ಮಂಗಳೂರು:ನಗರದ ಜೆಪ್ಪುವಿನ ರೋಶನಿ ನಿಲಯದ ವಠಾರದಲ್ಲಿ ಮೇ 27ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ಪ್ರಾಣಿ ರಕ್ಷಣಾ ಟ್ರಸ್ಟ್ (ಆ್ಯನಿಮಲ್ ಕೇರ್ ಟ್ರಸ್ಟ್ )ನಿಂದ ದೇಸಿ ನಾಯಿ ಮರಿ ಮತ್ತು ಬೆಕ್ಕಿನ ಮರಿಗಳ ದತ್ತು ಸ್ವೀಕಾರ ಕ್ಯಾಂಪ್ ನಡೆಯಲಿದೆ.
ಈಗಾಗಲೇ ಶಕ್ತಿನಗರದಲ್ಲಿರುವ ರಿಜಿಸ್ಟರ್ಡ್ ಸಂಸ್ಥೆಯಾಗಿರುವ ಆ್ಯನಿಮಲ್ ಕೇರ್ ಟ್ರಸ್ಟ್ ಮನ ಕಲಕುವ ಪರಿಸ್ಥಿತಿಯಲ್ಲಿದ್ದ ನಾಯಿಮರಿ, ಬೆಕ್ಕಿನ ಮರಿಗಳನ್ನು ರಕ್ಷಿಸಿ ಅವುಗಳ ಪಾಲನೆ, ಪೋಷಣೆ ಮಾಡುತ್ತಿದೆ. ಇದೀಗ ನಿಮ್ಮ ಸರದಿ ನೀವು ಕೂಡಾ ಭಾಗಿಯಾಗುವ ಮೂಲಕ ಇಂತಹ ಪ್ರಾಣಿಗಳಿಗೆ ನೆಮ್ಮದಿಯ ನಿಟ್ಟುಸಿರು ಬಿಡುವ ಆಶ್ರಯವನ್ನು ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾಣಿ ದತ್ತು ಸ್ವೀಕರಿಸಲು ಬೇರೆ ಯಾವುದೇ ಹೆಚ್ಚಿನ ಶುಲ್ಕವಿಲ್ಲ, ರಿಜಿಸ್ಟ್ರೇಶನ್ ಶುಲ್ಕ 200 ರೂಪಾಯಿ ಮಾತ್ರ ಪಾವತಿಸಬೇಕಾಗಿದೆ. ಅಲ್ಲದೇ ದತ್ತು ಸ್ವೀಕರಿಸುವವರು ಪ್ರಮಾಣೀಕೃತ ದಾಖಲೆಯನ್ನು ಹೊಂದಿರಬೇಕು. ಮಕ್ಕಳು ತಂದೆ,ತಾಯಿ ಅಥವಾ ಪೋಷಕರ ಜತೆ ಬರಬೇಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ವಿವರಿಸಿದೆ.
ಕಳೆದ 18 ವರ್ಷಗಳಿಂದ ಶಕ್ತಿನಗರದಲ್ಲಿ ಆ್ಯನಿಮಲ್ ಕೇರ್ ಟ್ರಸ್ಟ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಟ್ರಸ್ಟ್ ನಿರಂತರವಾಗಿ ಉಚಿತ ಆ್ಯಂಟಿ ರೇಬಿಸ್ ಲಸಿಕೆ ಕ್ಯಾಂಪ್ ಅನ್ನು ಆಯೋಜಿಸಿದೆ. ಇದರೊಂದಿಗೆ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಭಾನುವಾರ ದೇಸಿ ನಾಯಿಮರಿ, ಬೆಕ್ಕಿನ ಮರಿ ದತ್ತು ಸ್ವೀಕಾರ ಕ್ಯಾಂಪ್ ಅನ್ನು ಆಯೋಜಿಸಿದೆ ಎಂದು ತಿಳಿಸಿದೆ. ಬೀದಿಯಲ್ಲಿ ಹೆಚ್ಚಾಗಿ ಹೆಣ್ಣು ನಾಯಿ ಮರಿ, ಬೆಕ್ಕಿಮರಿಗಳು ಕಾಣಸಿಗುತ್ತಿವೆ. ಈ ರೀತಿ ಧ್ವನಿ ಇಲ್ಲದಂತಾಗಿರುವ ಅನಾಥ ಪ್ರಾಣಿಗಳು ರಸ್ತೆಯಲ್ಲಿ ನರಳುವಂತಾಗಬಾರದು..ಈ ಪ್ರಾಣಿಗಳಿಗೂ ಪ್ರೀತಿಸುವ ಕುಟುಂಬಗಳ ಉತ್ತಮ ಮನೆಯ ಹುಡುಕಾಟಕ್ಕಾಗಿ ದತ್ತು ಸ್ವೀಕಾರ ಕ್ಯಾಂಪ್ ನಡೆಸುತ್ತಿರುವುದಾಗಿ ಆ್ಯನಿಮಲ್ ಕೇರ್ ಟ್ರಸ್ಟ್ ನ ಟ್ರಸ್ಟಿ ಸುಮಾ ನಾಯಕ್ ತಿಳಿಸಿದ್ದಾರೆ.