ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಯಂತ್ರಣ ತಪ್ಪುವಷ್ಟು ಹೆಚ್ಚಾಗಿದೆ. ನೀರಿಗಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಮನುಷ್ಯರು ಹೋರಾಟವನ್ನಾದರೂ ಮಾಡಿ ನೀರು ಪಡೆಯುತ್ತಾರೆ. ಆದರೆ ಮಾತು ಬಾರದ ಪ್ರಾಣಿ, ಪಕ್ಷಿ ಸಂಕುಲ ನೀರಿಗಾಗಿ ಮೂಕರೋದನೆ ಮಾಡುತ್ತಿವೆ. ಇದನ್ನರಿತ ಕೆಲವರು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಹತ್ತಾರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಕೆರೆ ಕುಂಟೆಗಳು ತುಂಬುವಷ್ಟು ಮಳೆ ಸುರಿದಿಲ್ಲ. ಅಂತರ್ಜಲ ಒಂದೂವರೆಯಿಂದ ಎರಡು ಸಾವಿರ ಅಡಿಗಳಿಗೆ ಇಳಿದಿದೆ. ಇದರ ಪರಿಣಾಮ ನೀರಿನ ಆಸರೆಗಳೆಲ್ಲವೂ ಬತ್ತಿ ಬರಿದಾಗಿದೆ. ಜಿಲ್ಲೆಯಲ್ಲಿರುವ ಪ್ರಾಣಿ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿರುವುದು ದಿನ ನಿತ್ಯದ ದೃಶ್ಯವಾಗುತ್ತಿದೆ. ಇತ್ತೀಚಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಧಿಕಾರಿಯೊಬ್ಬರು ಕುಡಿಯುತ್ತಿದ್ದ ನೀರಿನ ಬಾಟಲ್ ಅನ್ನು ಕೋತಿಯೊಂದು ಕಸಿದುಕೊಂಡು ಕುಡಿದಿದ್ದು ಪ್ರಾಣಿಗಳು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ತಾಜಾ ಉದಾಹರಣೆಯಾಗಿತ್ತು.
ಜನರೇ ಪ್ರತಿ ಬಿಂದಿಗೆ ಕುಡಿಯುವ ನೀರನ್ನು ಹತ್ತರಿಂದ ಹದಿನೈದು ರೂ. ನೀಡಿ ಖರೀದಿಸುತ್ತಿರುವ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಗೋಳನ್ನು ಅರ್ಥ ಮಾಡಿಕೊಂಡಿರುವ ಕೆಲವು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಅವುಗಳ ದಾಹ ನೀಗುವ ಸಣ್ಣ ಪುಟ್ಟ ಕೆಲಸ ಮಾಡುತ್ತಿರುವುದು ಇತರರಿಗೂ ಅನುಕರಣೀಯವಾಗಿದೆ.
ಕೆಲವು ಮನೆಗಳ ತಾರಸಿಯಲ್ಲಿ ಪಾತ್ರೆಗಳಲ್ಲಿ ನೀರು ತುಂಬಿಟ್ಟು ದಾಹವನ್ನು ಕೊಂಚ ಮಟ್ಟಿಗಾದರೂ ನೀಗುವ ಪ್ರಯತ್ನ ಮಾಡುತ್ತಿದ್ದರೆ, ಕೆಲವರು ಉದ್ಯಾನವನಗಳಲ್ಲಿ ಮರಗಳಿಗೆ ಹಳೆಯ ಪ್ಲಾಸ್ಟಿಕ್ ಬಾಟಲ್‌ಗಳನ್ನು ತೂಗಿ ಬಿಟ್ಟು ನಿತ್ಯವೂ ನೀರು ತುಂಬಿಡುವ ಮೂಲಕ ದಾಹ ತೀರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೋಲಾರ ಕ್ರೀಡಾ ಕ್ಲಬ್ ಆಯೋಜಿಸಿದ್ದ ಬೇಸಿಗೆ ಶಿಬಿರವನ್ನು ರೈಲ್ವೆ ನಿಲ್ದಾಣದ ಸುತ್ತಮುತ್ತಲಿರುವ ಮರಗಳಿಗೆ ನೀರು ತುಂಬಿದ ಬಾಟಲ್‌ಗಳನ್ನು ತೂಗಿಬಿಟ್ಟು ಪ್ರಾಣಿ ಪಕ್ಷಿಗಳಿಗೆ ನೀರಿನ ಆಸರೆ ನೀಡುವ ಮೂಲಕ ಆರಂಭಿಸಲಾಯಿತು.
ಕೋಲಾರ ನಗರದ ಅಂತರಗಂಗೆ ಬೆಟ್ಟದಲ್ಲಿ ಸಾಕಷ್ಟು ಕೋತಿಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿದ್ದು, ಇದೀಗ ಅವುಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದನ್ನು ಅರಿತುಕೊಂಡಿರುವ ಕೆಲವು ಸಮಾಜ ಸೇವಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು ಬಾಳೆಹಣ್ಣು, ನೀರಿನ ಪಾಕೆಟ್‌ಗಳು ಹಾಗೂ ಬ್ರೆಡ್ ಇತ್ಯಾದಿಗಳನ್ನು ಕೋತಿಗಳಿಗೆ ಹಂಚುವ ಮೂಲಕ ಅವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಿಂದಲೂ ಕೆಲವು ವ್ಯಕ್ತಿಗಳು ನಿಯಮಿತವಾಗಿ ಆಹಾರ ತಂದು ಕೋತಿಗಳಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ವರ್ತೂರು ಮೂಲದ ರಮೇಶ್ ಎನ್ನುವರು 150 ಕೆಜಿ ಬಾಳೆಹಣ್ಣು, ಬ್ರೆಡ್ ಮತ್ತು ನೀರಿನ ಪಾಕೆಟ್‌ಗಳನ್ನು ಅಂತರಗಂಗೆ ಬೆಟ್ಟಕ್ಕೆ ಪ್ರತಿ ಮಂಗಳವಾರ ತಂದು ಕೋತಿಗಳಿಗೆ ಹಂಚುವ ಕಾರ್ಯವನ್ನು ಒಂದು ವರ್ಷದಿಂದ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.
ಹಿಂದಿನ ವರ್ಷಗಳಲ್ಲಿ ಅರಣ್ಯ ಇಲಾಖೆಯು ಕೋಲಾರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಅಲ್ಲಲ್ಲಿ ಸಿಮೆಂಟ್ ತೊಟ್ಟಿಗಳನ್ನು ಇಟ್ಟು ಅವುಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಿಟ್ಟು ಅರಣ್ಯ ವಾಸಿ ಪ್ರಾಣಿ ಪಕ್ಷಿಗಳಿಗೆ ನೀರು ಸಿಗುವಂತೆ ಮಾಡುತ್ತಿತ್ತು. ಆದರೆ, ಈ ಬಾರಿ ಅಂತ ಪ್ರಯತ್ನಗಳು ಕಂಡು ಬರುತ್ತಿಲ್ಲವಾದ್ದರಿಂದ ಅರಣ್ಯ ಇಲಾಖೆ ಪ್ರಾಣಿ ಪಕ್ಷಿಗಳ ದಾಹ ನೀಗಲು ಮುಂದಾಗಬೇಕೆಂದು ಸಾರ್ವಜನಿಕರು ಆಶಿಸುತ್ತಿದ್ದಾರೆ.