Advertisement

ಕಾಣೆಯಾದವರ ಹಿಂದೆ ಬಂದ ಅನಿಲ್‌

09:02 AM Jul 12, 2019 | Lakshmi GovindaRaj |

ಕನ್ನಡದಲ್ಲೀಗ ದಿನ ಕಳೆದಂತೆ ಹೊಸಬಗೆಯ ಚಿತ್ರಗಳು ಶುರುವಾಗುತ್ತಿವೆ. ಅದರಲ್ಲೂ ಪ್ರಯೋಗಾತ್ಮಕ ಚಿತ್ರಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ ಎಂಬುದು ವಿಶೇಷ. ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳು ಗಮನಸೆಳೆಯುತ್ತಿವೆ ಎಂಬುದು ಮತ್ತೊಂದು ವಿಶೇಷ. ಅಂದಹಾಗೆ, ಹೊಸ ಪ್ರಯೋಗಕ್ಕೆ ಇಳಿದವರು ಹೊಸಬರಂತೂ ಅಲ್ಲ ಎಂಬುದು ನೆನಪಿರಲಿ.

Advertisement

ಹೌದು, ನಿರ್ದೇಶಕ ಅನಿಲ್‌ ಈಗ ಅಂಥದ್ದೊಂದು ಹೊಸ ಪ್ರಯೋಗದ ಸಿನಿಮಾಗೆ ಕೈ ಹಾಕಿದ್ದಾರೆ. ಅವರ ಪ್ರಯೋಗದ ಚಿತ್ರಕ್ಕೆ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಕಾಣೆಯಾದವರ ಕುರಿತಾದ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಈವರೆಗೆ ಕಮರ್ಷಿಯಲ್‌ ಚಿತ್ರಗಳ ಹಿಂದೆ ಇದ್ದ ಅನಿಲ್‌ , ಈ ಚಿತ್ರ ಮಾಡೋಕೆ ಕಾರಣ, ಕಥೆ.

ಅವರಿಗೆ ಆ ಕಥೆಯ ಎಳೆ ಹೊಳೆದದ್ದೇ ತಡ, ಚಿತ್ರ ಮಾಡೋಕೆ ಅಣಿಯಾಗಿದ್ದಾರೆ. ನವೀನ್‌ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ಚಿತ್ರ. ಇಲ್ಲಿ ನಾಯಕ, ನಾಯಕಿ ಅನ್ನುವುದೇನೂ ಇಲ್ಲ. ಚಿತ್ರದಲ್ಲಿ ಸುಮಾರು 65 ವರ್ಷ ವಯಸ್ಸಿನ ಪಾತ್ರಗಳೇ ಹೈಲೈಟ್‌. ಇಲ್ಲಿ ಮೂರು ಪಾತ್ರಗಳು ವಿಶೇಷವಾಗಿ ಕಾಣಿಸಿಕೊಳ್ಳಲಿವೆ.

ಆ ಕುರಿತು ಹೇಳಿಕೊಳ್ಳುವ ನಿರ್ದೇಶಕ ಅನಿಲ್‌, “ರವಿಶಂಕರ್‌, ರಂಗಾಯಣ ರಘು, ತಬಲನಾಣಿ ಪ್ರಮುಖ ಪಾತ್ರಧಾರಿಗಳು. ಅವರೆಲ್ಲರೂ ತಾತನ ಪಾತ್ರದಲ್ಲಿ ಮಿಂಚಲಿದ್ದಾರೆ. ಅವರಿಗೆ ಯಾರೂ ನಾಯಕಿಯರು ಇರುವುದಿಲ್ಲ. ಮೊದಲೇ ಹೇಳಿದಂತೆ ಇದು ಕಮರ್ಷಿಯಲ್‌ ಚಿತ್ರವಂತೂ ಅಲ್ಲ. ಹಾಫ್ಬೀಟ್‌ ಸಿನಿಮಾ ಇದಾಗಿದ್ದು, ಇಲ್ಲೊಂದಷ್ಟು ಸಸ್ಪೆನ್ಸ್‌ ಕೂಡ ಇದೆ.

ಅದರೊಂದಿಗೆ ಮಾನವೀಯ ಗುಣಗಳು ಚಿತ್ರದ ಹೈಲೈಟ್‌ ಆಗಿರಲಿವೆ. 1950, 70, 80 ರ ದಶಕ ಸೇರಿದಂತೆ 2019ರವರೆಗೆ ನಡೆಯುವ ವಿಷಯಗಳು ಇರಲಿವೆ. ಇಡೀ ಚಿತ್ರ ಹೊಸತನದೊಂದಿಗೆ ಸಾಗಲಿದೆ. ನೋಡುಗರಿಗೊಂದು ಆಪ್ತಭಾವ ಮೂಡಿಸುವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ ‘ ಎಂದು ವಿವರಿಸುತ್ತಾರೆ ನಿರ್ದೇಶಕ ಅನಿಲ್‌.

Advertisement

ಆಗಸ್ಟ್‌ 6 ರಿಂದ ಚಿತ್ರೀಕರಣ ಶುರುವಾಗಲಿದೆ. ಬ್ಯಾಂಕಾಕ್‌ನಲ್ಲಿ 20 ದಿನಗಳ ಮೊದಲ ಹಂತವನ್ನು ಮುಗಿಸಿಕೊಂಡು ಆ ನಂತರ ಇಲ್ಲಿ ಚಿತ್ರೀಕರಣ ಮಾಡಲಾಗುವುದು. ಚಿಕ್ಕಣ್ಣ ಕೂಡ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎರಡು ವಿಶೇಷ ಪಾತ್ರಗಳಿರಲಿದ್ದು, ಅದು ಇನ್ನೂ ಅಂತಿಮವಾಗಿಲ್ಲ ಎಂಬುದು ಅನಿಲ್‌ ಕೊಡುವ ವಿವರ. ಚಿತ್ರಕ್ಕೆ ಶಿವು ಛಾಯಾಗ್ರಹಣವಿದೆ.

ಅರ್ಜುನ್‌ ಜನ್ಯ ಸಂಗೀತ, ಕೆ.ಎಂ.ಪ್ರಕಾಶ್‌ ಸಂಕಲನ ಮಾಡಲಿದ್ದಾರೆ. ರವಿವರ್ಮ ಸಾಹಸವಿದೆ. ಅನಿಲ್‌ ಸದ್ಯಕ್ಕೆ “ದಾರಿ ತಪ್ಪಿದ ಮಗ’ ಚಿತ್ರವನ್ನು ಮುಗಿಸಿದ್ದಾರೆ. ಇನ್ನೊಂದು ಹಾಡು ಬಾಕಿ ಉಳಿದಿದ್ದು, ಅದನ್ನು ಇಷ್ಟರಲ್ಲೇ ಚಿತ್ರೀಕರಿಸುವ ಯೋಜನೆ ಅವರದು. ಅದಕ್ಕೂ ಮುನ್ನ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರ ಕೈಗೆತ್ತಿಕೊಂಡು, ಒಂದು ಹಂತ ಮುಗಿಸಿದ ನಂತರ “ದಾರಿ ತಪ್ಪಿದ ಮಗ’ ಚಿತ್ರದ ಕೆಲಸಕ್ಕೆ ಹೊರಡುವುದಾಗಿ ಹೇಳುತ್ತಾರೆ ಅನಿಲ್‌.

Advertisement

Udayavani is now on Telegram. Click here to join our channel and stay updated with the latest news.

Next