ಮುಂಬಯಿ: ಸೋಶಿಯಲ್ ಮೀಡಿಯಾ ಜನಪ್ರಿಯ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದ ಅಬ್ರದೀಪ್ ಸಹಾ (27) (ಆ್ಯಂಗ್ರಿ ರ್‍ಯಾಂಟ್‌ಮ್ಯಾನ್) ಬುಧವಾರ(ಏ.17 ರಂದು) ನಿಧನರಾಗಿದ್ದಾರೆ.
ಅವರ ನಿಧನದ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರ ಕುಟುಂಬಸ್ಥರು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಿಯಾನ್ ಮ್ಯಾನ್ ಶಾರ್ಟ್ಸ್ ಎನ್ನುವ ಯೂಟ್ಯೂಬರ್ ಅಬ್ರದೀಪ್ ಅವರ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಉಲ್ಲೇಖಿಸಿ ಸಹಾ ಅವರು ಶೀಘ್ರದಲ್ಲಿ ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಿದ್ದರು. ಆದರೆ ನಿಯಾನ್ ಮ್ಯಾನ್ ಈ ಪೋಸ್ಟ್ ಬಳಿಕ ಅಬ್ರದೀಪ್ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಹೊರಬಂದಿರಲಿಲ್ಲ. ಇದಾದ ಬಳಿಕ ಏ.15 ರಂದು ನಿಯಾನ್ ಅವರು ಅಬ್ರದೀಪ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದ್ದರು.
ಬೆಂಗಳೂರಿನ ನಾರಾಯಣ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು,ಕಳೆದ ತಿಂಗಳು ಅವರು ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಳಿಕ ಅವರು ಆಸ್ಪತ್ರೆಯಲ್ಲೇ ಇದ್ದರು. ಐಸಿಯುನಲ್ಲಿದ್ದ ಅವರು ಚೇತರಿಸಿಕೊಳ್ಳಲು ಪ್ರಾರ್ಥಿಸಿ ಎಂದು ಅವರ ತಂದೆ ಕೆಲ ದಿನಗಳ ಹಿಂದಷ್ಟೇ ಕೋರಿಕೊಂಡಿದ್ದರು.
ಯಾರು ಈ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್? : ಯೂಟ್ಯೂಬ್ ನಲ್ಲಿ ʼಆ್ಯಂಗ್ರಿ ರ್‍ಯಾಂಟ್‌ಮ್ಯಾನ್ʼ ಎಂದೇ ಫೇಮಸ್ ಆಗಿರುವ ಅಬ್ರದೀಪ್ ತನ್ನ ವಿಭಿನ್ನ ಕಂಟೆಂಟ್ ಕ್ರಿಯೇಷನ್ ನಿಂದಲೇ ಸಖತ್ ಜನಪ್ರಿಯತೆಯನ್ನು ಪಡೆದುಕೊಂಡವರು. ಅವರು ಹೆಚ್ಚಾಗಿ ಸಿನಿಮಾಗಳನ್ನು ನೋಡಿ ಶರ್ಟ್ ಬಿಚ್ಚಿ ತನ್ನ ಕೋಣೆಯಲ್ಲಿ ಸಿನಿಮಾದ ರಿವ್ಯೂ ಹೇಳುವ ಶೈಲಿ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿತ್ತು. ಅವರ ಸಿನಿಮಾದ ರಿವ್ಯೂಗಾಗಿಯೇ ಅನೇಕ ಜನರು ಕಾಯುತ್ತಿದ್ದರು. ಫುಟ್ ಬಾಲ್, ಕ್ರಿಕೆಟ್ ಹಾಗೂ ಸಿನಿಮಾದ ಬಗ್ಗೆ ಅವರು ಮಾಡುತ್ತಿದ್ದ ವಿಡಿಯೋಗಳು ವೈರಲ್ ಆಗುತ್ತಿತ್ತು.
ಅಬ್ರದೀಪ್ ಅವರು ಚೆಲ್ಸಿಯಾ ಫುಟ್ಬಾಲ್ ಕ್ಲಬ್ ನ ದೊಡ್ಡ ಅಭಿಮಾನಿಯಾಗಿದ್ದರು.ಪ್ರೀಮಿಯರ್ ಲೀಗ್ ಕ್ಲಬ್‌ನಲ್ಲಿ ಅವರ ‘ನೋ ಪ್ಯಾಶನ್, ನೋ ವಿಷನ್’ ಎನ್ನುವ ವಿಡಿಯೋವೊಂದು 2017 ರಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಿನಿಂದ ಕ್ರೀಡೆಗಳ ಕುರಿತು ಹಲವಾರು ಕಾಮೆಂಟರಿ ವೀಡಿಯೊಗಳನ್ನು ಮಾಡಿದ್ದರು.
ಅವರ ನಿಧನಕ್ಕೆ ಫುಟ್ ಬಾಲ್ ಕ್ಲಬ್ ಗಳಾದ ಬೆಂಗಳರೂ ಎಫ್ ಸಿ, ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಅವರ ಯೂಟ್ಯೂಬ್ ಚಾನೆಲ್ ನಲ್ಲಿ 4.81 ಲಕ್ಷ ಸಬ್ ಸ್ಕೈಬರ್ಸ್ ಗಳಿದ್ದರು.
ಅವರ ಅನಿರೀಕ್ಷಿತ ನಿಧನಕ್ಕೆ ಇಂಟರ್ ನೆಟ್ ಜಗತ್ತು ಶಾಕ್ ಆಗಿದೆ. ಅಪಾರ ಫಾಲೋವರ್ಸ್ ಗಳು ಆಘಾತಕ್ಕೆ ಒಳಗಾಗಿದ್ದಾರೆ.