“ಟಗರು ಚಿತ್ರದಲ್ಲಿ ಅಟಿಟ್ಯೂಡ್ ಇದ್ದರೂ ಅಲ್ಲಿ ಅಂಡರ್‌ಪ್ಲೇ ಜಾಸ್ತಿ ಇತ್ತು. ಆದರೆ, ಇಲ್ಲಿ ಹಾಗಲ್ಲ, ಹೈವೋಲ್ಟೆಜ್ ಅಟಿಟ್ಯೂಡ್ ಇದೆ…’ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ದೇಶಕ ರವಿವರ್ಮ ಅವರ ಮುಖ ನೋಡಿದರು ಶಿವರಾಜಕುಮಾರ್. ರವಿವರ್ಮ ಸಣ್ಣಗೆ ನಗು ಬೀರಿದರು. ಹಿಂದೆ ಹಾಕಿದ್ದ ಪೋಸ್ಟರ್‌ನಲ್ಲಿ “ರುಸ್ತುಂ’ ಎಂದು ದೊಡ್ಡದಾಗಿ ಬರೆದಿತ್ತು. ಇಷ್ಟು ಹೇಳಿದ ಮೇಲೆ ಶಿವರಾಜಕುಮಾರ್ ಹೇಳಿದ್ದು “ರುಸ್ತುಂ’ ಚಿತ್ರದ ಬಗ್ಗೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. “ರುಸ್ತುಂ’ ಇಂದು ತೆರೆಕಾಣುತ್ತಿದೆ. ಏಪ್ರಿಲ್‌ನಲ್ಲಿ ಶಿವರಾಜಕುಮಾರ್ ಅವರ “ಕವಚ’ ತೆರೆಕಂಡಿತ್ತು. ಈಗ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ “ರುಸ್ತುಂ’ ಬರುತ್ತಿದೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶಕರಾಗಿ ಬಿಝಿಯಾಗಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಸಿನಿಮಾವಿದು. ರವಿವರ್ಮ ನಿರ್ದೇಶನದ ಚಿತ್ರವೆಂದ ಮೇಲೆ ಆ್ಯಕ್ಷನ್ ಸ್ವಲ್ಪ ಹೆಚ್ಚಿರುತ್ತದೆ ಮತ್ತು ಭರ್ಜರಿಯಾಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹಾಗಂತ ಸಿನಿಮಾವನ್ನು ಬರೀ ಆ್ಯಕ್ಷನ್‌ಗೆ ಸೀಮಿತ ಮಾಡಿಲ್ಲವಂತೆ.
“ಚಿತ್ರದಲ್ಲಿ ಆ್ಯಕ್ಷನ್ ಇದೆ ನಿಜ. ಹಾಗಂತ ಅದರಾಚೆ ಸಾಕಷ್ಟು ವಿಷಯಗಳನ್ನು ರವಿವರ್ಮ ಹೇಳಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಕೂಡಾ ರವಿವರ್ಮ ಚೆನ್ನಾಗಿ ತೆಗೆದಿದ್ದಾರೆ. ತುಂಬಾ ಉದ್ದ ಎಳೆಯದೇ, ಮನಸ್ಸಿಗೆ ನಾಟುವಂತೆ ಚಿತ್ರೀಕರಿಸಿದ್ದಾರೆ’ ಎನ್ನುವ ಶಿವಣ್ಣ, ತಮ್ಮ ಪಾತ್ರದ ಬಗ್ಗೆಯೂ ಹೇಳುತ್ತಾರೆ. “ನನಗೆ ಮೊದಲಿನಿಂದಲೂ ಪೊಲೀಸ್ ಪಾತ್ರ ಎಂದರೆ ಏನೋ ಒಂದು ಜೋಶ್. ಈ ಚಿತ್ರದಲ್ಲಿ ತುಂಬಾ ಅಟಿಟ್ಯೂಡ್ ಇರುವ ಪೊಲೀಸ್ ಪಾತ್ರ ಸಿಕ್ಕಿದೆ. ಇಡೀ ಸಿನಿಮಾದುದ್ದಕ್ಕೂ ಆ ಅಟಿಡ್ನೂಡ್ ಸಾಗಿ ಬಂದಿದೆ.
ಟ್ರೇಲರ್ ನೋಡಿದಾಗ ನಿಮಗೆ ಗೊತ್ತಾಗಿರುತ್ತದೆ, “ನನಗೆ ಅರೆಸ್ಟ್ ಅಂದ್ರೆ ಅಲರ್ಜಿ, ಎನ್‌ಕೌಂಟರ್ ಎನರ್ಜಿ …’ ಈ ತರಹದ ಪವರ್‌ಫುಲ್ ಪಾತ್ರ. ಒಬ್ಬನ್ನು ಹೊಡೆಯುತ್ತೇನೆ ಎಂದರೆ ಯಾರೇ ಅಡ್ಡಬಂದರೂ ಹೊಡೆದುರುಳಿಸುವಂತಹ ಪಾತ್ರ. ಚಿತ್ರದಲ್ಲಿ ಬರುವ ಹಾಡುಗಳಿಗೆ, ಫೈಟ್‌ಗಳಿಗೆ ಒಂದೊಂದು ಕಾರಣವಿದೆ’ ಎನ್ನುವುದು ಶಿವರಾಜಕುಮಾರ್ ಅವರ ಮಾತು. “ರುಸ್ತುಂ’ನಲ್ಲಿ ಶಿವರಾಜ ಕುಮಾರ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರ ಬಿಡುಗಡೆಯ ಬೆನ್ನಲ್ಲೇ ಶಿವರಾಜಕುಮಾರ್ ಕೈ ನೋವಿನ ಟ್ರೀಟ್‌ಮೆಂಟ್‌ಗಾಗಿ ಲಂಡನ್‌ಗೆ ತೆರಳಲಿದ್ದಾರೆ. ಹಾಗಾಗಿ, ಈ ಬಾರಿಯ ಹುಟ್ಟುಹಬ್ಬಕ್ಕೂ ಶಿವರಾಜಕುಮಾರ್ ಬೆಂಗಳೂರಿನಲ್ಲಿ ಇರುವುದಿಲ್ಲ. ಅದು ಮುಗಿಸಿಕೊಂಡು ಬಂದು ಕೆಲವು ತಿಂಗಳು ವಿಶ್ರಾಂತಿ ಪಡೆದು ಮತ್ತೆ ಬಣ್ಣ ಹಚ್ಚಲಿದ್ದಾರೆ.
ಇನ್ನು, ಮೊದಲ ಬಾರಿಗೆ “ರುಸ್ತುಂ’ ಚಿತ್ರವನ್ನು ನಿರ್ದೇಶಿಸಿರುವ ರವಿವರ್ಮ ಎಕ್ಸೆ„ಟ್ ಆಗಿದ್ದಾರೆ. ಸಾಹಸ ನಿರ್ದೇಶಕರಾಗಿ ಗೆದ್ದಿರುವ ರವಿಗೆ ಈಗ ನಿರ್ದೇಶಕರಾಗಿ ಜನ ತಮ್ಮನ್ನು ಹೇಗೆ ಸ್ವೀಕರಿಸುತ್ತಾರೆಂಬ ಕಾತರವಿದೆ. “ಚಿತ್ರದಲ್ಲಿ ಒಂದು ಕಥೆ ಇದೆ. ಮುಖ್ಯವಾಗಿ ಈ ಚಿತ್ರ ಕರ್ನಾಟಕ ಹಾಗೂ ಬಿಹಾರದಲ್ಲಿ ನಡೆಯುತ್ತದೆ.
ಕಥೆ ಬಿಹಾರಕ್ಕೆ ಯಾಕೆ ಹೋಗುತ್ತದೆ ಎಂಬುದೇ ಸಸ್ಪೆನ್ಸ್. ಬಿಹಾರದ ದೃಶ್ಯಗಳು ಬರುವಾಗ ಅಲ್ಲಿನ ಭಾಷೆಯಲ್ಲೇ ಸಂಭಾಷಣೆ ಬರುತ್ತದೆ’ ಎನ್ನುತ್ತಾರೆ ರವಿವರ್ಮ. ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡಾ ನಟಿಸಿದ್ದಾರೆ. ಅವರು ಕೂಡಾ ಇಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಐದು ಫೈಟ್ ಒಂದು ಚೇಸಿಂಗ್ ಇದ್ದು, ಎಲ್ಲವೂ ಸನ್ನಿವೇಶಕ್ಕನುಗುಣವಾಗಿಯೇ ಮಾಡಲಾಗಿದೆ ಎಂಬುದು ರವಿವರ್ಮ ಮಾತು.
ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಹಿಟ್ ಆಗಿದ್ದು, ಈ ಮೂಲಕ ಅನೂಪ್ ಸೀಳೀನ್ ಅವರಿಗೆ ಕಮರ್ಷಿಯಲ್ ಬ್ರೇಕ್ ಸಿಕ್ಕಿದೆ. “ಅನೇಕರು ಯಾಕೆ ನೀವು ದೊಡ್ಡ ಸಿನಿಮಾ ಮಾಡಲ್ಲ, ಕಮರ್ಷಿಯಲ್ ಸಿನಿಮಾ ಮಾಡಲ್ಲ ಎಂದು ಕೇಳುತ್ತಿದ್ದರು. ಅದಕ್ಕೆಲ್ಲಾ ಉತ್ತರ ಈ ಸಿನಿಮಾ. ನಿರ್ದೇಶಕ ರವಿವರ್ಮ ಅವರ ಕಲ್ಪನೆಗೆ ತಕ್ಕಂತಹ ಹಾಡುಗಳನ್ನು ನೀಡಲು ಪ್ರಯತ್ನಿಸಿದ್ದೇನೆ’ ಎನ್ನುವುದು ಅನೂಪ್ ಸೀಳೀನ್ ಮಾತು. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಜಯಣ್ಣ -ಭೋಗೆಂದ್ರ ಈ ಚಿತ್ರದ ನಿರ್ಮಾಪಕರು.
ಮಸ್ತ್ ಮಸ್ತ್ ರುಸ್ತುಂ
ನನಗೆ ಮೊದಲಿನಿಂದಲೂ ಪೊಲೀಸ್ ಪಾತ್ರ ಎಂದರೆ ಏನೋ ಒಂದು ಜೋಶ್. ಈ ಚಿತ್ರದಲ್ಲಿ ತುಂಬಾ ಅಟಿಟ್ಯೂಡ್ ಇರುವ ಪೊಲೀಸ್ ಪಾತ್ರ ಸಿಕ್ಕಿದೆ. ಇಡೀ ಸಿನಿಮಾದುದ್ದಕ್ಕೂ ಆ ಅಟಿಡ್ನೂಡ್ ಸಾಗಿಬಂದಿದೆ.
-ಶಿವರಾಜಕುಮಾರ್
– ರವಿಪ್ರಕಾಶ್ ರೈ