ಪ್ರಾಣಿಪ್ರಿಯರು ಸಾಕುಪ್ರಾಣಿಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸುವ ಬದಲು, ದೇಶೀಯ ತಳಿಯ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ದತ್ತು ತೆಗೆದುಕೊಳ್ಳುವಂತಾಗಬೇಕು ಎನ್ನುವುದೇ ಅನಿಮಲ್ ಕೇರ್ ಟ್ರಸ್ಟ್ ನ ಧ್ಯೇಯವಾಗಿದೆ. ಈ ಉದ್ದೇಶಕ್ಕಾಗಿ, ಅನಿಮಲ್ ಕೇರ್ ಟ್ರಸ್ಟ್ ವಿವಿಧ ಕಡೆಗಳಲ್ಲಿ ದತ್ತು ಶಿಬಿರಗಳನ್ನು ನಡೆಸಿ, ಅನಾಥ ಸ್ಥಿತಿಯಲ್ಲಿರುವ ದೆಶೀ ತಳಿಯ ನಾಯಿ ಮತ್ತು ಬೆಕ್ಕುಗಳಿಗೆ ಪ್ರೀತಿ ತುಂಬಿದ, ಶಾಶ್ವತವಾದ ಮನೆಗಳ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಇದೇ ಬರುವ ಜುಲೈ 15ರ ಭಾನುವಾರದಂದು ನಗರದ ಕ್ಯಾಂಪ್ಲಾ ಕ್ರಾಸ್ ರಸ್ತೆ, ಅಲಕೆ ಮಂಗಳೂರು ಸಮೀಪದ ಬ್ಲೂ ಅಂಬ್ರೆಲ್ಲಾ ಶಾಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ನಡೆಯಲಿರುವ ಈ ಬೃಹತ್ ದತ್ತು ಸ್ವೀಕಾರ ಶಿಬಿರದಲ್ಲಿ 50 ಕ್ಕೂ ಹೆಚ್ಚಿನ ನಾಯಿಮರಿಗಳನ್ನು ಪ್ರಾಣಿಪ್ರಿಯರು ಪಡೆದುಕೊಳ್ಳಲು ಅವಕಾಶವನ್ನು ಮಾಡಿಕೊಡಲಾಗಿದೆ.
ದಾರಿ ತಪ್ಪಿದ, ಕಾಯಿಲೆಗೆ ಒಳಗಾದ ಮತ್ತು ತೊರೆದ ಪ್ರಾಣಿಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸಲು, 2000 ಇಸವಿಯಲ್ಲಿ ಅನಿಮಲ್ ಕೇರ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ದೇಶೀಯ ತಳಿಗಳನ್ನು ನಿರ್ಲಕ್ಷಿಸುವುದು ಮತ್ತು ದಾರಿಯಲ್ಲಿ ಬಿಟ್ಟುಬಿಡುವುದು ಹೆಚ್ಚಾಗಿರುವಾಗ, ಅನಿಮಲ್ ಕೇರ್ ಟ್ರಸ್ಟ್ ನವರು, ಈ ಪ್ರಾಣಿಗಳಿಗೆ ಪ್ರೀತಿಯಿಂದ ನೋಡಿಕೊಳ್ಳುವ ಮನೆಗಳನ್ನು ಹುಡುಕುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ನಾಯಿಮರಿಗಳನ್ನು ದತ್ತು ತೆಗೆದುಕೊಳ್ಳಲು ರೂ 200 ರೂಪಾಯಿಗಳ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ ರೇಬಿಸ್ ನಿರೋಧಕ ಲಸಿಕೆಯ ಶುಲ್ಕವೂ ಸೇರಿದೆ. ದತ್ತು ತೆಗೆದುಕೊಳ್ಳುವವರ ವಿಳಾಸದ ನಕಲು ಪ್ರತಿಯನ್ನು ನೀಡುವುದು ಅಗತ್ಯವಾಗಿರುತ್ತದೆ. ಅನಿಮಲ್ ಕೇರ್ ಟ್ರಸ್ಟ್ ನವರು ನೀವು ಅವರಿಂದ ದತ್ತು ತೆಗೆದುಕೊಂಡ ಪ್ರ್ರಾಣಿಯ ಯೋಗಕ್ಷೇಮದ ಬಗ್ಗೆ ಹಾಗೂ ಅದಕ್ಕೆ ಸಂತಾನ ಹರಣ ಚಿಕಿತ್ಸೆ ನೀಡುವುದರ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮನ್ನು ಸಂಪರ್ಕಿಸುತ್ತಿರುತ್ತಾರೆ.
ಅನಿಮಲ್ ಕೇರ್ ಟ್ರಸ್ಟ್ ಬಗ್ಗೆ …
ಅನಿಮಲ್ ಕೇರ್ ಟ್ರಸ್ಟ್, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟ ನೋಂದಾಯಿತ ಚಾರಿಟಬಲ್ ಟ್ರಸ್ಟ್ ಆಗಿದೆ. ಮಂಗಳೂರು ಮಹಾನಗರ ಪಾಲಿಕೆಗಾಗಿ ABC/ARVಯನ್ನು ಈ ಟ್ರಸ್ಟ್ ನಡೆಸುತ್ತದೆ ಮಾತ್ರವಲ್ಲದೇ ಮಂಗಳೂರು ಮಹಾನಗರ ಪಾಲಿಕೆಯು ಈ ಟ್ರಸ್ಟ್ ನ ಚಟುವಟಿಕೆಗಳಿಗೆ ಸೂಕ್ತ ಮಾನ್ಯತೆ ನೀಡಿ ಗುರುತಿಸಿದೆ.