಗಳ ಉಪಾಯ ಅರ್ಥವಾಯಿತು. ಅವನು ಕೈ ಜೋಡಿಸಿ “ನಾನು ಇನ್ನೆಂದೂ ಮೂಕಪ್ರಾಣಿಗಳ ಬೇಟೆ ಆಡುವುದಿಲ್ಲ. ನನ್ನನ್ನು ಕ್ಷಮಿಸಿ’ ಎಂದು ಹೇಳಿ ತನ್ನವರೊಂದಿಗೆ ಮನೆಯ ಕಡೆ ಪ್ರಯಾಣ ಬೆಳೆಸಿದ. ಬೇಟೆಗಾರನ ಮಾತು ಕೇಳಿ ಅಲ್ಲಿ ನರೆದ ಪ್ರಾಣಿಗಳೆಲ್ಲ ಕುಣಿದು ಕುಪ್ಪಳಿಸಿದವು.
– ಅರವಿಂದ ಜಿ. ಜೋಶಿ, ಮೈಸೂರು