ಚಿಕ್ಕಬಳ್ಳಾಪುರ: ಬರದಿಂದ ತತ್ತರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಕೂಡಲೇ ಪಶು ಆಹಾರವನ್ನು ಶೇ.50 ರಷ್ಟು ರಿಯಾಯಿತಿ ದರಲ್ಲಿ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಆಗ್ರಹಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಕೋಚಿಮುಲ್ ಉಪ ಶಿಬಿರ ಕಚೇರಿಯಲ್ಲಿ ತಾಲೂಕಿನ ಬಿಎಂಸಿ ಕೇಂದ್ರಗಳಿಗೆ ಹಾಗೂ ಎಂಪಿಸಿಎಸ್‌ಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಆರ್ಥಿಕ ನೆರವಿನ ಚೆಕ್ ವಿತರಿಸಿ ಮಾತನಾಡಿದ ಅವರು, ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಹೈನೋದ್ಯಮದಿಂದ ಉಸಿರಾಡುತ್ತಿದ್ದು, ಯಾವುದೇ ಶಾಶ್ವತ ನೀರಾವರಿ ಇಲ್ಲದ ಜಿಲ್ಲೆಗಳಿಗೆ ಸಮ್ಮಿಶ್ರ ಸರ್ಕಾರ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ವಿತರಿಸಬೇಕೆಂದು ಆಗ್ರಹಿಸಿದರು.
ಶೇ. 50 ರಿಯಾಯಿತಿ ನೀಡಲಿ: ಮಾರುಕಟ್ಟೆಯಲ್ಲಿ ಪಶು ಆಹಾರ ಬೆಲೆ ದುಪ್ಪಟ್ಟಾಗಿದೆ. ಮೂಟೆಗೆ 75 ರೂ. ಹೆಚ್ಚಳ ಆಗಿದೆ. ಬರದಿಂದ ಮೇವು, ಕುಡಿಯುವ ನೀರು ಒದಗಿಸಲು ಸಾಧ್ಯವಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಹಿತದೃಷ್ಟಿಯಿಂದ ಪಶು ಆಹಾರವನ್ನು ಕನಿಷ್ಠ ಶೇ.50 ರಷ್ಟು ರಿಯಾಯಿತಿ ದರದಲ್ಲಿ ನೀಡಬೇಕೆಂದು ಒತ್ತಾಯಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ನಿಭಾಯಿಸುವ ದಿಸೆಯಲ್ಲಿ ಕೋಚಿಮುಲ್ ಗಂಭೀರ ಚಿಂತನೆ ನಡೆಸಿದ್ದು, ರೈತರು ಮೇವು ಬೆಳೆಯಲು ಸರ್ಕಾರ ಮೂರು ಸಾವಿರ ರೂ. ಸಹಾಯಧನ ವಿತರಣೆ ಮಾಡಲಿದ್ದು, ಕೋಚಿಮುಲ್ ವತಿಯಿಂದ ಪ್ರತಿ ರೈತನಿಗೆ ಜೋಳ ಬೆಳೆಯಲು ಎರಡು ಸಾವಿರ ರೂ. ಪ್ರೋತ್ಸಾಹ ದನ ವಿತರಿಸಲಾಗುವುದು ಎಂದು ಕೆ.ವಿ.ನಾಗರಾಜ್ ಭರವಸೆ ನೀಡಿದರು.
ವಿವಿಧ ಸೌಲಭ್ಯಗಳ ವಿತರಣೆ: ಕಾರ್ಯಕ್ರಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ತಾಲೂಕಿನಲ್ಲಿ ನೂತನವಾಗಿ ಬಿಎಂಸಿ ಕೇಂದ್ರಗಳನ್ನು ಆರಂಭಿಸಲಾಗಿರುವ ರೇಣುಮಾಕಲಹಳ್ಳಿ, ದರಬೂರು, ಸೊಪ್ಪಳ್ಳಿ, ಗಂಗರೇಕಾಲುವೆ, ಅರೂರು ಮತ್ತು ಚಿಕ್ಕಪೈಯಲಗುರ್ಕಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ಒಂದು ಲಕ್ಷ ರೂ. ನೆರವಿನ ಚೆಕ್ ಹಾಗೂ ಹೊಸದಾಗಿ ನೂತನ ಕಟ್ಟಡ ನಿರ್ಮಿಸುತ್ತಿರುವ ತೌಡನಹಳ್ಳಿ ಡೇರಿಗೆ 2 ಲಕ್ಷ ರೂ. ನೆರವನ್ನು ಒಕ್ಕೂಟದ ನಿರ್ದೇಶಕರು ವಿತರಿಸಿದರು.
ಸಂಘಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಹಸುಗಳ ರಬ್ಬರ್ ಮ್ಯಾಟ್‌ಗಳನ್ನು ವಿತರಿಸಲಾಯಿತು. ಕೋಚಿಮುಲ್ ಉಪ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಪಾಪೇಗೌಡ, ಒಕ್ಕೂಟದ ಅಧಿಕಾರಿಗಳಾದ ಸದಾಶಿವ, ವೇಣು, ಸತ್ಯನಾರಾಯಣ, ಪ್ರಭಾಕರ್, ಎಂಪಿಸಿಎಸ್ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಬಿ.ನಾರಾಯಣಸ್ವಾಮಿ, ನಾಯನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.