Advertisement

ಖಾಕಿ ಸರ್ಪಗಾವಲಿನ ಮಧ್ಯೆಯೇ ಪ್ರಾಣಿ ಬಲಿ!

10:32 AM May 29, 2019 | Suhan S |

ಗದಗ: ಬೆಟಗೇರಿಯ ರೋಣ ರಸ್ತೆಯಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾ ದೇವಿ ಜಾತ್ರಾ ಮಹೋತ್ಸವದಲ್ಲಿ ಖಾಕಿ ಸರ್ಪಗಾವಲಿನ ಮಧ್ಯೆಯೇ ಪ್ರಾಣಿ ಬಲಿ ಸೇರಿದಂತೆ ಇನ್ನಿತರೆ ಅನಿಷ್ಠ ಆಚರಣೆಗಳು ನಿರಾತಂಕವಾಗಿ ಸಾಗಿದವು!

Advertisement

ಮೈಗೆ ಬೇವಿನ ಸೊಪ್ಪು ಸುತ್ತಿಕೊಂಡು ದೀಡ್‌ ನಮಸ್ಕಾರ ಹಾಕುವುದು, ಪ್ರಾಣಿ ಬಲಿ ನೀಡುವ ಅನಿಷ್ಠ ಹಾಗೂ ಅನಾಗರಿಕತೆಯ ಸಂಪ್ರದಾಯಗಳು ಇಂದಿಗೂ ಜೀವಂತವಾಗಿದೆ ಎನ್ನುವುದಕ್ಕೆ ಬೆಟಗೇರಿಯ ದಂಡಿನ ದುರ್ಗಾ ದೇವಿ ಜಾತ್ರೆ ಸಾಕ್ಷಿಯಾಯಿತು. ಅನಿಷ್ಠ ಪದ್ಧತಿಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಜಾತ್ರೆಯಲ್ಲಿ ಕಂಡೂ ಕಾಣದಂತೆ ಮೌನಕ್ಕೆ ಶರಣಾದರು.

ಪ್ರತೀ ವರ್ಷದಂತೆ ಬದಾಮಿ ಅಮಾವಾಸ್ಯೆಯಾದ ಮೊದಲ ಮಂಗಳವಾರದಂದು ಬೆಟಗೇರಿ ಸಮೀಪದ ದಂಡಿನ ದುರ್ಗಾದೇವಿ ಜಾತ್ರೆ ಸಂಭ್ರಮ-ಸಡಗರದಿಂದ ನಡೆಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗಿನಜಾವ ತಾಯಿ ದುರ್ಗಾದೇವಿಗೆ ಜಲಾಭಿಷೇಕ, ಕ್ಷೀರಾಭಿಷೇಕ ನೆರವೇರಿಸಲಾಯಿತು. ಬಳಿಕ ಹೂವಿನ ಅಲಂಕಾರ ಮಾಡಿ ದುರ್ಗಾ ಮಾತೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ರಾಜ್ಯದ ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಿಗೆ ಕುರಿ, ಕೋಳಿ ಬಲಿ ನೀಡಿ ಭಕ್ತಿ ಸಮರ್ಪಿಸಿದರು. ತಾವು ಇಳಿದಿದ್ದ ಸ್ಥಳದಿಂದ ದೇವಸ್ಥಾನದವರೆಗೆ ನೀರು ತುಂಬಿದ್ದ ಪ್ಲಾಸ್ಟಿಕ್‌ ಕೊಡಗಳನ್ನು ಹೊತ್ತುಕೊಂಡು ಪೂರ್ಣಕುಂಭ ಸೇವೆ ಸಲ್ಲಿಸಿದರು. ಈ ಮಧ್ಯೆ ಹಿರಿ-ಕಿರಿಯರೆಂಬ ಭೇದಭಾವವಿಲ್ಲದೇ ನೂರಾರು ಜನರು ಬೆಳಗ್ಗೆಯಿಂದ ಮಧ್ಯಾಹ್ನ 12ರ ವರೆಗೆ ಉರಿ ಬಿಸಿಲನ್ನೂ ಲೆಕ್ಕಿಸಿದೇ, ಉರುಳು ಸೇವೆ, ದೀಡ್‌ ನಮಸ್ಕಾರ ಹಾಕಿ ತಾಯಿಗೆ ಹರಕೆ ತೀರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

ದೇವರ ಹೆಸರಲ್ಲಿ ಪ್ರಾಣಿ ಬಲಿ:

Advertisement

ದಂಡಿನ ದುರ್ಗಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿ ಹಿಂಸೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ಅದರಂತೆ ಮಂಗಳವಾರವೂ ಜಾತ್ರೆ ಅಂಗವಾಗಿ ಭಕ್ತರು ದೇವಿಯ ಹೆಸರಲ್ಲಿ ನೂರಾರು ಆಡು, ಕುರಿ ಹಾಗೂ ಕೋಳಿಗಳನ್ನು ಬಲಿ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಕೋಳಿ, ಕುರಿಗಳನ್ನು ಬಲಿ ನೀಡಿದ್ದರಿಂದ ನೆತ್ತರು ಚೆಲ್ಲಿತ್ತು. ಇನ್ನೂ ಕೆಲವರು ತಾವು ಇಳಿದುಕೊಂಡಿದ್ದ ಜಾಗೆಯಲ್ಲೇ ದೇವರ ಹೆಸರಲ್ಲಿ ಬಲಿ ನೀಡಿದ್ದರು. ಅವುಗಳ ಮಾಂಸವನ್ನು ಬಟ್ಟೆಯಲ್ಲಿ ಸುತ್ತಿ ತಮ್ಮ ಟೆಂಟ್‌ಗಳಲ್ಲಿ ತೂಗು ಹಾಕಿದ್ದರು. ದೇವಸ್ಥಾನ ಮುಂಭಾಗದ ಖಾಲಿ ಜಮೀನುಗಳಲ್ಲಿ ಇಳಿದಿದ್ದ ಜನರು ಅಲ್ಲಲ್ಲಿ ಗುಂಡಿಗಳನ್ನು ತೋಡಿ, ಅದರಲ್ಲಿ ಕುರಿ, ಕೋಳಿಗಳ ಮಾಂಸದ ತ್ಯಾಜ್ಯವನ್ನು ಸುರಿದಿರುವುದು ಕಣ್ಣಿಗೆ ರಾಚುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next