Advertisement

ತಾಳ್ಮೆ ಕಳೆದುಕೊಂಡ “ಕ್ಯಾಪ್ಟನ್‌ ಕೂಲ್‌’

09:36 AM Apr 13, 2019 | keerthan |

ಜೈಪುರ: ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ “ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಆದರೆ ಗುರುವಾರದ ಪಂದ್ಯದಲ್ಲಿ “ಕ್ಯಾಪ್ಟನ್‌ ಕೂಲ್‌’ “ಆ್ಯಂಗ್ರಿಮ್ಯಾನ್‌’ ಆಗಿ ಬದಲಾಗಿದ್ದರು.

Advertisement

ಗುರುವಾರ ರಾತ್ರಿ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಎಸೆತದಲ್ಲಿ ಜಯ ಸಾಧಿಸಿ ಸಂಭ್ರಮಿಸಿತು. ಇದೇ ವೇಳೆ ಕ್ಯಾಪ್ಟನ್‌ ಕೂಲ್‌ ಭಾರೀ ಚರ್ಚೆಗೆ ಗುರಿಯಾದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ಭಾರೀ ಕಷ್ಟದಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 151 ರನ್‌ ದಾಖಲಿಸಿತು. ಚೆನ್ನೈ ಈ ಗುರಿಯನ್ನು ಸರಿಯಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 155 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್‌ ವೇಳೆ ಚೆನ್ನೈ ಕೂಡ ಆರಂಭಿಕ ಆಘಾತ ಅನುಭವಿಸಿತ್ತು. ಶೇನ್‌ ವಾಟ್ಸನ್‌, ಫಾ ಡು ಪ್ಲೆಸಿಸ್‌, ಸುರೇಶ್‌ ರೈನಾ, ಕೇದಾರ್‌ ಜಾಧವ್‌ ಒಂದಂಕಿಗೆ ಪೆವಿಲಿಯನ್‌ ಸೇರಿದರು. ಅನಂತರ ಅಂಬಾಟಿ ರಾಯುಡು (57), ನಾಯಕ ಧೋನಿ (58) ತಾಳ್ಮೆಯ ಆಟವಾಡಿ ಗೆಲುವಿನ ನಿರೀಕ್ಷೆ ಮೂಡಿಸಿದರು. ಕೊನೆಯ ಓವರ್‌ನಲ್ಲಿ ಧೋನಿ ಔಟಾದಾಗ ಪಂದ್ಯ ಚೆನ್ನೈ ಕೈತಪ್ಪುವ ಸಂಭವವಿತ್ತು. ಆದರೆ ಮಿಚೆಲ್‌ ಸ್ಯಾಂಟ್ನರ್‌ ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ತಂಡಕ್ಕೆ 7ನೇ ಜಯ ತಂದುಕೊಟ್ಟರು.

ಧೋನಿಗೆ ದಂಡ
ಕೊನೆಯ ಓವರ್‌ನಲ್ಲಿ ಧೋನಿ ತಾಳ್ಮೆ ಕಳೆದುಕೊಂಡ ಘಟನೆ ಸಂಭವಿಸಿದೆ. ಬೆನ್‌ ಸ್ಟೋಕ್ಸ್‌ ಎಸೆದ ಅಂತಿಮ ಓವರ್‌ನಲ್ಲಿ ಚೆನ್ನೈಗೆ 18 ರನ್‌ ಬೇಕಿತ್ತು. ಸ್ಟೋಕ್ಸ್‌ ಅವರ 4ನೇ ಎಸೆತ ನೋ ಬಾಲ್‌ ಆಗಿತ್ತು. ಅಂಪಾಯರ್‌ ಉಲ್ಲಾಸ್‌ ಗಾಂದೆ ನೋಬಾಲ್‌ ನೀಡಿದ್ದರು. ಆದರೆ ಲೆಗ್‌ ಅಂಪಾಯರ್‌ ನೋಬಾಲ್‌ ನೀಡಿರಲಿಲ್ಲ. ಈ ಸನ್ನಿವೇಶ ಎಲ್ಲರನ್ನೂ ಗೊಂದಲಕ್ಕೀಡು ಮಾಡಿತ್ತು. ಈ ಎಸೆತದಲ್ಲಿ ಚೆನ್ನೈಆಟಗಾರರು 2 ರನ್‌ ಕಸಿದಿದ್ದರು. ಜಡೇಜ ಈ ಕುರಿತು ಅಂಪಾಯರ್‌ಗಳನ್ನು ಪ್ರಶ್ನಿಸಿದ್ದರೂ ಯಾವುದೇ ಧನಾತ್ಮಕ ಉತ್ತರ ದೊರೆಯಲಿಲ್ಲ. ಆಗ ಬೌಂಡರಿ ಗೆರೆ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಧೋನಿ ಮೈದಾನಕ್ಕೆ ಓಡೋಡಿ ಬಂದು ಅಂಪಾಯರ್‌ಗಳ ಜತೆ ವಾಗ್ವಾದಕ್ಕಿಳಿದರು. ಆದರೆ ಧೋನಿ ಮಾತನ್ನು ಯಾರೂ ಒಪ್ಪಲಿಲ್ಲ. ಥರ್ಡ್‌ ಅಂಪಾಯರ್‌ ಕೂಡ ಮನವಿ ನಿರಾಕರಿಸಿದರು. ಧೋನಿ ತಾವು ಮಾಡಿರುವ ಎಡವಟ್ಟಿನಿಂದಾಗಿ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ತೆರಬೇಕಾಗಿದೆ. ಧೋನಿ ಅವರಿಗೆ ರಾಜಸ್ಥಾನ ವಿರುದ್ಧ ಪಂದ್ಯದ ವೇಳೆ ಐಪಿಎಲ್‌ನ ನಿಯಮ ಉಲ್ಲಂ ಸಿದ ಕಾರಣದಿಂದ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ’ ಎಂದು ಬಿಸಿಸಿಐ ಹೇಳಿದೆ.

ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ್‌ ರಾಯಲ್ಸ್‌- 7 ವಿಕೆಟಿಗೆ 151, ಚೆನ್ನೈ ಸೂಪರ್‌ ಕಿಂಗ್ಸ್‌-20 ಓವರ್‌ಗಳಲ್ಲಿ 6 ವಿಕೆಟಿಗೆ 155 (ಅಂಬಾಟಿ ರಾಯುಡು 57, ಧೋನಿ 58, ಬೆನ್‌ ಸ್ಟೋಕ್ಸ್‌ 39ಕ್ಕೆ 2, ಧವಳ್‌ ಕುಲಕರ್ಣಿ 14ಕ್ಕೆ 1).
ಪಂದ್ಯ ಶ್ರೇಷ್ಠ: ಎಂ.ಎಸ್‌. ಧೋನಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next