“ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಅನಿಲ್ ಮತ್ತು ಉದಯ್ ಇಬ್ಬರೂ ದುರ್ಮರಣಕ್ಕೀಡಾದ ನೆನಪು ಇನ್ನೂ ಮಾಸಿಲ್ಲ. ಅನಿಲ್ ಮತ್ತು ಉದಯ್ ಅವರ ದೇಹಗಳು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಪತ್ತೆಯಾಗುತ್ತಿದ್ದಂತೆಯೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮೃತರ ಕುಟುಂಬಗಳಿಗೆ ಧನಸಹಾಯ ಮಾಡಬೇಕೆಂದು ಮನವಿ ಸಲ್ಲಿಸಿದ್ದರು.
ಅಷ್ಟೇ ಅಲ್ಲ, ಎರಡೂ ಕುಟುಂಬಗಳಿಗೆ ತಲಾ ಐದು ಲಕ್ಷ ಹಣ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗ ಆ ಹಣ ಕೊನೆಗೂ ಅನಿಲ್ ಮತ್ತು ಉದಯ್ ಕುಟುಂಬದವರಿಗೆ ಸಂದಾಯವಾಗಿದೆ. ಸೋಮವಾರ ಸಂಜೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಅನಿಲ್ ಮತ್ತು ಉದಯ್ ಅವರ ಕುಟುಂಬಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಬೆಂಗಳೂರಿನ ಜಿಲ್ಲಾಧಿಕಾರಿ ಶಂಕರ್, ತೆಹಸೀಲ್ದಾರ್ ಶಿವಕುಮಾರ್ ಅವರು ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಮಂಡಳಿಯ ಕಾರ್ಯದರ್ಶಿ ಎಂ.ಜಿ. ರಾಮಮೂರ್ತಿ, ಉಪಾಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು. ಅನಿಲ್ ಅವರ ಸಹೋದರ ಅರುಣ್, ತಾಯಿ ವಿಜಯಲಕ್ಷ್ಮೀ, ಉದಯ್ ತಂದೆ ಕೌಸಲ್ಯ, ತಂದೆ ವೆಂಕಟೇಶ್ ಈ ಸಂದರ್ಭದಲ್ಲಿ ಚೆಕ್ ಸ್ವೀಕರಿಸಿದರು.
ತಾವು ಮಾಡಿದ ಮನವಿಗೆ ಸ್ಪಂದಿಸಿದ್ದಕ್ಕೆ ಮೊದಲು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಸಾ.ರಾ. ಗೋವಿಂದು, “ರಾಜ್ಯ ಸರ್ಕಾರವು ಕನ್ನಡ ಚಿತ್ರರಂಗದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದೆ. ಅನಿಲ್ ಮತ್ತು ಉದಯ್ ಅವರು ಮೃತರಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮೃತರ ಕುಟುಂಬಕ್ಕೆ ಧನ ಸಹಾಯ ಮಾಡುವಂತೆ ಕೋರಿದ್ದೆ. ಸರ್ಕಾರ ನಮ್ಮ ಬೇಡಿಕೆ ಸ್ಪಂದಿಸಿ, ನೊಂದ ಕುಟುಂಬದವರಿಗೆ ಚೆಕ್ ನೀಡಿದೆ. ಈ ಸಂದರ್ಭದಲ್ಲಿ ಚೆಕ್ ವಿತರಿಸುತ್ತಿದ್ದೇವೆ’ ಎಂದು ಅವರು ಹೇಳಿದರು.