ದೆಹಲಿ: ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಲು ವಿಳಂಬ ಮಾಡಿದ್ದಕ್ಕೆ ಪತ್ನಿಯೊಂದಿಗೆ ಜಗಳವಾಡಿದ ಪತಿಯೊಬ್ಬ ತನ್ನ ಮಗನಿಗೆ ಚಾಕುವಿನಿಂದ ಹಲ್ಲೆಗೈದಿರುವ ಘಟನೆ ದೆಹಲಿಯ ಮಧು ವಿಹಾರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಐಪಿ ಎಕ್ಸ್‌ಟೆನ್ಶನ್‌ನಲ್ಲಿ ತಮ್ಮ ಪತ್ನಿ ಮತ್ತು ಮಗ ಆದಿತ್ಯ ಸಿಂಗ್ ಅವರೊಂದಿಗೆ ವಾಸಿಸುತ್ತಿರುವ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕ ಅಶೋಕ್ ಸಿಂಗ್ (64) ಇತ್ತೀಚೆಗೆ ಹೊಸ ಫ್ಲ್ಯಾಟ್ ವೊಂದನ್ನು ಖರೀದಿಸಿದ್ದಾರೆ. ಇದೇ ವಿಚಾರವಾಗಿ ಹಣ ಪಾವತಿಸಬೇಕಿತ್ತು. ಈ ವೇಳೆ ಹಣ ವರ್ಗಾವಣೆ ಮಾಡಬೇಕು ಆ್ಯಪ್ ಡೌನ್ ಲೋಡ್ ಮಾಡಿಕೊಡು ಎಂದು ಪತ್ನಿ ಮಂಜು ಸಿಂಗ್ ಬಳಿ ಅಶೋಕ್ ಸಿಂಗ್ ಹೇಳಿದ್ದಾರೆ.
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಲು ಪತ್ನಿ ವಿಳಂಬ ಮಾಡಿದ್ದಕ್ಕೆ ಅಶೋಕ್ ಪತ್ನಿಯೊಂದಿಗೆ ಜಗಳಕ್ಕಿಳಿದಿದ್ದಾರೆ. ಈ ವೇಳೆ ಅಪ್ಪ – ಅಮ್ಮನ ಜಗಳ ನೋಡಿ ಮಗ ಆದಿತ್ಯ ಸಿಂಗ್ (23) ಮಧ್ಯ ಪ್ರವೇಶಿಸಿದ್ದಾನೆ. ಇದಕ್ಕೆ ಸಿಟ್ಟಾದ ತಂದೆ ಚಾಕುವಿನಿಂದ ಮಗನ ಎದೆಗೆ ಚುಚ್ಚಿ ಹಲ್ಲೆಗೈದಿದ್ದಾರೆ.
ಕೂಡಲೇ ಆದಿತ್ಯ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಅಶೋಕ್ ವಿರುದ್ಧ ಐಪಿಸಿಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.